ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ವಿದ್ಯುತ್ ಕಣ್ಣಾಮುಚ್ಚಾಲೆ: ಬೆಳೆ ಒಣಗುವ ಭೀತಿ

ಕೃಷ್ಣಾ, ಭೀಮಾ ನದಿ ತೀರದ ರೈತರು ನೀರು ಹರಿಸಿಕೊಳ್ಳಲು ಪರದಾಟ
Published 18 ಅಕ್ಟೋಬರ್ 2023, 7:30 IST
Last Updated 18 ಅಕ್ಟೋಬರ್ 2023, 7:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೃಷ್ಣಾ, ಭೀಮಾ ನದಿ ತೀರದ ರೈತರು ಭತ್ತದ ಬೆಳೆಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗದೆ ಕಂಗಲಾಗಿದ್ದಾರೆ. ಇದರಿಂದ ಬೆಳೆ ಒಣಗುವ ಭೀತಿ ಎದುರಾಗಿದೆ.

ಜಿಲ್ಲೆಯ ಶಹಾಪುರ, ವಡಗೇರಾ ತಾಲ್ಲೂಕನ್ನು ತೀವ್ರ ಬರಪೀಡಿತ, ಯಾದಗಿರಿ, ಸುರಪುರ, ಗುರುಮಠಕಲ್‌, ಹುಣಸಗಿ ತಾಲ್ಲೂಕು ಸಾಧಾರಣ ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಜೊತೆಗೆ ವಿದ್ಯುತ್‌ ಕಡಿತದಿಂದ ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ.

‘ರೈತರು ಪ್ರತಿ ಎಕರೆಗೆ ₹30 ರಿಂದ ₹40 ಸಾವಿರ ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದಾರೆ. ಆದರೆ, ಬರಗಾಲ ಆವರಿಸಿರುವುದರಿಂದ ರೈತರು ಬೆಳೆದ ಬೆಳೆ ಜಮೀನಿನಲ್ಲೇ ಕಮರಿ ಹೋಗುತ್ತಿದೆ. ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ಭತ್ತದ ಜಮೀನಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಜಮೀನು ಪಕ್ಕದಲ್ಲೇ ಕೃಷ್ಣಾ, ಭೀಮಾನದಿ ಹರಿದರೂ ರೈತರಿಗೆ ಉಪಯೋಗ ಇಲ್ಲದಂತದಾಗಿದೆ’ ಎನ್ನುವುದು ರೈತರ ಆರೋಪವಾಗಿದೆ.

‘ಜಿಲ್ಲೆಯ ವಡಗೇರಾ ತಾಲ್ಲೂಕಿನ ಜೋಳದಡಗಿ, ಬೆನಕನಹಳ್ಳಿ, ಕುಮನೂರ, ಕಂದಳ್ಳಿ, ಬಿಳ್ಹಾರ, ಕೊಂಗಂಡಿ, ಶಿವನೂರ, ತುಮಕೂರು, ಕದರಾಪುರ, ಬೆಂಡೆಬೆಂಬಳಿ, ಕೊಡಾಲ, ಗೋನಾಲ ಸೇರಿದಂತೆ ಅನೇಕ ಗ್ರಾಮದ ಕೃಷ್ಣಾ, ಭೀಮಾ ನದಿ ತೀರದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ’ ರೈತರಾದ ಬಸವರಾಜಪ್ಪ ಸಿದ್ದಪ್ಪ ಹೇಳುತ್ತಾರೆ.

ಸದ್ಯಕ್ಕೆ 5 ತಾಸು ನಿರಂತರ ವಿದ್ಯುತ್‌ ನೀಡುವ ಬಗ್ಗೆ ಸಮಯ ಅಂತಿಮವಾಗಿಲ್ಲ. 7 ತಾಸು ಬದಲು 5 ಗಂಟೆ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿದೆ. ಹಗಲು ಹೊತ್ತಿನಲ್ಲೂ ಪಂಪ್‌ಸೆಟ್‌ಗೆ ನೀಡುವ ಯೋಜನೆ ಇದೆ. ಶೀಘ್ರವೇ ಸಮಯ ನಿಗದಿ ಮಾಡಲಾಗುತ್ತದೆ
ರಾಘವೇಂದ್ರ ದುಖಾನ್‌, ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌

ಬೆಳೆ ಉಳಿಸಿಕೊಳ್ಳಲು ರೈತರು ಹೈರಾಣು: ಬರದ ನಡುವೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಹೆಚ್ಚಾಗಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಾಸ ಮಾಡುತ್ತಿದ್ದಾರೆ. ಮುಂಗಾರು ಮಳೆ ನಂಬಿಕೊಂಡು ರೈತರು ಭತ್ತದ ಬೆಳೆ ಬೆಳೆದಿದ್ದರು. ಆದರೆ, ಮುಂಗಾರು ಹಂಗಾಮನಿನಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೆ ಬರಗಾಲ ಆವರಿಸಿದೆ. ಭತ್ತ ನಾಟಿ ಮಾಡಿರುವ ರೈತರು ನದಿ‌ ನೀರು ಬಳಸಿಕೊಂಡು ಬೆಳೆ ಉಳಿಸಿಕೊಳ್ಳೋಣ ಎಂದರೆ ವಿದ್ಯುತ್‌ ಕಣ್ಣಮುಚ್ಚಾಲೆಯಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಾರೆ.

‘ನಿರಂತರವಾಗಿ‌ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಬೇಕು. ಆದರೆ, ಲೋಡ್ ಶೆಡ್ಡಿಂಗ್‌ನಿಂದ‌ ಕೇವಲ 3-4 ಗಂಟೆ‌ ಮಾತ್ರ ವಿದ್ಯುತ್ ಪೂರೈಕೆ ಆಗುತ್ತಿದೆ. ನದಿಯಿಂದ ನೀರು ಗದ್ದೆಗೆ ಬರುವ ಮುನ್ನವೆ ವಿದ್ಯುತ್ ಹೋಗುತ್ತದೆ. ಮುಂಗಾರು ಮಳೆ ಮಳೆಯಿಲ್ಲ. ಈಗ ಭತ್ತ ಕಳೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ರೈತರಾದ ಬಡೆಸಾಬ್, ಶಿವುಗೌಡ ಮಾಲಿಪಾಟೀಲ, ಬನ್ನಯ್ಯ ಸ್ವಾಮಿ.

‘ಸಾವಿರಾರು ಎಕರೆ ಪ್ರದೇಶದ ಭತ್ತ ಒಣಗಿ ಹಾಳಾಗುತ್ತಿದೆ. ನೀರಿನ ಕೊರತೆಯಿಂದ ಭತ್ತ ಸರಿಯಾಗಿ ತೆನೆ ಕಟ್ಟುತ್ತಿಲ್ಲ. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಈಗ ನಷ್ಟ ಹೊಂದಿದ್ದಾರೆ. ಕನಿಷ್ಠ 8 ಗಂಟೆ ವಿದ್ಯುತ್ ಪೂರೈಕೆ ಮಾಡಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ರೈತರು.

ಕೃಷ್ಣಾ ಭೀಮಾ ನದಿಯಲ್ಲಿ ನೀರು ಇದ್ದರೂ ಲೋಡ್ ಶೆಡ್ಡಿಂಗ್ ಪರಿಣಾಮ ಭತ್ತದ ಬೆಳೆಗೆ ನೀರು ಹರಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಸರ್ಕಾರ ಜನಪ್ರತಿನಿಧಿಗಳು ಮಧ್ಯಸ್ಥಿಕೆ ವಹಿಸಿ ರೈತರ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು
ಅಶೋಕ ಮುಡಬೂಳ ರೈತ ಮುಖಂಡ

ಶಹಾಪುರ, ಸುರಪುರ, ಹುಣಸಗಿಯಲ್ಲಿ ಭತ್ತ ನಿಷೇಧಿತ ಬೆಳೆಯಾದರೆ, ಯಾದಗಿರಿ, ಗುರುಮಠಕಲ್‌ ತಾಲ್ಲೂಕುನಲ್ಲಿ ಅಧಿಕೃತವಾಗಿ ಬೆಳೆಯಲು ಕೃಷಿ ಇಲಾಖೆಯಿಂದಲೇ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ. ಆದರೆ, ಬೆಳೆಗೆ ಸಮಪರ್ಕ ನೀರು ಇಲ್ಲದೇ ರೈತರು ಕಂಗಲಾಗುವಂತೆ ಆಗಿದೆ.

ಜಿಲ್ಲೆಯಲ್ಲಿ ಮಳೆ ಕೊರತೆ

ಜಿಲ್ಲೆಯಲ್ಲಿ ಇದೇ ಜೂನ್‌ 1ರಿಂದ ಸೆಪ್ಟೆಂಬರ್ 30ರವೆಗೆ 517 ಎಂ.ಎಂ ಮಳೆಯಾಗಬೇಕಿತ್ತು. ಆದರೆ 468 ಎಂಎಂ ಮಳೆಯಾಗಿ ಶೇ 10ರಷ್ಟು ಮಳೆ ಕೊರತೆಯಾಗಿತ್ತು. ಅಕ್ಟೋಬರ್‌ 1ರಿಂದ 17ರ ತನಕ 75 ಎಂ ಎಂ ಮಳೆಯಾಗಬೇಕಿತ್ತು. ಆದರೆ ಕೇವಲ 6 ಎಂಎಂ ಮಳೆಯಾಗಿದೆ. ಇದರಿಂದ ಶೇ 92ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಅಲ್ಲದೇ ಜನವರಿ 1ರಿಂದ ಅಕ್ಟೋಬರ್ 17ರ ವರೆಗೆ 660 ಎಂಎಂ ಮಳೆಯಾಬೇಕಿತ್ತು. 572 ಎಂಎಂ ಮಳೆಯಾಗಿದೆ. ಅಕ್ಟೋಬರ್ 11ರಿಂದ 17ರವೆಗೆ 25 ಎಂಎಂ ವಾಡಿಕೆ ಮಳೆ ಇತ್ತು. ಆದರೆ ಮಳೆಯೇ ಆಗಿಲ್ಲ. ಹೀಗಾಗಿ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ರೈತರ ಪ್ರತಿಭಟನೆ

ವಿದ್ಯುತ್‌ ಸಮಸ್ಯೆ ನಿವಾರಣೆಗೆ ಜಿಲ್ಲೆಯ ವಿವಿಧೆಡೆ ರೈತರು ಸಮಪರ್ಕ ಪೂರೈಕೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆಸಿದ್ದಾರೆ. ಕಳೆದ ಒಂದು ವಾರದಿಂದ ವಿವಿಧ ಕಡೆ ರಸ್ತೆ ತಡೆ ಪ್ರತಿಭಟನೆ ಮಾಡಿ ಬೆಳೆಗಳಿಗೆ ನೀರು ಪೂರೈಸಲು ಆಗುತ್ತಿರುವ ತೊಂದರೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT