ಗುರುವಾರ , ಜನವರಿ 23, 2020
22 °C
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಅವರಿಂದ ಕಾಮಗಾರಿಗಳ ಪರಿಶೀಲನೆ

‘ಜಿಲ್ಲೆಯ ಅಭಿವೃದ್ಧಿ ಕಾಮಗಾರಿ ತ್ವರಿತಗತಿಗೆ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಹೇಳಿದರು.

ಶನಿವಾರ ಜಿಲ್ಲೆಯ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿ, ನೂತನ ಜಿಲ್ಲಾಸ್ಪತ್ರೆ (ವೈದ್ಯಕೀಯ ಕಾಲೇಜು) ಕಟ್ಟಡ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜಿಲ್ಲೆಯಲ್ಲಿ 300 ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧವಾಗಿದೆ. ಈ ಆಸ್ಪತ್ರೆಗೆ ರಾಷ್ಟ್ರೀಯ ಹೆದ್ದಾರಿ (ಮುಖ್ಯರಸ್ತೆ) ಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಜನವರಿ ಅಂತ್ಯಕ್ಕೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆಸ್ಪತ್ರೆಗೆ ಮಾನವ ಸಂಪನ್ಮೂಲ ವಾರ್ಷಿಕ ವೆಚ್ಚ ₹ 50 ಕೋಟಿ ಆಗಲಿದ್ದು, ವೈದ್ಯರು ಮತ್ತು ಸಿಬ್ಬಂದಿಗಳ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪೀಠೋಪಕರಣ ಮತ್ತು ವೈದ್ಯಕೀಯ ಸಾಮಗ್ರಿ ಒದಗಿಸಲು ಟೆಂಡರ್ ಕರೆಯಲಾಗಿದೆ. ನೂತನ ಜಿಲ್ಲಾಸ್ಪತ್ರೆ ಕಾರ್ಯರೂಪಕ್ಕೆ ಬಂದಲ್ಲಿ ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ಕೂಡ ಆರಂಭಿಸಲು ಅನುಕೂಲವಾಗಲಿದೆ’ ಎಂದರು.

‘ಜಿಲ್ಲಾಸ್ಪತ್ರೆಯಲ್ಲಿ ಮಳೆ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು. ಜಲ ಮರುಪೂರ್ಣಕ್ಕಿಂತ ಮಳೆನೀರು ಮರುಬಳಕೆ ಮಾಡಲು ವ್ಯವಸ್ಥೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮುನ್ನ ತಾಲ್ಲೂಕಿನ ಬಂದಳ್ಳಿ ಗ್ರಾಮದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಅನುಷ್ಠಾನಗೊಳಿಸುತ್ತಿರುವ ಏಕಲವ್ಯ ಮಾದರಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ‘ಪ್ರಾಂಶುಪಾಲರನ್ನು ನೇಮಕ ಮಾಡಿ ಬರುವ ಜೂನ್ 1 ರಿಂದ ವಸತಿ ಶಾಲೆ ಆರಂಭಿಸಬೇಕು. ನೇಮಕ ವಿಳಂಬವಾದಲ್ಲಿ ಪ್ರಾಂಶುಪಾಲರ ನಿಯೋಜನೆ ಮಾಡುವಂತೆ’ ತಿಳಿಸಿದರು.

ವಸತಿ ಶಾಲೆಯ ಹತ್ತಿರ ನಿರ್ಮಾಣವಾಗುತ್ತಿರುವ ಹೈಟೆಕ್ ಜವಳಿ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ‘ತರಬೇತಿ ಕೇಂದ್ರವನ್ನು ಮಾರ್ಚ್ ಅಂತ್ಯದೊಳಗೆ ಆರಂಭಿಸಬೇಕು. ತರಬೇತಿಗಾಗಿ ಮಷೀನ್‍ಗಳು ಬಂದ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ, ವಿದ್ಯುತ್ ಸಂಪರ್ಕ ಇಲ್ಲವೆಂದು ನೆಪ ಹೇಳುವಂತಿಲ್ಲ’ ಎಂದು ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅನುದಾನ ಬಿಡುಗಡೆಗೆ ಸೂಚನೆ: 

ತಾಲ್ಲೂಕಿನ ಎಂ.ಹೊಸಳ್ಳಿ ತಾಂಡಾದಲ್ಲಿ ಅಲೆಮಾರಿ ಸಮುದಾಯದ ವಸತಿ ಕಾಲೊನಿಯಲ್ಲಿ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ಪರಿಶೀಲಿಸಿದ ಅವರು, ಪ್ರತಿ ಮನೆಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದಿಂದ ₹ 1.5 ಲಕ್ಷ ಹಾಗೂ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ₹ 3.5 ಲಕ್ಷ ಫಲಾನುಭವಿಗಳಿಗೆ ಸಂದಾಯವಾಗುತ್ತದೆ. ₹ 3.5 ಲಕ್ಷಗಳ ಪೈಕಿ ₹ 1.75 ಲಕ್ಷ ಮಾತ್ರ ಬಂದಿದೆ ಎಂಬುದಾಗಿ ಅಧಿಕಾರಿಗಳಿಂದ ವರದಿ ಪಡೆದರು. ಸ್ಥಳದಲ್ಲಿಯೇ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಕರೆ ಮಾಡಿ, ಜಿಲ್ಲಾಧಿಕಾರಿಗಳಿಂದ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿ 6 ತಿಂಗಳಾಗಿದೆ. ಸೋಮವಾರದೊಳಗೆ ಅನುದಾನ ಬಿಡುಗಡೆ ಮಾಡಬೇಕು. ಅದೇ ರೀತಿ ವಸತಿ ನಿಗಮದಿಂದಲೂ ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಸೂಚಿಸಿದರು.

ನಗರದ ಬಾಲಕಿಯರ ಬಾಲ ಮಂದಿರ, ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಯಾದಗಿರಿಯ ನಾಲಾ ಹೂಳೆತ್ತಿರುವ ಕಾಮಗಾರಿಯನ್ನೂ ಕೂಡ ಮುಖ್ಯ ಕಾರ್ಯದರ್ಶಿ ಪರಿಶೀಲಿಸಿದರು. ನಂತರ ನಾಗರಬಂಡ ಅಂಗನವಾಡಿ ಕೇಂದ್ರ, ಸೈದಾಪುರದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದರು. ನಂತರ ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು