ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ದಿನಾಂಕ ನಿಗದಿ: ಗರಿಗೆದರಿದ ರಾಜಕೀಯ ಚಟುವಟಿಕೆ

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳಿಂದ ಮತದಾರರ ಓಲೈಕೆ
Last Updated 29 ಮಾರ್ಚ್ 2023, 16:11 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಚುನಾವಣೆ ನಡೆಯುತ್ತಿದ್ದು, ಇದಕ್ಕಾಗಿ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ.

ಚುನಾವಣಾ ದಿನಾಂಕ ನಿಗದಿಯಾಗುವುದನ್ನೇ ಕಾಯುತ್ತಿದ್ದ ಟಿಕೆಟ್‌ ಆಕಾಂಕ್ಷಿಗಳು ತಮಗೆ ಟಿಕೆಟ್‌ ನೀಡಬೇಕು ಎಂದು ತಮ್ಮ ಗೊತ್ತಿರುವ ಎಲ್ಲ ಪಟ್ಟುಗಳನ್ನು ಪ್ರಯೋಗಿಸಿ ಲಾಬಿ ಮಾಡುತ್ತಿದ್ದಾರೆ.ಸಮಾವೇಶ ಸಮರ:

ಜಿಲ್ಲೆಯಲ್ಲಿ ನಾಲ್ಕು ಮತಕ್ಷೇತ್ರಗಳಿದ್ದು, ಸದ್ಯ ಎರಡು ಬಿಜೆಪಿ, ಒಂದು ಕಾಂಗ್ರೆಸ್‌, ಮತ್ತೊಂದರಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಚುನಾವಣೆಗೆ ವರ್ಷದ ಆರಂಭದಿಂದಲೇ ಸಿದ್ಧತೆ ಮಾಡಿಕೊಂಡಿದ್ದ ರಾಜಕೀಯ ಪಕ್ಷಗಳು ವಿವಿಧ ಸಮಾವೇಶಗಳನ್ನು ಹಮ್ಮಿಕೊಂಡು ಮತದಾರರನ್ನು ತಲುಪ‍ಲು ಪ್ರಯತ್ನಿಸುತ್ತಿವೆ.

ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಈಗಾಗಲೇ ವಿವಿಧ ಕಡೆ ಸಂವಾದ, ಸಮ್ಮೇಳನ, ಸಮಾವೇಶಗಳನ್ನು ಹಮ್ಮಿಕೊಂಡಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾವೇಶಗಳನ್ನು ಅಯೋಜಿಸುವ ಸಿದ್ಧತೆಯಲ್ಲಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ತಲುಪಲು ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ.

ಕಾಂಗ್ರೆಸ್‌ ಎರಡು ಕ್ಷೇತ್ರ ಮತ್ತು ಜೆಡಿಎಸ್‌ ಒಂದು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಿದ್ದು, ಬಿಜೆಪಿ ಪಕ್ಷ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಹಾಲಿ ಶಾಸಕರೇ ಮತ್ತೊಮ್ಮೆ ಸ್ಪರ್ಧಿಸುವ ಸಾಧ್ಯತೆ ಇದ್ದು, ಉಳಿದ ಕಡೆ ಯಾವ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ಸುರಪುರ ಮತ್ತು ಶಹಾಪುರ ಮತಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರಿಂದ ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದಾರೆ. ಉಳಿದ ಕಡೆ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಲು
ಮತದಾರರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಇನ್ನೂ ಜೆಡಿಎಸ್‌ ಪಕ್ಷದಲ್ಲಿ ಎಲ್ಲಕ್ಕಿಂತ ಮೊದಲು ಗುರುಮಠಕಲ್‌ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಲಾಗಿದ್ದು, ಉಳಿದ ಮೂರು ಕಡೆ ಪಕ್ಷದ ಹೆಸರಿನಲ್ಲಿ ಪ್ರಚಾರ ಮಾಡಲಾಗುತ್ತಿದೆ.

ರಾಜಕೀಯ ಪಕ್ಷಗಳು ಈ ಬಾರಿ ಹೇಗಾದರೂ ಮಾಡಿ ತಮ್ಮ ಪಕ್ಷದ ಬಾವುಟವನ್ನು ನಾಲ್ಕೂ ಕ್ಷೇತ್ರಗಳಲ್ಲಿ ಹಾರಿಸಬೇಕು ಎಂದು ಪ್ರಯತ್ನ ನಡೆಸಿವೆ. ಮತದಾರರು ಯಾರಿಗೆ ಒಲವು ತೋರುತ್ತಾರೆ ಎನ್ನುವುದು ಮೇ 13ರಂದು ಬಹಿರಂಗವಾಗಲಿದೆ.

****

ಜಿಲ್ಲೆಯಲ್ಲಿ ಗುರುಮಠಕಲ್‌ ಹೊರತುಪಡಿಸಿ ಉಳಿದ ಮೂರು ಕಡೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಆದರೂ ‍ಪಕ್ಷದ ಪರ ಪ್ರಚಾರ ಮಾಡುತ್ತಿದ್ದೇವೆ. ಎಲ್ಲ ರೀತಿಯಿಂದ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಚನ್ನಪ್ಪಗೌಡ ಮೋಸಂಬಿ, ಜೆಡಿಎಸ್‌ ಜಿಲ್ಲಾಧ್ಯಕ್ಷ

***

ಜಿಲ್ಲೆಯಲ್ಲಿ ವಿವಿಧೆಡೆ ಸಭೆ–ಸಮಾರಂಭ ಮಾಡಲಾಗಿದೆ. ನಮ್ಮ ಪರವಾದ ವಾತಾವರಣ ಇದೆ. ಮತ್ತೊಮ್ಮೆ ರಾಜ್ಯದಲ್ಲಿ ಗದ್ದುಗೆ ಏರಲಿದೆ. ಚುನಾವಣೆಗೆ ಮಾನಸಿಕವಾಗಿ ಸಿದ್ದರಾಗಿದ್ದೇವೆ

ಎಚ್‌.ಸಿ.ಪಾಟೀಲ, ಬಿಜೆಪಿ ಜಿಲ್ಲಾ ವಕ್ತಾರ

***

ಕಾಂಗ್ರೆಸ್ ಪಕ್ಷ ಸಂಘಟನೆ ಉತ್ತಮವಾಗಿದೆ. ಶಹಾಪುರ, ಸುರಪುರ ಮತಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮತದಾರರನ್ನು ತಲುಪಲಾಗುವುದು

ಸ್ಯಾಂಸನ್ ಮಾಳಿಕೇರಿ, ಕಾಂಗ್ರೆಸ್‌ ಜಿಲ್ಲಾ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT