ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲ ಮತದಾರರ ಬಗ್ಗೆ ಗಮನಹರಿಸಿ

ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಡಾ. ಜೆ.ರವಿಶಂಕರ್ ಸೂಚನೆ
Last Updated 13 ಡಿಸೆಂಬರ್ 2018, 13:27 IST
ಅಕ್ಷರ ಗಾತ್ರ

ಯಾದಗಿರಿ: ‘ಮತದಾನ ಹೆಚ್ಚಳ ಆಗಬೇಕು ಎಂದರೆ ಜಿಲ್ಲೆಯಲ್ಲಿನ ಅಂಗವಿಕಲ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು. ಮತದಾನಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಅವರಿಗೆ ಸೌಕರ್ಯ ಕಲ್ಪಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು’ ಎಂದು ಎಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಡಾ. ಜೆ.ರವಿಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಧಾನಸಭಾ, ಲೋಕಸಭಾ ಚುನಾವಣೆಯ ಪರಿಷ್ಕೃತ ಮತದಾರರ ಪಟ್ಟಿಯ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಒಟ್ಟು 8,457 ಅಂಗವಿಕಲ ಮತದಾರರು ಇದ್ದಾರೆ. ಇವರು ಸಂಪೂರ್ಣವಾಗಿ ಮತಚಲಾಯಿಸುವ ಅಭಿಲಾಷೆ ಹೊಂದಿದ್ದರೂ, ಮತಗಟ್ಟೆ ತಲುಪಲು ಸೌಕರ್ಯ ಇಲ್ಲದೇ ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಚುನಾವಣಾ ಆಯೋಗ ಮನದಾನ ಹೆಚ್ಚು ಮಾಡುವಂತೆ ಆನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರೂ, ಮತದಾನ ಹೆಚ್ಚಳ ಪ್ರಮಾಣ ವೃದ್ಧಿಸಿಲ್ಲ. ಅಂಗವಿಕಲರನ್ನು ಸಮೀಪದ ಮತಗಟ್ಟೆಯಲ್ಲಿ ಮತದಾನಕ್ಕೆ ವಿಶೇಷ ಸೌಕರ್ಯ ಕಲ್ಪಿಸಿರುವುದರ ಕುರಿತು ಮೊದಲೇ ಪ್ರಚಾರ ಕಾರ್ಯಕೈಗೋಳ್ಳುವುದರಿಂದ ಮತದಾನ ಹೆಚ್ಚಿಸಬಹುದು’ ಎಂದು ಸಲಹೆ ನೀಡಿದರು.

‘ವಲಸಿಗರು, ಅಲೆಮಾರಿಗಳು, ಬುಡಕಟ್ಟು ಸಮುದಾಯಗಳಲ್ಲಿ ಮತದಾನ ಕುರಿತು ಈಗಲೂ ಅರಿವು ಇರುವುದಿಲ್ಲ. ಅಂತಹವರಿಗೆ ಮತದಾನ ಕುರಿತು ಸ್ವೀಪ್‌ ಅರಿವು ಮೂಡಿಸುವ ಕೆಲಸ ಮಾಡಬೇಕು. ವಿಶೇಷವಾಗಿ ಕುಗ್ರಾಮಗಳನ್ನು ಗುರುತಿಸಿ ಅಲ್ಲಿ ಮತದಾರರ ಪಟ್ಟಿ ನೋಂದಣಿ ಕುರಿತು ಗಮನ ಹರಿಸಬೇಕು. ನೆಲಮಟ್ಟದಲ್ಲಿ ಈ ಕೆಲಸ ಮಾಡುವಂತೆ ಬಿಎಲ್‌ಒಗಳಿಗೆ ಸೂಚಿಸಬೇಕು’ ಎಂದು ಅಧಿಕಾರಿಗಳ ಗಮನ ಸೆಳೆದರು.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2019ರ ಜ.1ರ ಅರ್ಹತಾ ದಿನಾಂಕದಂತೆ ವಿಧಾನಸಭಾ ಕ್ಷೇತ್ರಗಳ ಮತದಾರರ ಭಾವಚಿತ್ರ ಒಳಗೊಂಡ ಪಟ್ಟಿಯನ್ನು ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದೆ. ಮತದಾರರ ಪಟ್ಟಿಯ ಬಗ್ಗೆ ಬಂದಂತಹ ದೂರು, ಆಕ್ಷೇಪಣೆಗಳ ಪರಿಶೀಲನೆ ನಡೆಯುತ್ತಿದ್ದು, ಡಿ.31ರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 2019ರ ಜ. 15ರಂದು ಮತದಾರರ ಭಾವಚಿತ್ರವಿರುವ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು . ಅ.10ರಿಂದ ನ.25ರವರೆಗೆ ಜಿಲ್ಲೆಯಾದ್ಯಂತ ಒಟ್ಟು 18,245 ಹೊಸ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದರು.

‘ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಮತದಾರರ ಸೇರ್ಪಡೆಗಾಗಿ ಆನ್‌ಲೈನ್ ಮತ್ತು ನೇರವಾಗಿ ಅರ್ಜಿ ನಮೂನೆ 6ರಲ್ಲಿ 4,056 ಅರ್ಜಿಗಳು ಬಂದಿವೆ. ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ 4,589, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ 5,295 ಮತ್ತು ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ 4,305 ಸೇರಿದಂತೆ ಒಟ್ಟು 18,245 ಅರ್ಜಿಗಳು ಬಂದಿವೆ’ ಎಂದು ತಿಳಿಸಿದರು.

‘ಪಟ್ಟಿಯಿಂದ ಮತದಾರರ ಹೆಸರು ತೆಗೆದು ಹಾಕಲು ಅರ್ಜಿ ನಮೂನೆ 7ರಲ್ಲಿ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ 13,420 ಅರ್ಜಿಗಳು ಬಂದಿವೆ. ಅರ್ಜಿ ನಮೂನೆ ೮ರಲ್ಲಿ ತಿದ್ದುಪಡಿಗಾಗಿ 2,918 ಅರ್ಜಿ ಬಂದರೆ, ಒಂದು ಬೂತ್‌ನಿಂದ ಮತ್ತೊಂದು ಬೂತ್‌ಗೆ ಸ್ಥಳಾಂತರಕ್ಕಾಗಿ ಅರ್ಜಿ ನಮೂನೆ 8ಎ ನಲ್ಲಿ 415 ಅರ್ಜಿಗಳು ಸ್ವೀಕೃತವಾಗಿವೆ’ ಎಂದು ವಿವರಿಸಿದರು.

ಬಿಎಲ್‌ಎ ನೇಮಿಸಲು ಮನವಿ: ಚುನಾವಣಾ ಪೂರ್ವ ಅಧಿಕಾರಿಗಳು ನಡೆಸುವ ಪ್ರಕ್ರಿಯೆಯಲ್ಲಿಯೂ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಅಗತ್ಯ’ ಹಾಗಾಗಿ, ಎಲ್ಲಾ ರಾಜಕೀಯ ಪಕ್ಷದವರು ಬೂತ್ ಲೆವೆಲ್ ಏಜೆಂಟ್ (ಬಿಎಲ್‌ಎ)ರನ್ನು ನೇಮಕ ಮಾಡುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿಖರ ಮಾಹಿತಿ ಪಡೆಯಲು ಬೂತ್ ಲೆವೆಲ್ ಆಫಿಸರ್(ಬಿಎಲ್‌ಒ)ಗಳಿಗೆ ಸಹಕರಿಸಬೇಕು ಎಂದು ಡಾ. ಜೆ.ರವಿಶಂಕರ್ ಹೇಳಿದರು.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 629, ಕಾಂಗ್ರೆಸ್ 744 ಜೆಡಿಎಸ್ 334 ಬೂತ್ ಲೆವೆಲ್ ಏಜೆಂಟ್‌ರನ್ನು ಈಗಾಗಲೇ ನೇಮಕ ಮಾಡಿದ್ದಾರೆ. ಉಳಿದ ಬೂತ್‌ಗಳಲ್ಲಿಯೂ ಕೂಡ ಎಲ್ಲಾ ರಾಜಕೀಯ ಪಕ್ಷದವರು ತಮ್ಮ ಬಿಎಲ್‌ಎ ಅವರನ್ನು ನೇಮಕ ಮಾಡಬೇಕು ಎಂದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮಾತನಾಡಿ, ‘ಜಿಲ್ಲೆಯಲ್ಲಿ ಈ ಬಾರಿ 8ಮತದಾನ ಕೇಂದ್ರಗಳನ್ನು ಹೆಚ್ಚಿಸಲಾಗಿದ್ದು, ಮತಗಟ್ಟೆಗಳ ಸಂಖ್ಯೆ 1,135 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 4,87,799 ಪುರುಷ ಮತದಾರರು, 4,87,215 ಮಹಿಳಾ ಮತದಾರರು ಸೇರಿದಂತೆ ಒಟ್ಟು 9,75,014 ಮತದಾರರಿದ್ದಾರೆ’ ಎಂದು ತಿಳಿಸಿದರು.

‘ಯಾವುದೇ ಮತದಾರರು ಎರಡು ಕಡೆ ಹೆಸರು ನೋಂದಾಯಿಸಿಕೊಂಡು ಮುಂದುವರಿದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯ 1950ರ ಕಲಂ 31ರನ್ವಯ ದಂಡನಾ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಮತದಾರರ ಪಟ್ಟಿಗಳಲ್ಲಿ ಎರಡು ಕಡೆ ಹೆಸರು ನೋಂದಣಿಯಾಗಿದ್ದಲ್ಲಿ ಯಾವುದಾದರೂ ಒಂದು ದಾಖಲೆಯನ್ನು ನಮೂನೆ ೭ರ ಮೂಲಕ ಅರ್ಜಿ ಸಲ್ಲಿಸಲು ಪ್ರಕಟಣೆ ಹೊರಡಿಸಿ, ಹೆಸರು ತೆಗೆದು ಹಾಕಲು ಅವಕಾಶ ನೀಡಲಾಗಿತ್ತು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸ್ವೀಪ್ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಉಪ ವಿಭಾಗಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್ ವಿ.ಕುಲಕರ್ಣಿ, ಚುನಾವಣೆ ಶಾಖೆಯ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶರಣಪ್ಪ ಪಾಟೀಲ್, ಜೆಡಿಎಸ್ ಶಾಂತಪ್ಪ ಜಾಧವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT