ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಯಬಣ್ಣ ವೃತ್ತಿ ಜೀವನ ಅನುಕರಣೀಯ: ಶಾಸಕ ರಾಜಾ ವೇಣುಗೋಪಾಲನಾಯಕ

Published 16 ಜೂನ್ 2024, 15:55 IST
Last Updated 16 ಜೂನ್ 2024, 15:55 IST
ಅಕ್ಷರ ಗಾತ್ರ

ಸುರಪುರ: ‘25 ವರ್ಷ ನ್ಯಾಯಾಂಗ ಇಲಾಖೆಯಲ್ಲಿ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಸಾಯಬಣ್ಣ ಮೇಲಗಲ್ ಅವರ ವೃತ್ತಿ ಜೀವನ ಅನುಕರಣೀಯ. ನಮ್ಮ ಭಾಗದ ಗ್ರಾಮೀಣ ಪ್ರದೇಶದಿಂದ, ಬಡತನದಲ್ಲಿ ಹುಟ್ಟಿ, ಬೆಳೆದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.

ಸಮೀಪದ ಹಸನಾಪುರದಲ್ಲಿ ಭಾನುವಾರ ಸಾಯಬಣ್ಣ ಅವರಿಗೆ ಏರ್ಪಡಿಸಿದ್ದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಯಬಣ್ಣ ಮೇಲಗಲ್, ‘ನ್ಯಾಯಾಧೀಶ ಹುದ್ದೆ ಅತ್ಯಂತ ಕ್ಲೀಷ್ಟಕರವಾದದ್ದು. ನಾನು, ನನ್ನವರು, ಬಂಧು, ಬಳಗ ಎಲ್ಲವನ್ನು ಮರೆತು ಜಾತಿ, ಧರ್ಮ ಬದಿಗಿಟ್ಟು ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಎಲ್ಲಿಯೂ ಹೊರ ಹೋಗುವಂತಿಲ್ಲ. ಸಾರ್ವಜನಿಕವಾಗಿ ಬೆರೆಯುವಂತಿಲ್ಲ’ ಎಂದು ಹೇಳಿದರು.

‘ಕೆಲ ಪ್ರಸಂಗಗಳಲ್ಲಿ ಕಠಿಣ ನಿಲುವು ಎದುರಿಸಬೇಕಾಗುತ್ತದೆ. ಏನೇ ಸಮಸ್ಯೆ ಬಂದರೂ ಎದೆಗುಂದದೆ ತಾಳ್ಮೆಯನ್ನು ಕಳೆದುಕೊಳ್ಳದೆ ಪ್ರಾಂಜಲ ಮನಸ್ಸಿನಿಂದ ನಡೆದುಕೊಳ್ಳಬೇಕಾಗುತ್ತದೆ. ನಾವೇನೆ ತೀರ್ಮಾನ ಕೈಗೊಂಡರೂ ಆತ್ಮ ಸಾಕ್ಷಿಗೆ ಒಪ್ಪುವಂತಿರಬೇಕಾಗುತ್ತದೆ. ಕಾನೂನು ಚೌಕಟ್ಟಿನಲ್ಲಿ ನ್ಯಾಯದಾನ ನೀಡಬೇಕಾಗುತ್ತದೆ’ ಎಂದು ಹೇಳಿದರು.

ಯಲ್ಲಾಪುರ ಜೆಎಂಎಫ್‍ಸಿ ಹಿರಿಯ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ಆರ್. ಕವಲಿ ಮಾತನಾಡಿ, ‘ಸುರಪುರದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಸಾಯಬಣ್ಣ ಅವರು ನ್ಯಾಯಾಧೀಶರ ಹುದ್ದೆಗೆ ಏರಿದ್ದು ಪ್ರಶಂಸನೀಯ. ಇದು ವಕೀಲರ ಸಂಘಕ್ಕೆ ಸಂದ ಗೌರವವಾಗಿದೆ’ ಎಂದರು.

ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ, ಕೆ. ಅರವಿಂದಕುಮಾರ, ಎಂ.ಎಸ್. ಹಿರೇಮಠ, ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿದರು.

ಸಾಯಬಣ್ಣ ಮೇಲಗಲ್ ದಂಪತಿಯನ್ನು ಸನ್ಮಾನಿಸಲಾಯಿತು
ಸಾಯಬಣ್ಣ ಮೇಲಗಲ್ ದಂಪತಿಯನ್ನು ಸನ್ಮಾನಿಸಲಾಯಿತು

ಗಡಿಸೋಮನಾಳದ ಇಂದುಧರ ಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ, ಬೆಂಗಳೂರಿನ ಡಿವೈಎಸ್‍ಪಿ ಗಜರಾಜ ಮಾಕನೂರ, ಶಹಾಪುರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸಂಗಪ್ಪ ರಾಂಪುರೆ, ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ವೆಂಕೋಬ ಸಾಹುಕಾರ ಮಂಗಳೂರು, ಸಿದ್ದನಗೌಡ ಕರಿಭಾವಿ ಭಾಗವಹಿಸಿದ್ದರು. ಯಲ್ಲಪ್ಪ ಕರಡಿಗುಡ್ಡ ಸ್ವಾಗತಿಸಿದರು. ಸಂಗಣ್ಣ ಗುಳಗಿ, ಶಿವಮೂರ್ತಿ ಮಠ ನಿರೂಪಿಸಿದರು. ಶರಣಗೌಡ ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT