ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಸಿ, ತರಕಾರಿ ವ್ಯಾಪಾರಕ್ಕೆ ಸಮಯ ನಿಗದಿ

ಜಿಲ್ಲಾಡಳಿತದಿಂದ ಕಠಿಣ ಕ್ರಮ, ಸಂಜೆ 4ರವರೆಗೆ ಮಾತ್ರ ಅವಕಾಶ
Last Updated 6 ಏಪ್ರಿಲ್ 2020, 15:06 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲೆಯಾದ್ಯಂತ ಬೆಳಿಗ್ಗೆ 4 ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ದಿನಬಳಕೆಯ ದಿನಸಿ, ತರಕಾರಿ, ಹಣ್ಣು ಹಂಪಲುಗಳ ಅಂಗಡಿಗಳು ತೆರೆಯಬೇಕು. ಇತರೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೋಮವಾರ ಆದೇಶ ಹೊರಡಿಸಿದ್ದಾರೆ.

ನೆರೆಯ ಕಲಬುರ್ಗಿ ಜಿಲ್ಲೆಯಲ್ಲಿ ಕೋವಿಡ್-19ಗೆ ಒಬ್ಬರು ಮೃತಪಟ್ಟು ಹಾಗೂ ಐವರಲ್ಲಿ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ನೆರೆ ರಾಜ್ಯಗಳ ಜಿಲ್ಲೆಗಳಲ್ಲಿ ಕೊರೊನಾ ವೈರಾಣು ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಏಪ್ರಿಲ್ 14ರ ಮಧ್ಯರಾತ್ರಿಯವರೆಗೆ ಜಿಲ್ಲೆಯ ಸಾರ್ವಜನಿಕರು ಅನುಸರಿಸಬೇಕಾದ ಅನುಸರಣ ಕ್ರಮಗಳನ್ನು ವಿಧಿಸಿ ಆದೇಶಿಸಿದ್ದಾರೆ.

ಪೆಟ್ರೋಲ್ ಬಂಕ್ ಗಳು ಖಾಸಗಿ ವಾಹನಗಳಿಗೆ ಬೆಳಿಗ್ಗೆ 4 ಗಂಟೆಯಿಂದ ಸಂಜೆ 4ರ ವರೆಗೆ ಮಾತ್ರ ಇಂಧನ ವಿತರಿಸಬೇಕು. ಸರಕು ಸಾಗಾಣಿಕೆ ವಾಹನಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಪ್ರತಿ ಮನೆಯಿಂದ ಆರೋಗ್ಯವಂತ ವ್ಯಕ್ತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಮಯ ನಿಗದಿಪಡಿಸಲಾಗಿದ್ದರೂ ನಿಷೇಧಾಜ್ಞೆಯ ಸಮಯದಲ್ಲಿ ಸಾರ್ವಜನಿಕರು ವಿನಾಕಾರಣ ತಿರುಗಾಡುವುದು, ಗುಂಪುಗೂಡುವುದು ಮಾಡುವಂತಿಲ್ಲ.

ಮಳಿಗೆಗಳ ಮಾಲೀಕರು ತಮ್ಮ ಅಂಗಡಿ ಮುಂದೆ ಜನಸಂದಣಿ ಸೇರದಂತೆ ವ್ಯಕ್ತಿಯಿಂದ ವ್ಯಕ್ತಿಗೆ 1 ಮೀಟರ್ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಗುರುತು ಮಾಡುವ ಬಗ್ಗೆ ಕ್ರಮ ವಹಿಸುವುದು. ಇಲ್ಲದಿದ್ದಲ್ಲಿ ಅಂಥ ಅಂಗಡಿ ಮಾಲೀಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ಆದೇಶವು ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಸಿಲಿಂಡರ್ ವಿತರಣಾ ವ್ಯವಸ್ಥೆ, ದಿನ ಪತ್ರಿಕೆಗಳ ವಿತರಣೆ, ಬ್ಯಾಂಕ್/ಎ.ಟಿ.ಎಂ.ಗಳು, ಗೃಹ ಬಳಕೆಯ ಇಂಧನದ ಟ್ಯಾಂಕರ್ ಗಳು, ಪಡಿತರ ವಿತರಣೆ ಹಾಗೂ ಶವ ಸಂಸ್ಕಾರ ಇತ್ಯಾದಿ ಸೇವೆಗಳು ಹಾಗೂ ತುರ್ತು ಸೇವೆಗಳಿಗೆ ಅನ್ವಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಈ ಆದೇಶವನ್ನು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಈ ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಲ್ಲಿ ಜವಾಬ್ದಾರರಾಗಿರುತ್ತಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರೊಂದಿಗೆ ಏ.5ರಂದು ಜಿಲ್ಲಾಡಳಿತ ಭವನದಲ್ಲಿ ಚರ್ಚಿಸಿದಂತೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುತ್ತೋಲೆಯನ್ವಯ ಮತ್ತು ಭಾರತ ದಂಡ ಪ್ರಕ್ರಿಯೆ ಸಂಹಿತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶ ಹೊರಡಿಸಿದ್ದಾರೆ.

***

ದಿನಸಿ ಖರೀದಿಗೆ ಬಂದಾಗ ಸಾರ್ವಜನಿಕರು ಅವಸರ ಪಡದೇ, ಗುಂಪುಗೂಡದೇ ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ ಒಂದು ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT