ಶುಕ್ರವಾರ, ಮೇ 14, 2021
31 °C
17 ರಂದು ದೇವತ್ಕಲ್ ಗ್ರಾಮದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ

ದಲಿತರ ಕಾಲೋನಿಗೆ ಭೇಟಿ ನೀಡಿದ ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಇದೇ ಏಪ್ರಿಲ್ 17 ರಂದು ಕಂದಾಯ ಸಚಿವ ಆರ್.ಅಶೋಕ್ ಅವರು ಗ್ರಾಮ ವಾಸ್ತವ್ಯ ಕೈಗೊಳ್ಳಲಿದ್ದು, ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕಂದಾಯ ಇಲಾಖೆ ಆಯೋಜಿಸಿರುವ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲೆಯ ದೇವತ್ಕಲ್ ಗ್ರಾಮದಲ್ಲಿ ಎಲ್ಲಾ ರೀತಿಯಲ್ಲಿ ತಯಾರಿ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಹೇಳಿದರು.

ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರಣದಿಂದ ಶುಕ್ರವಾರ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಮೂಲ ಸೌಕರ್ಯಗಳ ಕುರಿತು ಗ್ರಾಮಸ್ಥರ ಜೊತೆಗೆ ಚರ್ಚಿಸಿ ನಂತರ ಅವರು ಮಾತನಾಡಿದರು.

ಸಚಿವರ ಭೇಟಿ ವೇಳೆ ಫಲಾನುಭವಿಗಳಿಗೆ ಕಂದಾಯ ಇಲಾಖೆ ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ, ವಿಧವಾ ವೇತನ, ವಿಕಲಚೇತನರಿಗೆ ಕೃತಕ ಕೈ ಕಾಲು, ಶ್ರವಣ ಸಾಧನ, ವೀಲ್ಹ್ ಚೇರ್, ವಾಟರ್ ಬೆಡ್, ಭೂ ಮಾಪನ ಇಲಾಖೆಯಿಂದ ಪೋಡಿ ಮುಕ್ತ ಗ್ರಾಮದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

681 ಅರ್ಜಿಗಳು ಸ್ವೀಕಾರ 633 ಅರ್ಜಿಗಳ ವಿಲೇವಾರಿ:
ಸಚಿವರ ಗ್ರಾಮ ವಾಸ್ತವ್ಯ ಕಾರಣದಿಂದ ಏ.1 ರಿಂದ ಗ್ರಾಮಸ್ಥರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಕಂದಾಯ, ಗ್ರಾಮ ಪಂಚಾಯಿತಿ, ಆಹಾರ, ಲೋಕೋಪಯೋಗಿ, ಭೂ ಮಾಪನ, ಕೃಷಿ, ತೋಟಗಾರಿಕೆ, ಶಿಕ್ಷಣ, ಪಶುಸಂಗೋಪನೆ, ವಿಕಲಚೇತನ ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದ 691 ಅರ್ಜಿಗಳನ್ನು ಗ್ರಾಮಸ್ಥರು ಸಲ್ಲಿಸಿದ್ದಾರೆ. ಇವುಗಳಲ್ಲಿ 633 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಮಟ್ಟದಲ್ಲಿ ಅರ್ಜಿಗಳು ಬಂದಿವೆ ಎಂದು ಹೇಳಿದರು.

ಗ್ರಾಮದಲ್ಲಿ ಹಬ್ಬದ ವಾತಾವರಣ:
ಸಚಿವರ ಭೇಟಿ ಕಾರಣದಿಂದ ಎಲ್ಲಾ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟು ವ್ಯವಸ್ಥೆ ಕೈಗೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಹಬ್ಬದ ವಾತಾವರಣವಿದೆ. ಗ್ರಾಮಸ್ಥರು ಹಾಗೂ ಹೆಣ್ಣು ಮಕ್ಕಳು ಪೂರ್ಣ ಕುಂಭದೊಂದಿಗೆ ಸಚಿವರನ್ನು ಬರ ಮಾಡಿಕೊಳ್ಳುವರು. ಗ್ರಾಮದ ಆರಾಧ್ಯ ದೈವ ಮಾನಶಪ್ಪ ಮುತ್ಯಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಎಸ್ಸಿ, ಎಸ್ಟಿ ಕಾಲೋನಿಗೆ ಭೇಟಿ ನೀಡಿ ಜನರ ಕುಂದು-ಕೊರತೆಗಳನ್ನು ಆಲಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳಲು ತಂತ್ರಾಂಶ ರೂಪಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳಲ್ಲಿ ಶೇ 100 ರಷ್ಟನ್ನೂ ವಿಲೇವಾರಿ ಮಾಡಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್, ಉಪವಿಭಾಗಧಿಕಾರಿ ಶಂಕರಗೌಡ ಸೋಮನಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ್ ಕವಿತಾಳ, ಸುರಪುರ ತಾಲ್ಲೂಕಿನ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಶೀಲ್ದಾರ್ ವಿನಯ್ ಕುಮಾರ್ ಪಾಟೀಲ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಭಾವಿಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ, ವಿಷಯ ನಿರ್ವಾಹಕ ಶಿವಶರಣರ ರೆಡ್ಡಿ ದೇಸಾಯಿ, ಪಿಡಿಒ ವೆಂಕೋಬ ಬಾಕ್ಲಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

***

ಗ್ರಾಮಸ್ಥರಿಂದ ದೇವತ್ಕಲ್ ಗ್ರಾಮದಲ್ಲಿ ಪಿಯು ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಬಂದಿದ್ದು, ಮುಂದಿನ ದಿನಗಳಲ್ಲಿ ಕಾಲೇಜು ಸ್ಥಾಪನೆಗೆ ಆದ್ಯತೆ ನೀಡಲಾಗುತ್ತದೆ

ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.