ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ಮೂಲ ಸೌಕರ್ಯ ವಂಚಿತ ಬಸ್ ನಿಲ್ದಾಣ

ಸೌಲಭ್ಯ ಕಲ್ಪಿಸಲು ವಿವಿಧ ಸಂಘಟನೆಗಳ ಆಗ್ರಹ
Published 30 ಏಪ್ರಿಲ್ 2024, 5:50 IST
Last Updated 30 ಏಪ್ರಿಲ್ 2024, 5:50 IST
ಅಕ್ಷರ ಗಾತ್ರ

ಸೈದಾಪುರ: ಪಟ್ಟಣದ ಬಸ್‌ನಿಲ್ದಾಣ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ನಿಲ್ದಾಣದ ಶೌಚಾಲಯ ನಿರ್ವಹಣೆ ಇಲ್ಲದೇ ದುರ್ನಾತ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಪಟ್ಟಣದ ಬಸ್ ನಿಲ್ದಾಣದಿಂದ ರಾಯಚೂರು, ಯಾದಗಿರಿ, ಗುರುಮಠಕಲ್, ನಾರಾಯಣಪೇಠ, ಕಲಬುರಗಿ, ಶಹಾಪುರ, ಬೆಂಗಳೂರು, ಧರ್ಮಸ್ಥಳ, ಶ್ರೀಶೈಲ, ತಿರುಪತಿ, ವಿಜಯಪುರ, ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಲಿನ ಸುಮಾರು 25 ಗ್ರಾಮಗಳ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನವಾಗಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯವಾದ ಶುದ್ಧ ಕುಡಿಯುವ ನೀರು, ಫ್ಯಾನ್, ಪ್ರಮುಖವಾಗಿ ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ ಪ್ರಯಾಣಿಕರು ಪರಿತಪಿಸುವಂತಾಗಿದೆ.

ದುರ್ನಾತ ಬೀರುವ ಶೌಚಾಲಯ: ನಿಲ್ದಾಣದ ಆವರಣದಲ್ಲಿ ಪ್ರವೇಶಿಸಿದರೆ ಶೌಚಾಲಯದ ದುರ್ನಾತ ಮೂಗಿಗೆ ಬಡಿಯುತ್ತದೆ. ಇದರಿಂದ ಪ್ರಯಾಣಿಕರು ಬೇಸತ್ತಿದ್ದಾರೆ. ನಿರ್ವಹಣೆ ಕೊರತೆಯಿಂದಾಗಿ ಸ್ವಚ್ಛತೆ ಮರೀಚಿಕೆಯಾಗಿದೆ. ಮೂತ್ರಾಲಯಗಳು ಕಸ-ಕಡ್ಡಿಯಿಂದ ತುಂಬಿಕೊಂಡು, ದುರ್ನಾತ ಬೀರುತ್ತಿದೆ. ಹೀಗಾಗಿ ಪ್ರಯಾಣಿಕರು ಬಯಲನ್ನೇ ಆಶ್ರಯಿಸಬೇಕಾಗಿದ್ದು, ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮಹಿಳೆಯರಿಗೆ ಸಂಕಷ್ಟ: ಮಹಿಳೆಯರು ಮೂಗಿಗೆ ಬಟ್ಟೆ ಕಟ್ಟಿಕೊಂಡು ಶೌಚಕ್ಕೆ ಹೋಗಿ ಬರುವಂತಾಗಿದೆ. ಅಲ್ಲದೇ ಮಲವಿಸರ್ಜನೆ ಕೋಣೆಗಳಿಗೆ ಬೀಗ ಹಾಕಿರುವುದರಿಂದ ಮಹಿಳೆಯರು ಮತ್ತು ಪುರುಷರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ: ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯಲು ಶುದ್ಧ ನೀರಿನ ವ್ಯವಸ್ಥೆಯಿಲ್ಲ. ಅಂಗಡಿಗಳಲ್ಲಿ ₹20-30 ಕೊಟ್ಟು ನೀರು ಖರೀದಿಸುವಂತಾಗಿದೆ. ಫ್ಯಾನ್ ವ್ಯವಸ್ಥೆಯು ಇಲ್ಲ. ಇದರಿಂದ  ಮಕ್ಕಳು, ವೃದ್ಧರು ತೊಂದರೆ ಅನುಭವಿಸುವಂತಾಗಿದೆ.

ಬೇಜವಾಬ್ದಾರಿ ವರ್ತನೆ: ನಿಲ್ದಾಣ ನಿರ್ಮಾಣ ಆದಾಗಿನಿಂದಲೂ ಸಮಸ್ಯೆಯಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಇದು ಅವರ ಬೇಜವ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರ ನಿತ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಬಳಿಕ  ನೆಪ ಮಾತ್ರಕ್ಕೆ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು, ವಾಹನದಲ್ಲಿ ಕುಳಿತೇ ವೀಕ್ಷಣೆ ಮಾಡಿ ಹೊರಟು ಹೋಗುತ್ತಾರೆ. ಇದರಿಂದ ಪ್ರಯಾಣಿಕರಿಗೆ ದುರ್ನಾತದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂಬುದು ಪ್ರಯಾಣಿಕರ ಅಳಲು.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಪಟ್ಟಣದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ರೈಲು ಮತ್ತು ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳಿಗೆ ಸದಾ ಬೀಗ ಹಾಕಿರುವುದರಿಂದ ಮಹಿಳಾ ಪ್ರಯಾಣಿಕರು ಪರದಾಡುವಂತಾಗಿದೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡದ ಜನಪ್ರತಿನಿಧಿಗಳನ್ನು ಗೆಲ್ಲಿಸುವ ಅವಶ್ಯಕತೆಯಿಲ್ಲ. ಜನಸಂದಣಿ ಇರುವೆಡೆ ಶೌಚಾಲಯ ನಿರ್ಮಿಸಬೇಕು. ಇಲ್ಲವಾದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ವಿವಿಧ ಸಂಘ-ಸಂಘಟನೆಗಳು ಎಚ್ಚರಿಕೆ ನೀಡಿವೆ.

ಬಸ್ ನಿಲ್ದಾಣದ ಶೌಚಾಲಯದಿಂದ ಚರಂಡಿ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರು ಸಹಕಾರ ನೀಡುತ್ತಿಲ್ಲ. ಚುನಾವಣೆ ಮುಗಿದ ಬಳಿಕ ನಿಲ್ದಾಣದಲ್ಲಿ ದೊಡ್ಡ ಮಟ್ಟದ ಸೇಪ್ಟಿಕ್ ಟ್ಯಾಂಕ್ ನಿರ್ಮಿಸಲಾಗುವುದು
-ಸುನಿಲ ಕುಮಾರ ಚಂದರಗಿ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಯಾದಗಿರಿ
ಸಂಬಂಧಿಸಿದವರು ಶೀಘ್ರ ಸಮಸ್ಯೆ ಸರಿಪಡಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಕೊಡಬೇಕು. ಇಲ್ಲವಾದರೆ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು
ಪಾರ್ವತಮ್ಮ ನಾಯಕ, ಅಧ್ಯಕ್ಷೆ ಸಮೃದ್ಧಿ ಮಹಿಳಾ ಸ್ವಸಹಾಯ ಸಂಘ ಸೈದಾಪುರ
ಪ್ರಯಾಣಿಕರಿಗೆ ಮೂಲಸೌಕರ್ಯಗಳಿಲ್ಲ. ಆದರೆ ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸದಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿ
ವಿಜಯ ಕಂದಳ್ಳಿ, ಅಧ್ಯಕ್ಷ ಯೂತ್ ಬ್ಲಾಕ್ ಕಾಂಗ್ರೆಸ್ ಸೈದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT