ಶನಿವಾರ, ಜನವರಿ 29, 2022
23 °C
ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ

ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಲಸಿಕೆ ನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ 15 ವರ್ಷದಿಂದ 18 ವರ್ಷದ ವಯೋಮಾನದ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ತೆರಳಿ ಕಡ್ಡಾಯವಾಗಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾಕರಣದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಓಮೈಕ್ರಾನ್ ಸೋಂಕು ಎಲ್ಲೆಡೆ ಹರಡುತ್ತಿದೆ. ಮೂರನೇ ಅಲೆ ಬರದಂತೆ ನಾವು ತಡೆಯಲು ಲಸಿಕಾಕರಣವೊಂದೇ ಅಸ್ತ್ರವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಎಚ್ಚರ ವಹಿಸಿ, ತಪ್ಪದೇ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿ ಕಾರ್ಯಕರ್ತರ ಮುಖಾಂತರ ಜಿಲ್ಲೆಯಲ್ಲಿ 4,783 ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕವಿತಾಳ ಮಾಹಿತಿ ನೀಡಿದರು. ಪ್ರತಿಯೊಬ್ಬರ ಮನೆಗೆ ತೆರಳಿ ಲಸಿಕೆ ನೀಡಲು ಜಿಲ್ಲಾಧಿಕಾರಿ ಸೂಚಿಸಿದರು.

ಪ್ರೌಢಶಾಲಾ ವಿಭಾಗದಲ್ಲಿ 37,078 ವಿದ್ಯಾರ್ಥಿಗಳು ಲಸಿಕಾಕರಣಕ್ಕೆ ಅರ್ಹರಿದ್ದು, ಶೇ 53 ರಷ್ಟು ಪ್ರಗತಿಯಾಗಿದೆ ಎಂದು ಡಿಡಿಪಿಐ ಶಾಂತಗೌಡ ಪಾಟೀಲ ಮಾಹಿತಿ ನೀಡಿದರು.

ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ 21,405 ವಿದ್ಯಾರ್ಥಿಗಳು ಲಸಿಕಾಕರಣಕ್ಕೆ ಅರ್ಹರಿದ್ದು, 11,405 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ್ದು, ಶೇ 56 ರಷ್ಟು ಪ್ರಗತಿಯಾಗಿದೆ ಎಂದು ಡಿಡಿಪಿಯು ಚಂದ್ರಕಾಂತ ಹಿಳ್ಳಿ ಮಾಹಿತಿ ನೀಡಿದರು.

ಎಲ್ಲಾ ಶಾಲಾ ಕಾಲೇಜುಗಳಿಗೆ ಲಸಿಕಾಕರಣ ಸಿಬ್ಬಂದಿ ತಂಡವನ್ನು ಕಳಿಸಿ ಶೇಕಡ ನೂರರಷ್ಟು ಗುರಿ ತಲುಪಲು ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಪಾಟೀಲ, ಆರ್‌ಸಿಎಚ್ಒ ಡಾ.ಲಕ್ಷ್ಮೀಕಾಂತ ಒಂಟಿಪೀರ, ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಶಹಾಪುರ ತಹಶೀಲ್ದಾರ್‌ ಮಧುರಾಜ್, ವಡಗೇರಾ ತಹಶೀಲ್ದಾರ್‌ ಸುರೇಶ ಅಂಕಲಗಿ, ಸುರಪುರ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಗುರುಮಠಕಲ್ ತಹಶೀಲ್ದಾರ್‌ ಶರಣಬಸವ, ಹುಣಸಗಿ ತಹಶೀಲ್ದಾರ್‌ ಅಶೋಕ ಸುರಪುಕರ್, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.