ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಷ್ಟಾನ್ನ– ಅಂಬಲಿ ಒಂದೇ ಅಲ್ಲ

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ರಂಗರಾಜ ವನದುರ್ಗ ಅಭಿಮತ
Last Updated 24 ಡಿಸೆಂಬರ್ 2018, 15:44 IST
ಅಕ್ಷರ ಗಾತ್ರ

ಯಾದಗಿರಿ: ‘ಬರಹಗಾರರಿಗೆ ನೈತಿಕ ಸಿದ್ಧಾಂತ ಇರಬೇಕು. ಬದುಕು– ಬರಹ ಏಕಮಾರ್ಗವಾಗಿರಬೇಕು’ ಎಂದು ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ರಂಗರಾಜ ವನದುರ್ಗ ಎಂದು ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮ್ಮೇಳನದಲ್ಲಿ ಅವರು ಸಮ್ಮೇಳನಾಧ್ಯಕ್ಷ ಸಿದ್ಧರಾಮ ಹೊನ್ಕಲ್‌ ಅವರಿಗೆ ಪರಿಷತ್‌ ಧ್ವಜ ಹಸ್ತಾಂತರಿಸಿ ಮಾತನಾಡಿದರು.

‘ಬಸವ, ಗಾಂಧಿ, ಅಂಬೇಡ್ಕರ್, ಮಾರ್ಕ್ಸ್‌ ಬರಹಗಾರರಾಗಿದ್ದರು. ಈ ಬರಹಗಾರರಿಗೆ ಬರವಣಿಗೆಯ ಬದ್ಧತೆ ಮತ್ತು ಸಮಾಜ ಏಳಿಗೆಯ ಬಗ್ಗೆ ಕಳಕಳಿ ಇದುದ್ದರಿಂದಲೇ ಇಂದು ಸಮಾಜದ ಪ್ರಗತಿ ಸಾಧ್ಯವಾಗಿದೆ. ಬಸವಣ್ಣ– ಕಲ್ಯಾಣ ರಾಜ್ಯ, ಗಾಂಧಿ– ರಾಮ ರಾಜ್ಯ, ಕನಕದಾಸರ– ರಾಗಿ ರಾಜ್ಯ, ಅಂಬೇಡ್ಕರ್– ಪ್ರಜಾಪ್ರಭುತ್ವ ರಾಜ್ಯ, ಮಾರ್ಕ್ಸ್ –ಕಾರ್ಮಿಕ ರಾಜ್ಯ ಕಟ್ಟುವ ಕನಸಿತ್ತು. ಅವರಿಗೆ ಇಂಥಾ ಕನಸಿನ ಮಾರ್ಗದಲ್ಲಿ ಬದುಕು– ಬರಹ ಮಾಡಿದ್ದರಿಂದಲೇ ಇಂದು ಅವರು ಜನರಲ್ಲಿ ಸ್ಥಾಯಿರೂಪ ಪಡೆದಿದ್ದಾರೆ. ಅವರ ಸಾಹಿತ್ಯ ಜಂಗಮ ರೀತಿಯಲ್ಲಿ ಉಳಿದುಕೊಂಡಿದೆ’ ಎಂದು ವಿಶ್ಲೇಷಿಸಿದರು.

‘ಉಳ್ಳವರು– ಇಲ್ಲದವರ ಎರಡು ವರ್ಗಗಳೂ ಈಗಲೂ ಇವೆ. ಅದರೆ, ಬರಹಗಾರರ ಅಂತಃಕರಣ ಮತ್ತು ಅಂತಃಚಕ್ಷುಗಳು ಇಲ್ಲದ ಕಾರಣ ಈ ವರ್ಗ ಕಾಣುತ್ತಿಲ್ಲ. ಬರಹಗಾರರಿಗೆ ನೈತಿಕ ಸಿದ್ಧಾಂತ ಇದ್ದಾಗ ಮಾತ್ರ ಉಳ್ಳವರ–ಇಲ್ಲದವರ ಸ್ಥಿತಿಗತಿ ಕಾಣಲು ಸಾಧ್ಯ. ಇಂದು ಕಾನ್ವೆಂಟ್ ಮುಂದೆ ಡೊನೇಶನ್ ಕಟ್ಟುವವರ ಸಾಲಿದೆ. ಅದೇ ಸರ್ಕಾರಿ ಅಂಗನವಾಡಿ ಕೇಂದ್ರಗಳ ಮುಂದೆ ಬಿಸಿಯೂಟಕ್ಕಾಗಿ ಹಪಹಪಿಸುವವರ ಸಾಲಿದೆ. ಕಾನ್ವೆಂಟ್‌ ಎದುರು ಅರ್ಜುನರು ಇದ್ದಾರೆ. ಅಂಗನವಾಡಿಗಳ ಮುಂದೆ ಏಕಲವ್ಯರು ಇದ್ದಾರೆ. ಕಾನ್ವೆಂಟ್‌ –ಅಂಗನವಾಡಿಕೇಂದ್ರ ಎರಡೂ ಸಮವಲ್ಲ. ಮೃಷ್ಟಾನ್ನ– ಅಂಬಲಿ ಒಂದೇ ಅಲ್ಲ. ಈ ಎರಡರಲ್ಲಿ ಯಾರ ಬಗ್ಗೆ ಬರಹಗಾರರು ಬರೆಯಬೇಕು ಎಂಬುದು ಯೋಚಿಸಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.

‘ಬಸವಣ್ಣ, ಮಹಾತ್ಮ ಗಾಂಧಿ, ಬುದ್ಧನಿಗೆ ಎಲ್ಲವೂ ಇದ್ದವು. ಆದರೆ, ಅವರು ಎಲ್ಲ ಇದ್ದುದ್ದನ್ನು ಬಿಟ್ಟು ಇಲ್ಲದವರ ಮಧ್ಯೆ ಬದುಕಿದರು. ಹಾಗಾಗಿ, ಚರಿತ್ರೆಯಲ್ಲಿ ಉಳಿದುಕೊಂಡಿದ್ದಾರೆ. ಸ್ವಂತಕ್ಕೆ ಬಿಟ್ಟು, ಸಮಾಜಕ್ಕಾಗಿ ಬದುಕಿದ ಇವರು ನಮಗೆ ಮಾದರಿ ಆಗಿದ್ದರೂ, ನಾವುಗಳು ಮತ್ಯಾರನ್ನೋ ಮಾದರಿಯಾಗಿ ಅನುಸರಿಸುತ್ತಿದ್ದೇವೆ’ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT