ಶನಿವಾರ, ಡಿಸೆಂಬರ್ 7, 2019
22 °C
ಜಿಲ್ಲೆಯಲ್ಲಿ 1,22,973 ಹೆಕ್ಟೆರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ

ಹತ್ತಿ ಬೆಳೆಯಲ್ಲಿ ‘ಸ್ಪೋಡೋಪ್ಟರ’ ಕೀಡೆ ಬಾಧೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಾದ್ಯಂತ 20 ದಿನಗಳಿಂದ ಮೋಡ ಕವಿದ ವಾತಾವರವಿದ್ದು ಹತ್ತಿ ಬೆಳೆಯಲ್ಲಿ ‘ಸ್ಪೋಡೋಪ್ಟರ’ ಕೀಡೆಯ ಬಾಧೆ ಕಂಡುಬರುತ್ತಿದೆ.

ಹತ್ತಿ ಬೆಳೆ ಈಗ ಹೂವಾಡುವ ಮತ್ತು ಕಾಯಿ ಕಟ್ಟುತ್ತಿರುವ ಹಂತದಲ್ಲಿದೆ. ರೈತರು ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ, ವಾತಾವರಣವು ಬೆಳೆ ಮೇಲೆ ಪರಿಣಾಮ ಬೀರುತ್ತಿದೆ.

ಜಿಲ್ಲೆಯಲ್ಲಿ 1,22,973 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ  ಬಿತ್ತನೆಯಾಗಿದೆ. ಇದರಲ್ಲಿ ನೀರಾವರಿ ಆಶ್ರಿತದಲ್ಲಿ 48,266 ಹೆಕ್ಟೇರ್‌, ಖುಷ್ಕಿ ಭೂಮಿಯಲ್ಲಿ 74,707 ಹೆಕ್ಟೇರ್‌ ಹತ್ತಿ ಬೆಳೆಯಲಾಗಿದೆ. ತಂಪಿನ ವಾತಾವರಣದಿಂದ ಹತ್ತಿಯಲ್ಲಿ ಎಲೆ ಕೆಂಪಾಗುವುದು ಕಂಡುಬರುತ್ತಿದೆ. ಇದರಿಂದ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ಬಾಧೆ ಹೆಚ್ಚಾಗುತ್ತಿದೆ.

ಎಲೆ ಕೆಂಪಾಗುವಿಕೆಗೆ ಕಾರಣಗಳು: ಈಗ ಹತ್ತಿ ಬೆಳೆಯಲ್ಲಿ ಎಲೆ ಕೆಂಪಾಗುವುದು ಕಂಡುಬರುತ್ತದೆ. ಎಲೆಯಲ್ಲಿ ಸಾರಜನಕದ ಪ್ರಮಾಣ ಶೇ2 ಕ್ಕಿಂತ ಕಡಿಮೆಯಾದಾಗ ಎಲೆ ಕೆಂಪಾಗುವ ಪ್ರಮಾಣ ಹೆಚ್ಚಾಗುತ್ತ ಹೋಗುತ್ತದೆ. ಸಾರಜನಕ ಮತ್ತು ಮೆಗ್ನೇಷಿಯಂ ಪೋಷಕಾಂಶಗಳು ಪತ್ರ ಹರಿತ್ತು ಎಂಬ ವರ್ಣದ್ರವ್ಯದ ಕೇಂದ್ರ ಬಿಂದು, ಇವೆರಡರ ಕೊರತೆಯಿಂದ ಪತ್ರ ಹರಿತ್ತಿನ ಉತ್ಪಾದನೆ ಕಡಿಮೆಯಾಗಿ ಎಲೆ ಕೆಂಪಾಗುತ್ತದೆ. ಇದಲ್ಲದೆ ಪೋಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಕೊರತೆಯಿಂದಲೂ ಎಲೆ ಕೆಂಪಾಗುತ್ತದೆ.

ಸಾಮಾನ್ಯವಾಗಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ರೋಗದ ಬಾಧೆ ಹೆಚ್ಚಾಗತೊಡಗುತ್ತದೆ. ವಾತಾವರಣದಲ್ಲಿನ ಉಷ್ಣಾಂಶ ಕಡಿಮೆ ಇದ್ದಾಗ ಇದು ಕಾಣಿಸಿಕೊಳ್ಳುತ್ತದೆ. ಸಜ್ಜೆ ಮತ್ತು ಹತ್ತಿ ಬೆಳೆಯಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹುಳದ ಬಾಧೆ ಇರುವ ಕಾಯಿ ಕೊಳೆತು ತೂತು ಬಿದ್ದು, ಉದುರಿಬೀಳುತ್ತಿದೆ.

 ಪರಿಹಾರ ಕ್ರಮಗಳು: ‘ಈ ಕೀಡೆಯ ಭಾಧೆ ಕಂಡುಬಂದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಕೈಯಿಂದ ಕೀಟಗಳನ್ನು ಆಯ್ದು ನಾಶಪಡಿಸಬೇಕು. ಆದಷ್ಟೂ ಹೊಲದ ಸುತ್ತ ಕಳೆ ಬೆಳೆಯದಂತೆ ಕ್ರಮ ವಹಿಸಬೇಕು. ಕಳೆಯಲ್ಲಿ ಈ ಕೀಡೆ ಆಶ್ರಯ ಪಡೆದು ಮತ್ತೆ ಬೆಳೆಗೆ ಬರುವ ಸಂಭವ ಇರುತ್ತದೆ. ಕೀಟದ ಪತಂಗವು ಎಲೆಗಳ ಮೇಲೆ ಗುಂಪಾಗಿ ಮೊಟ್ಟೆಗಳನ್ನು ಇಡುವುದರಿಂದ ಮೊಟ್ಟೆಗಳು ಮತ್ತು ಮೊಟ್ಟೆಯಿಂದ ಹೊರಬಂದ ಮರಿ ಕೀಟಗಳನ್ನು ಎಲೆಯ ಮೇಲೆ ಕಂಡರೆ ಅವುಗಳನ್ನು ನಾಶಪಡಿಸಬೇಕು’ ಎಂದು ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕೆಂಗನಾಳ ಸಲಹೆ ನೀಡುತ್ತಾರೆ. 

‘ರೈತರು ರಸ ಹೀರುವ ಕೀಟಗಳನ್ನು ನಿಯಂತ್ರಣಮಾಡಬೇಕು. ಕೀಟಗಳು ಇರದಿದ್ದಲ್ಲಿ ಪ್ರತಿ ಎಕರೆಗೆ ನೀರಿನಲ್ಲಿ ಕರಗುವ ರಸಾವರಿ ಗೊಬ್ಬರವನ್ನು 1 ಕಿ.ಗ್ರಾಂ. ಮತ್ತು ಮೆಗ್ನೇಶಿಯಂ ಸಲ್ಫೈಟ್ 1 ಕಿ.ಗ್ರಾಂ. ಅನ್ನು 200 ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. ಬೂದು ತುಪ್ಪಟ ರೋಗದ ಲಕ್ಷಣಗಳು ಕಂಡುಬಂದಲ್ಲಿ ಜೈನೆಬ್ 68% + ಹೆಕ್ಸಾಕೊನಾಜೋಲ್ 4 % ರಸಾಯಕಿನಗಳನ್ನು ಹೊಂದಿರುವ ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ 2.5 ಗ್ರಾಂ ಬೆರಸಿ ಸಿಂಪರಣೆ ಮಾಡುವುದು ಸೂಕ್ತವಾಗಿದೆ’ ಎನ್ನುತ್ತಾರೆ ಅವರು.

ಪ್ರತಿಕ್ರಿಯಿಸಿ (+)