ಶನಿವಾರ, ಮೇ 21, 2022
20 °C

ಕೆರೆಯಲ್ಲಿ ಮುಳುಗಿ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್: ತಾಲ್ಲೂಕಿನ ಗಾಜರ ಕೋಟ ಗ್ರಾಮದ ಹೊರವಲಯದ ದೊಡ್ಡ ಕೆರೆಯಲ್ಲಿ ಮುಳುಗಿ ಬುಧವಾರ ಮಹೇಶ ಹೊನ್ನಪ್ಪ (16) ಎಂಬ ಬಾಲಕ ಮೃತಪಟ್ಟಿದ್ದಾನೆ.

‘ಕೆರೆಯಿಂದ ಹೊರತೆಗೆದು ಮಹೇಶನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ, ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಆತ ತಾಯಿಯ ಜಾಬ್ ಕಾರ್ಡ್‌ನ ಹೆಸರಿನಲ್ಲಿ ಕೆಲಸಕ್ಕೆ ಹೋಗಿದ್ದ. ಹೂಳೆತ್ತುವ ವೇಳೆ ಬಾಯಾರಿಕೆಯಿಂದ ಆತ ನೀರು ಕುಡಿಯಲು ಹೋಗಿದ್ದ ವೇಳೆ ಕೆರೆಯಲ್ಲಿ ಮುಳುಗಿ ಮೃತಪಟ್ಟ’ ಎಂದು ಸ್ಥಳೀಯರು ಆರೋಪಿಸಿದರು.

‘ಉದ್ಯೋಗ ಖಾತ್ರಿ ಕಾಮಗಾರಿಗೆ ಬಂದಿದ್ದ ಜಾಬ್ ಕಾರ್ಡ್‌ವುಳ್ಳವರು ಕೆಲಸ ಮುಗಿಸಿ ಮನೆಗೆ ಮರಳಿದ್ದಾರೆ. ಆ ಬಳಿಕ ಬಾಲಕ ಕೆರೆಗೆ ಈಜಲು ತೆರಳಿರಬಹುದು. ಆತ ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದಿರುವ ಬಗ್ಗೆ ಯಾವ ಮಾಹಿತಿಯೂ ಇಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್.ಖಾದ್ರೋಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ಷುಲ್ಲಕ ಕಾರಣಕ್ಕೆ ಜಗಳ; ಸಂಧಾನ

ಗುರುಮಠಕಲ್: ಎರಡು ಸಮುದಾಯದ ಯುವಕ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿ ಸಂಧಾನದಲ್ಲಿ ಅಂತ್ಯವಾಗಿದೆ.

ತಾಲ್ಲೂಕಿನ ಪುಟಪಾಕ ಗ್ರಾಮದಲ್ಲಿ ಈಚೆಗೆ ಎರಡು ಸಮುದಾಯಗಳ ನಡುವೆ ವಾಗ್ವಾದ ನಡೆದಿತ್ತು. ಘಟನೆ ಸಂಬಂಧ ಎರಡೂ ಸಮುದಾಯದ ಹಿರಿಯ ಮುಖಂಡರು ಗುರುಮಠಕಲ್ ಪೊಲೀಸ್ ಠಾಣೆಗೆ ಬಂದರು. ಸಿಆರ್‌ಪಿಸಿ 107 ಕಾಯ್ದೆ ಪ್ರಕಾರ ಮತ್ತೊಮ್ಮೆ ಈ ರೀತಿ ಜಗಳ ಮಾಡದಂತೆ ಪರಸ್ಪರ ದೃಢೀಕರಿಸಿಕೊಂಡು ತೆರಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ವ್ಯಾಪಾರ ಮಳಿಗೆಯಲ್ಲಿ ಕಳವು

ಶಹಾಪುರ: ನಗರದ ಕಿರಾಣಿ ಮತ್ತು ಎಲೆಕ್ಟ್ರಾನಿಕ್ ಮಳಿಗೆಯ ಶೆಟರ್ ಮುರಿದು ಹಣ ಕದ್ದ ಘಟನೆ ಈಚೆಗೆ ನಡೆದಿದೆ.

ಕಳ್ಳರು ಕಿರಾಣಿ ಅಂಗಡಿಯಿಂದ ₹30 ಸಾವಿರ ಹಾಗೂ ಎಲೆಕ್ಟ್ರಾನಿಕ್ ಮಳಿಗೆಯಿಂದ ₹5 ಸಾವಿರ ಕದ್ದೊಯ್ದಿದ್ದಾರೆ. ರಾತ್ರಿ ಮನೆಗೆ ತೆರಳುವಾಗ ಹಣ ತೆಗೆದುಕೊಂಡು ಹೋಗಿದ್ದರಿಂದ ಹೆಚ್ಚಿನ ಹಣ ಇಟ್ಟಿರಲಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ರಾತ್ರಿ ವೇಳೆ ಕಳ್ಳತನದ ಕೃತ್ಯಗಳು ಹೆಚ್ಚಾಗುತ್ತಿವೆ. ಗಸ್ತು ವ್ಯವಸ್ಥೆ ಹೆಚ್ಚಿಸಿ, ಸಿಸಿ ಟಿವಿ ಕ್ಯಾಮೆರಾಗಳನ್ನು ದುರಸ್ತಿಗೊಳಿಸಬೇಕು ಎಂದು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗುಂಡಪ್ಪ ತುಂಬಿಗಿ ಮನವಿ ಮಾಡಿದ್ದಾರೆ.

ಕಳವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀನಿವಾಸ ಅಲ್ಲಾಪುರ ತಿಳಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್; ಒಬ್ಬ ಬಂಧನ

ಶಹಾಪುರ: ತಾಲ್ಲೂಕಿನ ಹೊತಪೇಟ ಗ್ರಾಮದಲ್ಲಿ ಐಪಿಎಲ್‌ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನಿರತವಾಗಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಗ್ರಾಮದ ನಿವಾಸಿ ಈರಣ್ಣ ಖಂಡಪ್ಪ ಬಂಧಿತ ಆರೋಪಿ. ಆತನಿಂದ ₹17,600 ನಗದು, ಎರಡು ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಭೀಮರಾಯನಗುಡಿ ಠಾಣೆಯ ಪಿಎಸ್ಐ ಸುನೀಲ್ ರಾಠೋಡ ತಿಳಿಸಿದ್ದಾರೆ.

ಭೀಮರಾಯನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.