ಭಾನುವಾರ, ಸೆಪ್ಟೆಂಬರ್ 26, 2021
21 °C
₹9.85 ಲಕ್ಷ ವೆಚ್ಚದಲ್ಲಿ ನಿರ್ಮಾಣ; ಜಾನುವಾರುಗಳಿಗೆ ಅನುಕೂಲ

ಬಳಿಚಕ್ರ: ನರೇಗಾ ಅಡಿ ಗೋಕಟ್ಟೆ ಅಭಿವೃದ್ಧಿ

ಮಲ್ಲಿಕಾರ್ಜುನ.ಬಿ ಅರಿಕೇರಕರ್ Updated:

ಅಕ್ಷರ ಗಾತ್ರ : | |

Prajavani

ಬಳಿಚಕ್ರ (ಸೈದಾಪುರ): ಸಮೀಪದ ಬಳಿಚಕ್ರ ಗ್ರಾಮದಲ್ಲಿ ನರೇಗಾ ಕಾಮಗಾರಿ ಮೂಲಕ ಗೋಕಟ್ಟೆ ನಿರ್ಮಿಸಲಾಗಿದೆ. 

ನೀರಿನ ಅವಶ್ಯಕತೆ ಹೆಚ್ಚಿರುವುದರಿಂದ ಗ್ರಾಮದ ಹೊರಭಾಗದ ಸಿದ್ದಯ್ಯನ ಬೆಟ್ಟದಲ್ಲಿ 150X150 ಅಡಿ ಉದ್ದ-ಅಗಲದ ಬೃಹತ್ ಗೋಕಟ್ಟೆಯನ್ನು ರಾಷ್ಟ್ರೀಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ₹9.85 ಲಕ್ಷ ವೆಚ್ಚ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಿಂದ ಜಾನುವಾರುಗಳು ಹಾಗೂ ಪಕ್ಷಿಗಳಿಗೆ ಅನೂಕೂಲವಾಗಲಿದೆ.

ಬರಡು ನೆಲದಲ್ಲಿ ಜೀವಜಲ ಸಂಗ್ರಹದ ಗುರಿ: ಗ್ರಾಮದ ಸಿದ್ಧಯ್ಯನ ಬೆಟ್ಟದ ಕೆಳಭಾಗದಲ್ಲಿನ ಜಾಗ ಬರಡು ನೆಲವಾಗಿತ್ತು. ಕೇವಲ ಅರಣ್ಯ ಇಲಾಖೆಯ ಸಸಿಗಳನ್ನು ನಾಟಿ ಮಾಡುವುದಕ್ಕೆ ಸುಮಾರು ಹತ್ತು ಎಕರೆ ಪ್ರದೇಶದಷ್ಟು ಜಾಗ ಖಾಲಿ ಬಿಡಲಾಗಿತ್ತು. ಈ ಸ್ಥಳದಲ್ಲಿ ಗ್ರಾಮದ ಜನರು ಕುರಿ, ಮೇಕೆ, ಜಾನುವಾರುಗಳನ್ನು ಮೇಯಿಸಲು ಹೋದರೆ ಒಂದೇ ಹನಿ ನೀರು ಸಿಗುತ್ತಿರಲ್ಲಿಲ್ಲ. ಇಂತಹ ಬರ ಪ್ರದೇಶವನ್ನು ವೀಕ್ಷಿಸಿದ ನರೇಗಾ ಸಹಾಯಕ ನಿರ್ದೇಶಕ ಮತ್ತು ಪಿಡಿಒ ಸರ್ವೇ ನಂ.112ರಲ್ಲಿ ಒಂದು ಗೋಕಟ್ಟೆ ನಿರ್ಮಿಸಿದರೆ ಎಲ್ಲರಿಗೂ ಅನೂಕೂಲವಾಗುತ್ತದೆ ಎನ್ನುವ ಮಹಾದಾಸೆಯಿಂದ ಗೋಕಟ್ಟೆ ನಿರ್ಮಾಣಕ್ಕೆ ಪಿಡಿಒ ಅನುಮೋದನೆ ನೀಡಿ ಕಾಮಗಾರಿ ಪ್ರಾಂಭಿಸಿದರು.

ತಪ್ಪಿದ ಗುಳೆ: ಸರ್ಕಾರದ ಒಂದು ಯೋಜನೆಯಿಂದ ಎರಡು ಉದ್ದೇಶಗಳು ಯಶಸ್ವಿಯಾಗಿವೆ. ಒಂದೆಡೇ ಗೋಕಟ್ಟೆ ನಿರ್ಮಾಣದಿಂದ ಪ್ರಾಣಿ, ಪಕ್ಷಿಗಳಿಗೆ ನೀರು ಒದಗಿಸಿದೆ. ಮತ್ತೊಂದಡೆ ಗ್ರಾಮದಿಂದ ಕೆಲಸ ಹುಡುಕಿಕೊಂಡು ಪಕ್ಕದ ತೆಲಂಗಾಣ, ಬೆಂಗಳೂರುಗೆ ಗುಳೆ ಹೋಗುವ ನೂರಾರು ಕೂಲಿ ಕಾರ್ಮಿಕರಿಗೆ ಕೊರೊನಾದಂತಹ ಸಂಕಷ್ಟದಲ್ಲಿ ಸ್ವಂತ ಊರಿನಲ್ಲಿ ಕೆಲಸ ಸಿಕ್ಕಿದೆ. ಗೋಕಟ್ಟೆ ನಿರ್ಮಾಣಕ್ಕೆ ಬರೋಬ್ಬರಿ 720 ದಿನಗಳ ಕಾಲ 100ಕ್ಕೂ ಹೆಚ್ಚು ಕುಟುಂಬಗಳು ಶ್ರಮಿಸಿದ್ದವು.

ಗಮನ ಸೆಳೆದ ಭಾರತದ ನಕಾಶೆ: 10 ಜನ ಅರೆಕುಶಲ ಕಾರ್ಮಿಕರು ಗೋಕಟ್ಟೆ ಆವರಣದಲ್ಲಿ ಭಾರತ ನಕಾಶೆ ನಿರ್ಮಿಸಿ ಗಮನ ಸೆಳೆದಿದ್ದಾರೆ.

ಅಂತರ್ಜಲ ಮಟ್ಟ ಹೆಚ್ಚಳ: ಮಳೆಗಾಲದಲ್ಲಿ ಉತ್ತಮ ಮಳೆಯಾದರೆ ನೀರು ವ್ಯರ್ಥವಾಗಿ ಹಳ್ಳ, ಕೊಳ್ಳ ಸೇರುತ್ತಿತ್ತು. ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಗೋಕಟ್ಟೆ ನಿರ್ಮಿಸಿದ್ದರಿಂದ ನೀರು ಇಲ್ಲಿ ಸಂಗ್ರಹವಾಗಿ ಜಾನುವಾರುಗಳಿಗೆ, ಪಕ್ಕದ ರೈತರ ಹೊಲಗಳ ರೈತರಿಗೆ ಅನುಕೂಲವಾಗಲಿದೆ ಎಂಬ ಭರವಸೆಯನ್ನು ಸ್ಥಳೀಯರು ಹೊಂದಿದ್ದಾರೆ.

***

ಈ ಬೆಟ್ಟದ ಸುತ್ತಮುತ್ತ ದನಕರುಗಳು ಕುಡಿಯಲು ನೀರು ಇಲ್ಲದೇ ಬೇಸಿಗೆಯಲ್ಲಿ ಬಹಳ ತೊಂದರೆ ಅನುಭವಿಸುವಂತಾಗಿತ್ತು. ಗೋಕಟ್ಟೆಯಿಂದ ಈಗ ಆ ತೊಂದರೆ ನಿವಾರಣೆಯಾಗಲಿದೆ

- ದುರ್ಗಪ್ಪ ಬಳಿಚಕ್ರ, ಸ್ಥಳೀಯ ನಿವಾಸಿ

***

ಗೋಕಟ್ಟೆ ನಿರ್ಮಾಣದಿಂದ ಮಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಹಾಗೂ ರೈತರಿಗೆ ಅನುಕೂಲವಾಗಲಿದೆ. ಇದರಿಂದ ನನಗಂತೂ ತುಂಬಾ ಹೆಮ್ಮೆಯಾಗಿದೆ.

- ರಾಜು ಮೇಟಿ, ಪಿಡಿಒ, ಬಳಿಚಕ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು