ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ

Last Updated 26 ಸೆಪ್ಟೆಂಬರ್ 2021, 4:06 IST
ಅಕ್ಷರ ಗಾತ್ರ

ಯಾದಗಿರಿ: ‘ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡದೆ ಅವರನ್ನು ರಕ್ಷಿಸಿ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗದಂತೆ ಪ್ರತಿಯೊಬ್ಬರು ಶ್ರಮಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಚೈಲ್ಡ್ ಲೈನ್ ಸಲಹಾ ಮಂಡಳಿ ಸಭೆಯಲ್ಲಿ ಆರ್‌ಟಿಇ ಕಾಯ್ದೆ, ಫೋಕ್ಸೋ ಕಾಯ್ದೆ, ಬಾಲನ್ಯಾಯ ಕಾಯ್ದೆಗಳ ಕುರಿತು ಚರ್ಚಿಸಿ ಅವರು ಮಾತನಾಡಿದರು.

ಮಕ್ಕಳು ದೇಶದ ನಿಜವಾದ ಸಂಪತ್ತು. ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಅವರ ರಕ್ಷಣೆ ಮತ್ತು ಪಾಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಮಕ್ಕಳ ಸಹಾಯವಾಣಿ ಸೇವೆಯ 1098 ಸಂಖ್ಯೆ ರಾಷ್ಟ್ರ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿದೆ. ಬಾಲ್ಯ ವಿವಾಹ, ಬಾಲಕಾರ್ಮಿಕರು, ಭಿಕ್ಷಾಟನೆ, ಮಕ್ಕಳ ಮಾರಾಟ, ಕಾಣೆಯಾದ ಮಕ್ಕಳು, ನಿರ್ಗತಿಕ ಮಕ್ಕಳು, ಬೀದಿ ಮಕ್ಕಳು, ವಲಸೆ ಮಕ್ಕಳು, ವಿಕಲ ಚೇತನ ಮಕ್ಕಳು, ಮಾದಕ ವಸ್ತುಗಳ ವ್ಯಸನಿ ಮಕ್ಕಳು, ಹಿಂಸೆ ಮತ್ತು ದೌರ್ಜನ್ಯಕ್ಕೆ ಒಳಗಾದ ಸಂಕಷ್ಟದಲ್ಲಿ ಸಿಲುಕಿರುವ, ರಕ್ಷಣೆ ಮತ್ತು ಪೋಷಣೆಗೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆಯ ಅಗತ್ಯ ಕಂಡುಬಂದರೇ ಈ ಸಂಖ್ಯೆಗೆ ಕರೆ ಮಾಡಬೇಕು. ಈ ಮೂಲಕ ಮಕ್ಕಳಿಗೆ ನೆರವಾಗಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೊಂದು ಉಚಿತ ದೂರವಾಣಿ ಸಂಖ್ಯೆಯಾಗಿದೆ. ಮಕ್ಕಳಾಗಲಿ ಅಥವಾ ಸಾರ್ವಜನಿಕರಾಗಲಿ ಕರೆಮಾಡುವ ಮೂಲಕ ತುರ್ತು ನೆರವು ಅಗತ್ಯವಿರುವ ಮಕ್ಕಳಿಗೆ ರಕ್ಷಣೆ ಒದಗಿಸಬಹುದು ಎಂದರು.

ಬಾಲ್ಯ ವಿವಾಹದ ಕಾನೂನು ಉಲ್ಲಘಿಸಿ ಮಕ್ಕಳ ವಿವಾಹಕ್ಕೆ ಮುಂದಾದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಬಾಲ್ಯ ವಿವಾಹ ಜರಗುವ ಜಿಲ್ಲೆಯ ಎಲ್ಲ ದೇವಸ್ಥಾನ, ಕಲ್ಯಾಣ ಮಂಟಪಗಳಲ್ಲಿ ಆಯೋಜಕರಿಗೆ ಬಾಲ್ಯವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ನಾಮಫಲಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಸಂಕಷ್ಟದಲ್ಲಿರುವ ಮಕ್ಕಳ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗೆ ಹಾಗೂ ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ಪಡೆಯಲು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಒದಗಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಮಕ್ಕಳನ್ನು ಆಟೊ, ಟ್ಯಾಕ್ಸಿ ಇತ್ಯಾದಿ ವಾಹನಗಳಲ್ಲಿ ಕೂಲಿ ಕೆಲಸಕ್ಕಾಗಿ ಸಾಗಿಸುತ್ತಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಜಿಲ್ಲೆಯಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಮೇಲೆ, ಎಲ್ಲ ಶಾಲೆ, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳ ಕಟ್ಟಡ ಮತ್ತು ವಸತಿ ನಿಲಯಗಳ ಗೋಡೆಗಳ ಮಕ್ಕಳ ಸಹಾಯವಾಣಿ -1098 ಗೋಡೆ ಬರಹ ಮತ್ತು ಜಾಹೀರಾತು ಫಲಕ, ಸ್ಟಿಕ್ಕರ್ ಮತ್ತು ಪೋಸ್ಟರ್ ಅಂಟಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪ್ರಭಾಕರ್ ಕವಿತಾಳ, ಶಿಕ್ಷಣ ಇಲಾಖೆ ಡಿಡಿಪಿಐ ಶಾಂತಗೌಡ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ್, ಆರ್‌ಸಿಎಚ್‌ಒ ಡಾ.ಲಕ್ಷ್ಮಿಕಾಂತ ಒಂಟಿಪೀರ, ಮಕ್ಕಳ ಸಹಾಯವಾಣಿ ನಿರ್ದೇಶಕ ಫಾ.ಪ್ರವೀಣ್ ಕೆ.ಜೆ., ಯಾದಗಿರಿ ಸಹಾಯವಾಣಿ ಸಂಯೋಜಕ ಶರಬಯ್ಯ ಎಸ್ ಕಲಾಲ್, ಕ್ರೀಮ್ ಯೋಜನೆ ಸಂಯೋಜಕ ಶರಣಪ್ಪ ಸಿ ಅಮಾರಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT