ಪ್ರೋತ್ಸಾಹ–ಗೌರವಧನ ಬಿಡುಗಡೆಗೆ ಆಗ್ರಹ

7
ಆಶಾ ಕಾರ್ಯಕರ್ತೆಯರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಪ್ರೋತ್ಸಾಹ–ಗೌರವಧನ ಬಿಡುಗಡೆಗೆ ಆಗ್ರಹ

Published:
Updated:
Deccan Herald

ಯಾದಗಿರಿ: ಮಾಸಿಕ ಗೌರವಧನ ಮತ್ತು ಕೇಂದ್ರದ ಪ್ರೋತ್ಸಾಹ ಧನ ಬಾಕಿ ಸೇರಿದಂತೆ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಆಶಾ ಕಾರ್ಯಕರ್ತೆಯರ ಜಿಲ್ಲಾ ಸಂಘದ ಅಧ್ಯಕ್ಷೆ ಡಿ. ಉಮಾದೇವಿ ಮಾತನಾಡಿ,‘ಆಶಾ ಕಾರ್ಯರ್ತೆಯರು ನಗರ ಮತ್ತು ಗ್ರಾಮೀಣ ಪ್ರದೇಶದ ಬಡ ಜನರ ನಡುವೆ ಆರೋಗ್ಯ ಜಾಗ್ರತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರ ಆಶಾ ಕಾರ್ಯರ್ತೆಯರ ಕೆಲಸಕ್ಕೆ ತಕ್ಕಂತೆ ಗೌರವಧನ ಮಾತ್ರ ನೀಡುತ್ತಿಲ್ಲ. ಹಲವು ತಿಂಗಳುಗಳಿಂದ ಬಾಕಿ ಇರುವ ಎನ್ಎಚ್‌ಎಂ ಪ್ರೋತ್ಸಾಹಧನ ಮತ್ತು ರಾಜ್ಯ ಸರ್ಕಾರದ ₹ 3,500 ಮಾಸಿಕ ಗೌರವಧನ ಕೂಡಲೇ ಪಾವತಿಸಬೇಕು’ ಎಂದು ಆಗ್ರಹಿಸಿದರು.

‘ಗೌರವಧನ ನೀಡುವಲ್ಲಿ ಸರ್ಕಾರ ಈಗ ಹೆಚ್ಚುವರಿ ಕೆಲಸ ಮಾಡಿಸಲು ಹೊರಟಿದೆ. ಪ್ರತಿ ತಿಂಗಳು ಎರಡು ಕ್ಷಯ ರೋಗಿಗಳನ್ನು ಚಿಕಿತ್ಸೆಗೆ ತರುವಂತೆ ಸೂಚಿಸಲಾಗಿದೆ. ಜತೆಗೆ ಇಲಾಖೆಯಲ್ಲಿ ಕ್ಲೇಮ್ ಅರ್ಜಿ ಸ್ವೀಕರಿಸುತ್ತಿಲ್ಲ. ವಿನಾಕಾರಣ ಆಶಾ ಕಾರ್ಯಕರ್ತೆಯರ ಮೇಲೆ ಕರ್ತವ್ಯ ಲೋಪ ಕುರಿತು ದೂರುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಇದೆಲ್ಲಾ ನಿಲ್ಲಬೇಕು. ಇಲ್ಲದಿದ್ದರೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.

‘ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಮತ್ತು ಗೌರವಧನವನ್ನು ಯಾವುದೇ ಕಡಿತ ಮಾಡದಂತೆ ಬಿಡುಗಡೆಗೊಳಿಸಬೇಕು. ಅವರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಹೊಸದಾಗಿ ನೇಮಕವಾದ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ಕೂಡಲೇ ಪಾವತಿಸಬೇಕು. ಯಾವುದೇ ಸಭೆ, ತರಬೇತಿ, ಮತ್ತಿತರ ಕೆಲಸಗಳಿಗೆ ಕಾರ್ಯಕರ್ತೆಯರನ್ನು ಆಹ್ವಾನಿಸಿದಾಗ ಆ ದಿನದ ಭತ್ತ ನೀಡಬೇಕು. ವಿವಿಧ ಸರ್ವೆಗಳಿಗೆ ನಿಗದಿಯಾದ ಹಣವನ್ನು ವಿಳಂಬ ಮಾಡದೇ ನೀಡಬೇಕು’ ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

‘2017ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಮಾಸಿಕ ₹1,000 ವಿಶೇಷ ಗೌರವಧನ ಕೂಡ ಸರ್ಕಾರ ಬಾಕಿ ಉಳಿಸಿಕೊಂಡಿದೆ. ವಿಶೇಷ ಗೌರವಧನವನ್ನು ಪ್ರತಿ ತಿಂಗಳು 5ರೊಳಗಾಗಿ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಘಟಕ ಅಧ್ಯಕ್ಷ ಕೆ.ಸೋಮಶೇಖರ್, ಆಶಾ ಕಾರ್ಯಕರ್ತೆಯರಾದ ಉಷಾರಾಣಿ, ಸೈಯದಬೀ, ಗಿರಿಜಮ್ಮ, ಶಾಂತಮ್ಮ, ನಿರ್ಮಲಾ, ನಾಗಮ್ಮ, ಮಲ್ಲಮ್ಮ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !