ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆ ನಿಯಂತ್ರಣಕ್ಕೆ ಗಪ್ಪಿ, ಗಂಬುಸಿಯ ಮೀನು

ಲಾರ್ವಾ ನಾಶ ಪಡಿಸುವ ಮೀನುಗಳು; ಮಲೇರಿಯಾ, ಡೆಂಗಿ ನಿಯಂತ್ರಣಕ್ಕೆ ಸಹಕಾರಿ
Last Updated 17 ಏಪ್ರಿಲ್ 2021, 9:15 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಸೊಳ್ಳೆಗಳ ಹತೋಟಿಗೆ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳು ಲಾರ್ವಾಗಳನ್ನು ತಿಂದು ಹಾಕುವ ಗಪ್ಪಿ, ಗಂಬುಸಿಯ ಮೀನು ಬಳಕೆಗೆ ಮುಂದಾಗಿದ್ದಾರೆ.

ಕಲ್ಯಾಣಿ, ತೆರೆದ ಬಾವಿ, ಕೆರೆ ಕಟ್ಟೆಗಳಲ್ಲಿ ಈ ಮೀನುಗಳನ್ನು ಬಿಡಲಾಗುತ್ತಿದೆ. ಇವುಗಳು ಲಾರ್ವಾ (ಸೊಳ್ಳೆಯ ಮೊಟ್ಟೆ)ಯನ್ನು ತಿನ್ನುತ್ತವೆ. ಈ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ಆರಂಭದಲ್ಲೇ ನಿಯಂತ್ರಣ ಮಾಡಲು ಸಾಧ್ಯ ಎನ್ನುವುದು ಅಧಿಕಾರಿಗಳ ಮಾತು.

ಕಲ್ಯಾಣಿ, ಬಾವಿಗಳಲ್ಲಿ ಮೀನು: ಜಿಲ್ಲೆಯಲ್ಲಿ 44 ಕಲ್ಯಾಣಿಗಳಿದ್ದು, ಇಲ್ಲಿ ಎಲ್ಲ ಕಡೆಯೂ ಗಪ್ಪಿ, ಗಂಬುಸಿಯ ಮೀನು ಬಿಡುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಯಾದಗಿರಿ ತಾಲ್ಲೂಕಿನ 8 ಕಲ್ಯಾಣಿ, 8 ಬಾವಿ, ಶಹಾಪುರ ತಾಲ್ಲೂಕಿನ 7 ಬಾವಿ, 3 ಕಲ್ಯಾಣಿಗಳಲ್ಲಿ ಈ ಮೀನುಗಳನ್ನು ಬಿಡಲಾಗಿದೆ.

ಶಹಾಪುರ ತಾಲ್ಲೂಕಿನ ಶಿರವಾಳ, ಹಳಿಸಗರ ಬಾವಿಯಲ್ಲಿ ಈ ಮೀನುಗಳಿವೆ. ಅಲ್ಲಿಂದ ತಂದು ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯಾಲಯದ ಒಂದು ಟ್ಯಾಂಕ್‌ನಲ್ಲಿ ಈ ಮೀನುಗಳನ್ನು ಸಾಕಲಾಗುತ್ತಿದೆ. ಇಲ್ಲಿಂದ ವಿವಿಧ ಕಡೆ ಸಾಗಿಸಿ ಕೆರೆ, ಬಾವಿ, ಕಲ್ಯಾಣಿಗಳಲ್ಲಿ ಬಿಡಲಾಗುತ್ತಿದೆ.

ಏನಿದು ಗಪ್ಪಿ, ಗಂಬುಸಿಯ ಮೀನು?: 1 ಸೆ.ಮೀ ಉದ್ದ ಇರುವ ಈ ಮೀನುಗಳಿಗೆ ಲಾರ್ವಾಗಳೇ ಆಹಾರ. ಈ ಮೀನುಗಳ ಮೂಲಕ ಸೊಳ್ಳೆಗಳ ಉತ್ಪತ್ತಿ ಆಗದಂತೆ ತಡೆಯಬಹುದು ಎನ್ನುವುದು ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

ಎಷ್ಟೆಷ್ಟು ಬಿಡಲಾಗುತ್ತಿದೆ?: ಸಣ್ಣ ಬಾವಿ, ಕಲ್ಯಾಣಿಗಳಲ್ಲಿ 300, 500 ಮೀನು, ದೊಡ್ಡದಾದ ಕಲ್ಯಾಣಿ, ಬಾವಿ, ಕೆರೆಯಲ್ಲಿ 500ರಿಂದ 1000 ಗಪ್ಪಿ, ಗಂಬುಸಿಯ ಮೀನುಗಳನ್ನು ಬಿಡಲಾಗುತ್ತಿದೆ. ಸೊಳ್ಳೆಗಳು ನೀರಿನ ಮೇಲೆ ನಿಂತಾಗ ಮೊಟ್ಟೆ ಇಡುತ್ತವೆ. ಇವು ಮುಂದೆ ಲಾರ್ವಾ ಆಗಿ ಪರಿವರ್ತನೆ ಆಗುತ್ತವೆ. ನಂತರ ಸೊಳ್ಳೆಗಳ ಸಂತತಿ ಜಾಸ್ತಿಯಾದರೆ, ಡೆಂಗಿ, ಮಲೇರಿಯಾ ಹೆಚ್ಚಳವಾಗುವ ಸಾಧ್ಯತೆ ಇದೆ.

‘ಲಾರ್ವಾ ಸೇವಿಸುವ ಮೀನುಗಳನ್ನು ಕಲ್ಯಾಣಿ, ಬಾವಿಗಳಲ್ಲಿ ಬಿಡಲು ತೆರಳುವಾಗ ಗ್ರಾಮಸ್ಥರಿಂದ ಹಲವಾರು ಅಡ್ಡಿಗಳು ಉಂಟಾಗುತ್ತವೆ. ಹೀಗಾಗಿ ಆಯಾ ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆಗೆ ಸಂಬಂಧಿಸಿದವರ ಮೂಲಕ ಜಾಗೃತಿ ಮೂಡಿಸಿ ಈ ಮೀನುಗಳನ್ನು ಬಿಡಲಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಜಾಗೃತಿ ಜೊತೆಗೆ ಸೊಳ್ಳೆಗಳ ನಿಯಂತ್ರಣದ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಲಕ್ಷ್ಮಿಕಾಂತ.

‘ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಅವರಿಂದ ಜಿಲ್ಲೆಯಲ್ಲಿರುವ ಕಲ್ಯಾಣಿಗಳ ಮಾಹಿತಿ ಪಡೆದು, ಆ ಕಲ್ಯಾಣಿಗಳಲ್ಲಿ ಈ ಮೀನುಗಳನ್ನು ಬಿಡಲು ಅನುಮತಿ ಪಡೆದು ನಂತರ ಬಿಡಲಾಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಡಾ.ಲಕ್ಷ್ಮಿಕಾಂತ.

ಗಪ್ಪಿ ಮೀನುಗಳನ್ನು ಬಾವಿಯಿಂದ ತೆಗೆಯಲು ಬೇಕಾಗುವ ಜಾಲರಿ, ಬಕೆಟ್‌ ಖರೀದಿಗೆ ₹5–6 ಸಾವಿರ ಬಜೆಟ್‌ ಇದೆ.

***

ಮಳೆಗಾಲದ ಮುನ್ನ ಈ ಮೀನುಗಳನ್ನು ಕಲ್ಯಾಣಿ, ಬಾವಿಗಳಲ್ಲಿ ಬಿಡುವುದರಿಂದ ಲಾರ್ವಾ ನಿಯಂತ್ರಣ ಮಾಡಬಹುದು. ಈ ಮೂಲಕ ಮಲೇರಿಯಾ, ಡೆಂಗಿ ಹತೋಟಿಗೆ ಸಹಕಾರಿಯಾಗಿದೆ.
-ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ

***

ಫಾಂಗಿಂಗ್‌ ಮಾಡುವುದರಿಂದ ಕೇವಲ ಸೊಳ್ಳೆಗಳನ್ನು ಸಾಯಿಸಲು ಸಾಧ್ಯ. ಈ ಮೀನುಗಳ ಮೂಲಕ ಸೊಳ್ಳೆಯ ಮೊಟ್ಟೆಗಳನ್ನು ನಾಶ ಮಾಡಬಹುದು.
-ಡಾ.ಲಕ್ಷ್ಮಿಕಾಂತ,ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT