ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ‘ಅಭಿವೃದ್ಧಿಗೆ ನಿಖರ ಅಂಕಿ ಅಂಶ ಅಗತ್ಯ’

ತಪ್ಪು ಮಾಹಿತಿ ನೀಡಿದ ಡಿಎಚ್‌ಒಗೆ ಸಚಿವರಿಂದ ತರಾಟೆ; ಅಭಿವೃದ್ಧಿಗೆ ಗ್ರಹಣ
Last Updated 8 ಆಗಸ್ಟ್ 2021, 3:01 IST
ಅಕ್ಷರ ಗಾತ್ರ

ಯಾದಗಿರಿ: ‘ಅಧಿಕಾರಿಗಳು ಸಭೆಗೆ ಬರುವ ಮುನ್ನ ನಿಖರ ಅಂಕಿ ಅಂಶಗಳನ್ನು ಸಿದ್ದಪಡಿಸಿ ಇಟ್ಟುಕೊಳ್ಳಬೇಕು. ತಪ್ಪು ಮಾಹಿತಿ ನೀಡಿದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಕೋವಿಡ್ ನಿರ್ವಹಣೆ ಹಾಗೂ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸುಳ್ಳು ಮಾಹಿತಿ ನೀಡುವುದು ಪರಿಶೀಲನೆ ಸಭೆಯಲ್ಲಿ ತಪ್ಪು ಸಂದೇಶ ಹೋಗುತ್ತದೆ. ಇದರಿಂದ ಜಿಲ್ಲೆಯಲ್ಲಿ ಸಮಸ್ಯೆ ಇಲ್ಲ ಎಂದು ತಿಳಿದು ಬರುತ್ತದೆ’ ಎಂದರು.

ಜಿಲ್ಲಾ ಆರೋಗ್ಯಧಿಕಾರಿ ಡಾ.ಇಂದುಮತಿ ಮಾತನಾಡಿ, ‘ಜಿಲ್ಲೆಯಲ್ಲಿ 995 ಬೆಡ್‌ ತಯಾರಾಗಿವೆ’ ಎಂದು ಹೇಳಿದರು. ಈ ವೇಳೆ ಈ ಬಗ್ಗೆ ಪ್ರಶ್ನಿಸಿದ ಶಿಕ್ಷಣ ಸಚಿವ ನಾಗೇಶ ಅವರು, ‘ಎಷ್ಟು ಕಡೆ ಆಸ್ಪತ್ರೆಯಲ್ಲಿ ಬೆಡ್‌ಗಳು ಸಿದ್ಧವಾಗಿವೆ’ ಎಂದು ಪ್ರಶ್ನಿಸಿದಾಗ ತಡವರಿಸಿದರು. ಇದರಿಂದ ಡಾ.ಇಂದುಮತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ‘ಅಧಿಕಾರಿಗಳು ತಪ್ಪು ಮಾಹಿತಿ ನೀಡಿದರೆ ಸಚಿವರು ಇದನ್ನೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಇದರಿಂದ ಸರಿಯಾಗಿ ಮಾಹಿತಿ ನೀಡಬೇಕು. ಇದು ಅಭಿವೃದ್ಧಿಗೂ ಹಿನ್ನಡೆಯಾಗುತ್ತದೆ’ ಎಂದರು.

ಇದಕ್ಕೆ ಧ್ವನಿಗೂಡಿಸಿದ ಸುರಪುರ ಶಾಸಕ ರಾಜೂಗೌಡ, ‘ಶಿಕ್ಷಣ ಸಚಿವರು ನೋಡಲು ಸರಳವಾಗಿ ಕಾಣಿಸುತ್ತಾರೆ. ಆದರೆ, ಅವರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅಪೂರ್ಣ ಮಾಹಿತಿ ನೀಡಬೇಡಿ’ ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು.

ಈ ವೇಳೆ ಸಚಿವರು ಮಾತನಾಡಿ, ‘ನಾನು ಆಸ್ಪತ್ರೆಗಳಿಗೆ ಭೇಟಿದಾಗ ನೀವು ಹೇಳಿದ ಎಲ್ಲ ಅಂಕಿ ಅಂಶಗಳು ಸರಿಯಾಗಿ ಇರಬೇಕು. ನಮ್ಮನ್ನು ಮೆಚ್ಚಿಸಲು ಹೇಳಿದರೆ ಸಾಲದು. ನೂರು ಹಾಸಿಗೆ ಸಿದ್ಧವಾಗಿದೆ ಎಂದರೆ ನೂರು ರೋಗಿಗಳು ಆಸ್ಪತ್ರೆಗೆ ಬಂದರೆ ಬೆಡ್‌ ಸಿದ್ಧವಾಗಿರಬೇಕು. ಇಲ್ಲದಿದ್ದರೆ ಅದು ಕೇವಲ ಪ್ರಗತಿ ಆಗಿರುತ್ತದೆ. ಸಿದ್ದವಾಗಿರುವುದಕ್ಕೂ ಪ್ರಗತಿಯಲ್ಲಿರುವುದಕ್ಕೂ ವ್ಯಾತ್ಯಾಸವಿದೆ’ ಎಂದರು.

‘ಶಹಾಪುರ, ಸುರಪುರ ಆಸ್ಪತ್ರೆಗಳಲ್ಲಿ ಬೆಡ್‌ ಸಿದ್ಧ ಮಾಡಿಕೊಳ್ಳಿ’ ಎಂದರು.

ಈ ವೇಳೆ ಮಾತನಾಡಿದ ದರ್ಶ ನಾಪುರ, ‘ಜಿಲ್ಲೆಯಲ್ಲಿ ಸಾಕಷ್ಟು ವೈದ್ಯರ ಕೊರತೆ ಇದೆ. ಆದರೆ, ಸರ್ಕಾರಕ್ಕೆ ದಾರಿ ತಪ್ಪಿಸುತ್ತೀರಿ. ಸಂತ್ಯಾಂಶ ಹೇಳಬೇಕು’ ಎಂದು ಆರೋಗ್ಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ಮಾಡಿ: ‘ಕೋವಿಡ್‌ ಕಾರಣದಿಂದ ಜಿಲ್ಲೆಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಕಡಿಮೆ ತಪಾಸಣೆ ಮಾಡಲಾಗುತ್ತಿದೆ. ಇನ್ನು ಹೆಚ್ಚು ತಪಾಸಣೆ ಮಾಡಬೇಕು. ಕಟ್ಟುನಿಟ್ಟಾಗಿ ತಪಾಸಣೆ ಕೈಗೊಂಡು ಕೋವಿಡ್‌ ಅಲೆ ತಡೆಗಟ್ಟಬೇಕು. ಕೋವಿಡ್‌ ಪ್ರಕರಣಗಳು ಕಡಿಮೆ ವರದಿಯಾಗುತ್ತಿವೆ ಎಂದು ವಿಶ್ರಾಂತಿ ಪಡೆಯಬಾರದು. ಪರೀಕ್ಷೆ ಪ್ರಮಾಣವೂ ಹೆಚ್ಚಬೇಕು. ರೈಲ್ವೆ ನಿಲ್ದಾಣದಲ್ಲಿಯೂ ಕೋವಿಡ್‌ ಪರೀಕ್ಷೆಗೆ ಹೆಚ್ಚಿನ ಕೌಂಟರ್‌ ಸ್ಥಾಪನೆ ಮಾಡುವಂತೆ ಅಧಿಕಾರಿಗಳಿಗೆ ಸಚಿವ ನಾಗೇಶ ಸೂಚಿಸಿದರು.

‘ರೈಲ್ವೆ ನಿಲ್ದಾಣಗಳಲ್ಲಿ ಆವರಣಗೋಡೆ ಹಾರಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳುವುದು ನಡೆಯುತ್ತಿದೆ. ಇದನ್ನು ತಡೆಯಲು ಪೊಲೀಸ್‌ ವ್ಯವಸ್ಥೆ ಯನ್ನು ಹೆಚ್ಚು ಮಾಡಬೇಕು’ ಎಂದರು.

ಜಿಲ್ಲೆಯಲ್ಲಿರುವ ಜನಸಂಖ್ಯೆ ಅನುಗು ಣವಾಗಿ ಹೆಚ್ಚಿನ ಲಸಿಕೆ ಹಾಕಿಸಬೇಕು. ಈಗ ಮಾಡುವುದಕ್ಕಿಂತ ಹೆಚ್ಚು ಚುಚ್ಚು ಮದ್ದು ಹಾಕಬೇಕು ಎಂದರು.

ಅಧಿಕಾರಿಗಳು ಹಳ್ಳಿ, ಹೋಬಳಿ ಮಟ್ಟದಲ್ಲಿ ತೆರಳಿ ಲಸಿಕೆ ನೀಡುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಬೇರೆ ಜಿಲ್ಲೆಗಳಲ್ಲಿ ಲಸಿಕೆಗಾಗಿ ನುಕುನೂಗ್ಗಲು ಇದೆ. ಇಲ್ಲಿ ಮಾತ್ರ ಅಧಿಕಾರಿಗಳು ಲಸಿಕೆ ನೀಡುವಲ್ಲಿ ಹಿಂದೆಉಳಿದಿದ್ದಾರೆ. ಮುಂದಿನ ಬಾರಿ ಬರುವುದರೊಳಗೆ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಮಾರ್ಗದರ್ಶನ ನೀಡಿದರು.

ಲಸಿಕೆಯ ಎರಡೂ ಡೋಸ್ ಪಡೆದುಕೊಂಡ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆ ಇದ್ದು, ಇದನ್ನು ಇನ್ನಷ್ಟು ತೀವ್ರಗೊಳಿಸಿ ಪೂರ್ಣಪ್ರಮಾಣದ ಸಾಧನೆ ಮಾಡಲು ಸಚಿವರು ಸೂಚಿಸಿದರು.

ಪ್ರವಾಹ ಪರಿಸ್ಥಿತಿ ಪರಿಶೀಲನೆ:‘ಕೃಷ್ಣಾ ನದಿ ಪಾತ್ರ ಪ್ರವಾಹ ಮತ್ತು ಬೆಳೆ ಹಾನಿ‌ ಪರಿಶೀಲಿಸಿದ ಸಚಿ ವರು, ಬೆಳೆ ಹಾನಿ ವಿವರವನ್ನು ಸಮರ್ಪಕವಾಗಿ ಪರಿಶೀಲಿಸಿ ದಾಖ ಲೀಕರಣಗೊಳಿಸಬೇಕು. ಯಾವುದೇ ರೈತರು ಪರಿಹಾರದಿಂದ ವಂಚಿ ತರಾಗದಂತೆ ಮುತುವರ್ಜಿ ವಹಿಸಲು’ ಅಧಿಕಾರಿಗಳಿಗೆ ನಿರ್ದೇಶಿಸಿದರು.

‘ಪ್ರವಾಹ ಪೀಡಿತ ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಸಮರೋಪಪಾದಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

‘ಮನೆ ಹಾನಿಯಾದವರಿಗೆ ನಿಯಮಾನುಸಾರ ಸೂಕ್ತ ಪರಿಹಾರವನ್ನು ವಿಳಂಬವಿಲ್ಲದೆ ಮಂಜೂರು ಮಾಡ ಬೇಕು. ರಸ್ತೆ ಹಾನಿಯನ್ನು ಕೂಡಲೇ ಸರಿಪಡಿಸಲು’ ಸೂಚಿಸಿದರು.

‘ಅಧಿಕಾರಿಗಳು ಹಳ್ಳಿ ಹಳ್ಳಿಗೂ ನಿರಂತರವಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು. ಇದರಿಂದ ಸರ್ಕಾರ ಜನಸಾಮಾನ್ಯರ ಬಾಗಿಲಿಗೆ ಬಂದು ಉತ್ತಮ ಆಡಳಿತಕ್ಕೆ ಕಾರಣವಾಗಲಿದೆ’ ಎಂದರು.

ಸಭಯಲ್ಲಿ ಶಾಸಕರಾದ ವೆಂಕಟರಡ್ಡಿ ಮುದ್ನಾಳ, ಬಿ.ಜಿ.ಪಾಟೀಲ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ ಶಿಲ್ಪಾ ಶರ್ಮಾ, ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT