ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಆತ್ಮ ಸಾಕ್ಷಾತ್ಕಾರಕ್ಕೆ ನಿರಂತರ ಸಾಧನೆ ಮುಖ್ಯ’

Published 3 ಜುಲೈ 2024, 14:31 IST
Last Updated 3 ಜುಲೈ 2024, 14:31 IST
ಅಕ್ಷರ ಗಾತ್ರ

ಹುಣಸಗಿ: ನಾನು ನನ್ನದು ಎಂಬ ಭಾವ ಹಾಗೂ ಪ್ರಪಂಚದಿಂದ ಸಂಪೂರ್ಣ ಮುಕ್ತನಾಗಿ ನಿರಂತರ ಸಾಧನೆ ಮಾಡಿದಾಗ ಮಾತ್ರ ಆತ್ಮ ಸಾಕ್ಷಾತ್ಕಾರವಾಗುತ್ತದೆ ಎಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಶಿರಳಗಿಯ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು.

ಹುಣಸಗಿ ತಾಲೂಕಿನ ಬೆನಕನಹಳ್ಳಿಯಲ್ಲಿ ಡಬ್ಬೇರಮಡುವು ವಿದ್ಯಾನಂದ ಶರಣರ 18 ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಸತ್ಸಂಗ ಕೂಟದಲ್ಲಿ 'ಆತ್ಮ ಪರಮಾತ್ಮ, ಹಾಗೂ ಕಠೋಪನಿಷತ್ತು' ಈ ವಿಷಯದ ಕುರಿತಂತೆ ಪ್ರವಚನ ನೀಡಿದರು.

ನಚಿಕೇತ ಹಾಗೂ ಯಮಧರ್ಮರಾಯನ ನಡುವೆ ನಡೆದ ಸಂವಾದದ ಕುರಿತು ವಿವರಿಸುತ್ತಾ ಯಮನಿಂದ ಆತ್ಮಜ್ಞಾನ ತಿಳಿದುಕೊಂಡ ದೃಷ್ಟಾಂತದ ಬಗ್ಗೆ ತಿಳಿಸಿದರು. ತನ್ನನ್ನು ತಾನು ಅರಿತುಕೊಳ್ಳುವದೇ ವೇದ, ಉಪನಿಷತ್ತುಗಳು, ಪುರಾಣಗಳ ಸಾರ ಎಂದು ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ಕೃಷ್ಣಶಾಸ್ತ್ರಿಜಿ ಮಾತನಾಡಿ, ಶ್ರೀರಾಮನು ಕಾಡಿಗೆ ತೆರಳಿದ ಪ್ರಸಂಗದ ಕುರಿತು ಹಾಗೂ ಜೀವನದ ಬಯಕೆ ಮತ್ತು ಸಾಧನ ಮಾರ್ಗದ ಅಡೆತಡೆಗಳ ಕುರಿತು ವಿವರವಾಗಿ ವಿವರಿಸಿದರು. ಮಹಾಬೋಧಾಲಯದ ಶರಣ ದೇವಾನಂದ ಶರಣರು ಅಧ್ಯಕ್ಷತೆ ವಹಿಸಿದ್ದರು.

ವಚನ ಪ್ರವೀಣೆ ಮಾತೆ ಶ್ರೀದೇವಿತಾಯಿ ಜಮಖಂಡಿ, ನಗನೂರಿನ ಸದಾಶಿವರೆಡ್ಡಿ, ಹನುಮಂತರಾಯ ಕಾಕರಗಲ್, ದ್ಯಾಮನಾಳದ ಮನೋಹರರಾವ ಕುಲಕರ್ಣಿ, ಶರಭೆಂದ್ರಸ್ವಾಮೀಜಿ , ಶಂಕ್ರಣ್ಣ ಹುಣಶ್ಯಾಳ, ಕಾಮನಕೇರಿಯ ಪರಮಾನಂದ ಮಹಾರಾಜ, ಯೋಗ ವಿಜ್ಞಾನದ ಪಿ.ರುದ್ರಪ್ಪ ಕುರಕುಂದ ಇತರರು ಮಾತನಾಡಿದರು.

ಜಾಲಹಳ್ಳಿಯ ಡಾ. ರಾಜೇಶ್ವರಿ ಮಲ್ಕಾಪೂರ, ಡಾ. ನಾಗರಾಜ ಮಲ್ಕಾಪೂರ ಅವರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಆಹಾರವೇ ಔಷಧಿ ಕುರಿತು ಡಾ.ಎಂ.ಜಿ.ಮುಳಕೂರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT