ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಕನ್ನಡ ಜಾಗೃತಿ ಕೈಬಿಟ್ಟ ಸರ್ಕಾರ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ಧರಾಮ ಹೊನ್ಕಲ್‌ ಆರೋಪ
Last Updated 24 ಡಿಸೆಂಬರ್ 2018, 19:53 IST
ಅಕ್ಷರ ಗಾತ್ರ

ಯಾದಗಿರಿ (ಜಿ.ಎಂ.ಗುರುಸಿದ್ದಪ್ಪ ಶಾಸ್ತ್ರಿ ಪ್ರಧಾನ ವೇದಿಕೆ): ‘ರಾಜ್ಯದಲ್ಲಿ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಕನ್ನಡಕ್ಕೆ ಕುತ್ತು ಬಂದಿದೆ. ಕನ್ನಡ ರಕ್ಷಣೆಗಾಗಿ ಬೊಬ್ಬೊ ಹೊಡೆಯುವ ಸರ್ಕಾರ ಗಡಿನಾಡ ಕೇಂದ್ರ ಕಚೇರಿಯನ್ನು ರಾಜಧಾನಿಯಲ್ಲಿಟ್ಟು, ಗಡಿನಾಡಿನಲ್ಲಿ ಕನ್ನಡ ಜಾಗೃತಿಯನ್ನು ಕೈಚೆಲ್ಲಿದೆ’ ಎಂದು ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ಧರಾಮ ಹೊನ್ಕಲ್‌ ಸರ್ಕಾರವನ್ನು ಟೀಕಿಸಿದರು.

ಇಲ್ಲಿನ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ನಾಲ್ಕನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ ಮಾಡಿದರು.

‘ಗಡಿಭಾಗದಲ್ಲಿನ ಕನ್ನಡಿಗರ ಬದುಕು ಮತ್ತು ಕನ್ನಡ ಶಾಲೆಗಳ ಸ್ಥಿತಿಗತಿ ಹಾಳಾಗಿದೆ. ಕನ್ನಡ ಕಲಿಕೆ ಕ್ಷೀಣಿಸುವ ಜತೆಗೆ ಅಲ್ಲಿನ ಜನರು ಕನ್ನಡ ಕಲಿಕೆ ಬಗ್ಗೆಯೂ ಅಸಡ್ಡೆ ಧೋರಣೆ ತಳೆಯುತ್ತಿದ್ದಾರೆ. ಇದಕ್ಕೆ ಗಡಿನಾಡಿನ ಕನ್ನಡಿಗರ ಬಗ್ಗೆ ಆಳುವವರು ತಳೆದಿರುವ ಮನೋಭಾವ ಕಾರಣವಾಗುತ್ತಿದೆ. ಸರ್ಕಾರ ಕೂಡ ಗಡಿನಾಡಿನ ಅಭಿವೃದ್ಧಿಯನ್ನು ಕೇವಲ ಗಡಿನಾಡ ಕೇಂದ್ರ ಕಚೇರಿಗೆ ವಹಿಸಿರುವುದು ಕೂಡ ಜನರ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದರು.

‘ಕನ್ನಡ ಮಾತೃಭಾಷೆ ಅಲ್ಲ. ಅದೊಂದು ಜೀವನ ಆಗಬೇಕು. ಆಗ ಮಾತ್ರ ಕನ್ನಡ ಭಾಷೆ ರಕ್ಷಣೆ ಆಗಲು ಸಾಧ್ಯವಾಗುತ್ತದೆ. ಇಷ್ಟು ದಿನ ಜನರಿಗಷ್ಟೇ ಇಂಗ್ಲಿಷ್‌ ವ್ಯಾಮೋಹ ಹತ್ತಿದೆ ಎನ್ನಲಾಗುತ್ತಿತ್ತು. ಆದರೆ, ಈಗ ಈ ವ್ಯಾಮೋಹ ಸರ್ಕಾಕ್ಕೂ ಅಂಟಿದೆ. ಪ್ರಾಥಮಿಕ ಹಂತದ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಉತ್ಸುಕವಾಗಿದೆ. ಪ್ರಜ್ಞಾವಂತ ಸಮುದಾಯ ಇದನ್ನು ವಿರೋಧಿಸುತ್ತಿದ್ದರೂ, ಸರ್ಕಾರ ಸಮರ್ಥಿಸುತ್ತಿರುವುದು ಮಾತ್ರ ವ್ಯವಸ್ಥೆಯ ದುರಂತ’ ಎಂದು ಆತಂಕ ವ್ಯಕ್ತಪಡಿಸಿದರು.

‘ಗೋಕಾಕ ಚಳುವಳಿಯಂತಹ ಹೋರಾಟದ ಮೂಲಕ ಕನ್ನಡ ಕಹಳೆ ಮೊಳಗಿಸಿದ್ದ ಎಷ್ಟೋ ಸಾಹಿತಿಗಳು ಕೂಡ ತಮ್ಮ ಮಕ್ಕಳನ್ನು ಇಂಗ್ಲಿಷ್‌ ಶಾಲೆಗಳಿಗೆ ಸೇರಿಸಿದ್ದಾರೆ. ವೇದಿಕೆಗಳಲ್ಲಿ ಕನ್ನಡ ರಕ್ಷಣೆಗಾಗಿ ನೀತಿಬೋಧೆ ಮಾಡುವವರೂ ಕೂಡ ಮಕ್ಕಳನ್ನು ಕನ್ನಡ ಕಲಿಕೆಯಿಂದ ದೂರು ಇಟ್ಟಿದ್ದಾರೆ. ಹಾಗಾದರೆ, ಕನ್ನಡ ರಕ್ಷಣೆಯಾರಿಂದ ಸಾಧ್ಯ? ಎನ್ನುವಂತಹ ಪ್ರಶ್ನೆ ಮತ್ತು ಸವಾಲು ಎದುರಾಗಿದೆ. ಈ ಸವಾಲು ಪ್ರಶ್ನೆಗೆ ಉತ್ತರಿಸುವವರ್‍್ಯಾರು? ಎನ್ನುವಂಥ ಸಂದಿಗ್ಧ ಸ್ಥಿತಿ ಉಂಟಾಗಿದೆ’ ಎಂದರು.

‘ಮಾತೃಭಾಷೆಯಲ್ಲಿ ಕಲಿತ ಮಗು ಆ ಭಾಷೆಯ ಮಾನವೀಯ ಸಂಬಂಧಗಳನ್ನು ಕಲಿಯುತ್ತದೆ ಮತ್ತು ಭಾವಾನಾತ್ಮಕವಾಗಿ ಸ್ಪಂದಿಸುತ್ತದೆ. ಅದು ಒಂದು ಸಂಸ್ಕೃತಿಯ ಬೆಳವಣಿಗೆಯ ಹಂತದಲ್ಲಿ ಕೈಜೋಡಿಸುತ್ತದೆ. ಕನ್ನಡದ ಕಲಿಕೆಯಿಂದ ಭಾವನಾತ್ಮಕವಾಗಿ ಬಳ್ಳಿ ಟಿಸಿಲೊಡೆದು ಕರುಳ ಸಂಬಂಧ ಕಲ್ಪಿಸುತ್ತದೆ. ಇಂಗ್ಲಿಷ್ ಸಂಸ್ಕೃತಿಯಿಂದ ನಿರ್ಭಾವುಕ ಯಂತ್ರಗಳನ್ನಾಗಿಸಬಾರದು’ ಎಂದು ಕರೆ ನೀಡಿದರು.

‘ಕನ್ನಡವೆಂದರೆ ಬರೀ ಕತೆ, ಕವನ, ಕಾದಂಬರಿ ಸಾಹಿತ್ಯ ಅಂದಷ್ಟೇ ತಿಳಿಯಬೇಕಿಲ್ಲ. ಕನ್ನಡ ಎಂದರೆ ಗಾಳಿ–ಬೆಳಕು, ನೆಲ–ಜಲ, ಸಂಸ್ಕೃತಿ– ಜೀವನ ಶೈಲಿ ಮತ್ತು ಬದುಕಿನ ಮೌನ್ಯವಾಗಬೇಕು. ಕನ್ನಡ ರಾಜ್ಯದಲ್ಲಿ ನೆಲೆಸಿರುವ ಎಲ್ಲಾ ಜಾತಿ, ಸಮುದಾಯ, ಧರ್ಮದವರು ಕನ್ನಡಿಗರಾಗಿರುತ್ತಾರೆ. ಅವರೆಲ್ಲರಲ್ಲೂ ಕನ್ನಡ ಜಾಗೃತಿ ಪ್ರಜ್ಞೆ ಮೊಳೆಯಬೇಕು’ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ,‘ಕನ್ನಡ ಶಾಲೆಗಳಿಗೆ ಸರ್ಕಾರ ಹೆಚ್ಚು ಸೌಲಭ್ಯ ನೀಡಬೇಕು. ಖಾಸಗಿ ಶಾಲೆಗಳನ್ನು ಸೆಡ್ಡು ಹೊಡೆಯುವಂತೆ ಸರ್ಕಾರಿ ಕನ್ನಡ ಶಾಲೆಗಳು ಸಶಕ್ತೀಕರಣಕ್ಕೆ ಸರ್ಕಾರ ಬದ್ಧತೆ ತೋರಬೇಕು. ಆಗ ಮಾತ್ರ ರಾಜ್ಯದಲ್ಲಿ ಕನ್ನಡ ಭಾಷೆ ಬೆಳೆಯಲು ಸಾಧ್ಯ’ ಎಂದರು.

ಅಖಿಲ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಮಾತನಾಡಿ,‘ಕನ್ನಡ ಭಾಷೆ, ಸಂಸ್ಕೃತಿ, ನೆಲಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು 104 ವರ್ಷಗಳಿಂದ ದುಡಿಯುತ್ತಿದೆ. 8 ಸಂಪುಟಗಳನ್ನು ಹೊರತರುವ ಮೂಲಕ ಭಾಷೆ ರಕ್ಷಣೆಗೆ ಬದ್ಧತೆಯಿಂದ ಶ್ರಮಿಸುತ್ತಿದೆ’ ಎಂದರು

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ,‘ಜಿಲ್ಲೆಯ ಸಮಸ್ತ ಕನ್ನಡಿಗರು ಕೈಜೋಡಿಸಿರುವ ಕಾರಣ ಇಂಥಾ ಉತ್ತಮ ಕನ್ನಡದ ವೇದಿಕೆ ನಿರ್ಮಾಣಕ್ಕೆ ಸಾಧ್ಯವಾಗಿದೆ. ಭಾಷೆ ವಿಷಯದಲ್ಲಿ ಕೈಜೋಡಿಸುವುದನ್ನು ಕನ್ನಡಿಗರು ಮರೆಯಬಾರದು’ ಎಂದರು.

ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ,‘ಗಡಿನಾಡಲ್ಲಿ ಕನ್ನಡ ಉಳಿಸಿ ರಕ್ಷಿಸಲು ಯುವಕರು ಮುಂದಾಗಬೇಕು’ ಎಂದರು.

12 ಕೃತಿಗಳನ್ನು ಶಾಸಕ ನಾಗನಗೌಡ ಕಂದಕೂರು ಲೋಕಾರ್ಪಣೆಗೊಳಿಸಿದರು.

ನಿಟಕ ಪೂರ್ವ ಅಧ್ಯಕ್ಷ ರಂಗರಾಜ ವನದುರ್ಗ, ಯಾದಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ ಭೀಮರಾಯ ಲಿಂಗೇರಿ, ಸುರಪುರ ಕಸಾಪ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ, ಶಹಾಪುರ ಕಸಾಪ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಆನೆಗುಂದಿ, ವಡಾಗೇರಿ ತಾಲ್ಲೂಕು ಕಸಾಪು ಅಧ್ಯಕ್ಷ ಗಾಳೆಪ್ಪ ಪೂಜಾರಿ, ಗುರುಮಠಕಲ್‌ ತಾಲ್ಲೂಕು ಕಸಾಪ ಅಧ್ಯಕ್ಷ ಬಸರೆಡ್ಡಿ ಎಂಟಿ ಪಲ್ಲಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಸುಭಾಶ್ವಂದ್ರ ಕೌಲಗಿ, ಕೋಶಾಧ್ಯಕ್ಷ ಎಸ್.ಎಸ್. ನಾಯಕ, ಗೌರವ ಕಾರ್ಯದರ್ಶಿ ಪ್ರಕಾಶ ಅಂಗಡಿ, ಬಸವರಾಜ ಮೋಟ್ನಳ್ಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT