ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರವಾಸೋದ್ಯಮ ಟಾಸ್ಕ್‌ಫೋರ್ಸ್‌ ರಚಿಸಿ’

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಸಕ್ಕರೆ ಇಲಾಖೆಯ ಪ್ರಗತಿ ಪರಿಶೀಲನೆ
Last Updated 7 ನವೆಂಬರ್ 2019, 10:32 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿ ಬಿಟ್ಟುಹೋದ ಪ್ರವಾಸಿ ತಾಣಗಳನ್ನು ಗುರುತಿಸಲು ತಜ್ಞರನ್ನೊಳಗೊಂಡ ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ರಚಿಸಿ, ಸಮಗ್ರ ಯೋಜನೆ ತಯಾರಿಸಿ ವರದಿ ಸಲ್ಲಿಸಬೇಕು’ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಕ್ಕರೆ ಸಚಿವ ಸಿ.ಟಿ.ರವಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಪ್ರಾಚ್ಯವಸ್ತು ಇಲಾಖೆಗಳ ಹಾಗೂ ಸಕ್ಕರೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‘ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಅವಶ್ಯವಿರುವ ಶೌಚಾಲಯ, ಕುಡಿಯುವ ನೀರು ಒದಗಿಸಬೇಕು. ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದಂತಹ ವಾಟರ್ ಸ್ಪೋರ್ಟ್ಸ್, ಸೌಂಡ್ ಮತ್ತು ಲೈಟ್, ಮಕ್ಕಳ ಪಾರ್ಕ್ ಸೇರಿದಂತೆ ಕೈಗೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ಪಟ್ಟಿ ಮಾಡಿ ಸಮಿತಿ ಸಭೆಯಲ್ಲಿ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಬೇಕು. ನಂತರ ಡಿಸೆಂಬರ್ ತಿಂಗಳೊಳಗೆ ಪ್ರಸ್ತಾವನೆ ಸಲ್ಲಿಸಬೇಕು. ವಿವರವಾದ ಅಂದಾಜುವೆಚ್ಚ ಸದ್ಯಕ್ಕೆ ಬೇಡ. ಒಪ್ಪಿಗೆ ನೀಡಿದ ನಂತರ ವಿಸ್ತೃತವಾದ ಅಂದಾಜು ಪತ್ರಿಕೆ ತಯಾರಿಸಿಕೊಳ್ಳಿ’ ಎಂದು ನಿರ್ದೇಶಿಸಿದರು.

‘ಪ್ರವಾಸಿ ತಾಣಗಳಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಣಕ್ಕೆ ತಕ್ಕಂತೆ ಯೋಜನೆ ರೂಪಿಸುವ ಬದಲಿಗೆ ನಿಜವಾದ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸಬೇಕು. ನಂತರದಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳುತ್ತಾ ಹೋಗಬೇಕು. ಬಾಕಿ ಇರುವ ಕಾಮಗಾರಿಗಳನ್ನು ಏಜೆನ್ಸಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಅವರು ತಾಕೀತು ಮಾಡಿದರು.

‘ಯಾದಗಿರಿ ಜಿಲ್ಲೆಯು ಭೌಗೋಳಿಕವಾಗಿ, ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಅತ್ಯಂತ ಸಂಪದ್ಭರಿತವಾಗಿದೆ. ಕೋಟೆ, ವಾಸ್ತುಶಿಲ್ಪ, ದೇವಸ್ಥಾನ, ನೈಸರ್ಗಿಕ ತಾಣ, ಜಲಾಶಯಗಳಿವೆ. ಶಿರವಾಳದ ಪಂಚಕೂಟ ದೇವಾಲಯವನ್ನು ರಾಜ್ಯ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿ ತಾಣಗಳ ನಿರ್ವಹಣೆಗೆ ತೊಂದರೆಯಾದಲ್ಲಿ ಸ್ಥಳೀಯರೊಂದಿಗೆ ಗ್ರಾಮ ಮಟ್ಟದ ಸಮಿತಿ ರಚಿಸಿ. ಪ್ರವಾಸಿ ತಾಣಗಳನ್ನು ಸುಸ್ಥಿಯಲ್ಲಿಟ್ಟುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಯಾದಗಿರಿ ಕೋಟೆಯನ್ನು ಸರ್ವೇ ಮಾಡಿಸಬೇಕು. ಬಾಕಿ ಪ್ರವಾಸಿ ಟ್ಯಾಕ್ಸಿಗಳ ವಿತರಣೆಯಲ್ಲಿರುವ ಸಮಸ್ಯೆಗಳನ್ನು2 ತಿಂಗಳಲ್ಲಿ ಪರಿಹರಿಸಬೇಕು’ ಎಂದು ಸೂಚಿಸಿದರು.

ಶಾಸಕ ನರಸಿಂಹ ನಾಯಕ (ರಾಜೂಗೌಡ) ಮಾತನಾಡಿ, 169 ವರ್ಷಗಳ ಹಿಂದೆ ಬೆಟ್ಟದ ಮೇಲೆ ಬ್ರಿಟಿಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೈಲರ್ ಈ ಟೇಲರ್ ಮಂಜಿಲ್ ಅನ್ನು ನಿರ್ಮಿಸಿದರು. ಶಬ್ದ ಮತ್ತು ಗಾಳಿಯ ಒತ್ತಡದ ವಿನೂತನ ತಾಂತ್ರಿಕ ನೈಪುಣ್ಯತೆಯನ್ನು ಹೊಂದಿದೆ. ಒಂದು ಬಾಗಿಲು ತೆರೆದರೆ ಎಲ್ಲಾ ಬಾಗಿಲುಗಳು ತೆರೆದುಕೊಳ್ಳುತ್ತವೆ. ಸದ್ಯ ಟೇಲರ್ ಮಂಜಿಲ್ ಪ್ರವಾಸಿ ಮಂದಿರವಾಗಿದ್ದು, ಇದನ್ನು ವಸ್ತು ಸಂಗ್ರಹಾಲಯ ಮಾಡಬೇಕು ಎಂದು ಒತ್ತಾಯಿಸಿದರು.

ಬಾಕಿ ಹಣ ನೀಡುವವರೆಗೆ ಕಬ್ಬುನುರಿಸುವಂತಿಲ್ಲ:

‘ತುಮಕೂರು ಕೋರ್‌ ಗ್ರೀನ್ ಕಾರ್ಖಾನೆಗೆ ಸಕ್ಕರೆ ಪೂರೈಸಿದ ರೈತರಿಗೆ ಬಾಕಿ ಹಣ ನೀಡುವವರೆಗೆ ಪ್ರಸಕ್ತ ವರ್ಷದಲ್ಲಿ ಕಬ್ಬುನುರಿಸುವುದನ್ನು ಆರಂಭಿಸುವಂತಿಲ್ಲ. ತೂಕದಲ್ಲಿ ಮತ್ತು ಇಳುವರಿಯಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ ಎಂಬುದು ರೈತರ ದೂರಾಗಿದೆ. ಈ ಬಗ್ಗೆ ನಿಗಾವಹಿಸಿ, ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ್ ಅವರಿಗೆ ಸಚಿವ ರವಿ ಸೂಚಿಸಿದರು.

ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲಿಸಿದ ಸಚಿವರು,‘ಸಂಘ-ಸಂಸ್ಥೆಗಳಿಗೆ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ನಿವೇಶನ ಇಲ್ಲವಾದಲ್ಲಿ ಹತ್ತಿರದ ಹೆಚ್ಚು ಮಕ್ಕಳಿರುವ ಶಾಲೆಗೆ ಬಯಲು ರಂಗಮಂದಿರಗಳ ನಿರ್ಮಾಣಕ್ಕೆ ಸದರಿ ಸಹಾಯಧನ ಬಳಸಿಕೊಳ್ಳಬಹುದು. ನವೆಂಬರ್ ತಿಂಗಳೊಳಗೆ ನಿವೇಶನ ಒದಗಿಸಬೇಕು. ಜಿಲ್ಲಾ ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಕೂಡ ಹಾಕಿಸುವಂತೆ’ ನಿರ್ದೇಶಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಜನೀಕಾಂತ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಗೋಪಾಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

*****

ರಾಜಕೀಯ ಹಿಂಬಾಲಕರಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಬೇಡಿ. ನಿಜವಾದ ಫಲಾನುಭವಿಗೆ ನೀಡಬೇಕು. ನೀಡಿದರೆ ಕ್ರಮಕೈಗೊಳ್ಳಲಾಗುವುದು.

ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT