ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ಅವೈಜ್ಞಾನಿಕ ಚರಂಡಿ, ಗೊರೆನೂರ್ ಗ್ರಾಮಕ್ಕೆ ಬೇಕಿದೆ ಸೌಲಭ್ಯ

ಕುಡಿಯುವ ನೀರಿನ ಸಮಸ್ಯೆಯಿಂದ ಹೈರಾಣಾದ ಗ್ರಾಮಸ್ಥರು
Last Updated 28 ಸೆಪ್ಟೆಂಬರ್ 2021, 3:07 IST
ಅಕ್ಷರ ಗಾತ್ರ

ಗೊರೆನೂರ್(ಸೈದಾಪುರ): ಗಡಿ ಭಾಗದಲ್ಲಿರುವ ಗೊರೆನೂರ್ ಗ್ರಾಮವು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಜೈಗ್ರಾಮದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ 1,500 ಜನರು ವಾಸ ಮಾಡುತ್ತಿದ್ದಾರೆ. ಆದರೆ ಈ ಗ್ರಾಮದಲ್ಲಿ ಮೂಲಸೌಲಭ್ಯಗಳು ಮರೀಚಿಕೆಯಾಗಿವೆ.

ಗ್ರಾಮದ ಬೇಗಾರ್ ಓಣಿ, ಕಬ್ಬಲಿಗರ ಓಣಿಯ ಸರ್ಕಾರಿ ಬಾವಿ ಹತ್ತಿರ ಹಾಗೂ ಸಾರ್ವಜನಿಕರು ಕುಡಿಯುವ ನೀರು ತುಂಬುವ ಸ್ಥಳ ಸೇರಿದಂತೆ ಬಹುತೇಕ ಕಡೆ ಇರುವ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ ಕೊಳಚೆ ನೀರು ರಸ್ತೆ ಮೇಲೆ ಬಂದು ನಿಲ್ಲುತ್ತಿದೆ. ದುರ್ನಾತ, ಸೊಳ್ಳೆಗಳ ಕಾಟ, ಸಾಂಕ್ರಾಮಿಕ ರೋಗಗಳ ಭೀತಿಯಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ.

ಬಹಳಷ್ಟು ಮನೆಗಳ ಮುಂದೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ. ಮನೆಯ ಮಾಳಿಗೆ ಮೇಲೆ ನಿಂತು ಕೊಂಡರೆ ವಿದ್ಯುತ್ ತಂತಿಗಳು ಕೈಗೆಟುಕುತ್ತವೆ. ಅಲ್ಲದೇ ಬಹಳ ವರ್ಷಗಳ ಹಿಂದೆ ಹಾಕಿರುವ ತಂತಿಗಳು ಹೆಚ್ಚಿನ ವೋಲ್ಟೇಜ್ ಬಂದು ಕೆಲವೊಮ್ಮೆ
ಕಡಿತಗೊಂಡುಕೆಳಗೆ ಬೀಳುತ್ತಿವೆ.

ಕೆಲವೆಡೆ ವಿದ್ಯುತ್ ಕಂಬ, ಪರಿವರ್ತಕ ಗಳ ಸುತ್ತ ಬಳ್ಳಿಗಳು ಹಬ್ಬಿ ಕೊಂಡಿದ್ದು, ಅಪಾಯದ ಭೀತಿಯಲ್ಲಿ ಓಡಾಡುವಂಥ
ಪರಿಸ್ಥಿತಿ ನಿರ್ಮಾಣವಾಗಿದೆ.

ಶುದ್ಧ ನೀರಿಗೆ ಪರದಾಟ: ಗ್ರಾಮದಲ್ಲಿ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಇದರಿಂದ ಕುಡಿಯಲು ಕೈ ಪಂಪ್‌ನ ನೀರೆ ಗತಿಯಾಗಿದೆ. ಕುಡಿಯುವ ನೀರು ಸಂಗ್ರಹವಾಗುವ ಟ್ಯಾಂಕ್ ಸುತ್ತಲು ಕಸ- ಕಡ್ಡಿ, ಹುಲ್ಲು ಬೆಳೆದು ಕೆಸರು ತುಂಬಿಕೊಂಡಿದೆ. ಈ ಸ್ಥಳದಿಂದಲೇ ಗ್ರಾಮದ ಜನರಿಗೆ ಕುಡಿಯುವ ನೀರು ಸರಬರಾಜಾಗುತ್ತದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಟ್ಯಾಂಕ್‍ನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಅದರಲ್ಲಿ ಏನು ಬಿದ್ದಿದೆ ಎಂದು ತಿಳಿಯದೆ ಅದೇ ನೀರನ್ನು ನಿತ್ಯ ಬಳಸುವಂತಾಗಿದೆ.

ಬಸ್ ಸಮಸ್ಯೆ: ಗ್ರಾಮದಿಂದ ವಿದ್ಯಾರ್ಥಿಗಳು ಸಮೀಪದ ಅನಪೂರ ಗ್ರಾಮದ ಪ್ರೌಢಶಾಲೆಗೆ ಹೋಗಲು ಮೊದಲು ಜಿಲಾಲಪುರ ಕ್ರಾಸ್‍ಗೆ 5ರಿಂದ 6 ಕಿ.ಮೀ ನಡೆದುಕೊಂಡು ಇಲ್ಲವೇ ಖಾಸಗಿ ವಾಹನಗಳಿಗೆ ಹೋಗಬೇಕಾದ ಪರಿಸ್ಥಿಯಿದೆ. ಅಲ್ಲಿಂದ ಅನಪುರ ಗ್ರಾಮಕ್ಕೆ ಮತ್ತೇ ಸುಮಾರ 2 ಕಿ.ಮೀ ಬೇರೆ ವಾಹನಗಳ ಮುಖಾಂತರ ಸಂಚರಿಸಬೇಕಾಗಿದೆ. ಇದರಿಂದಾಗಿ ವಿದ್ಯಾರ್ಥಿನಿಯರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಬೇಕು
ಎಂಬುದು ಗ್ರಾಮಸ್ಥರ ಆಗ್ರಹ.

*
ಗಡಿ ಭಾಗದ ಗ್ರಾಮವಾಗಿದ್ದರಿಂದ ಯಾವೊಬ್ಬ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಗ್ರಾಮದ ಜನರ ಗೋಳು ಕೇಳುವವರಿಲ್ಲದಂತಾಗಿದೆ
- ರಾಘವೇಂದ್ರ ಕುಲಕರ್ಣಿ, ಗ್ರಾಮಸ್ಥ

*
ನಮ್ಮ ಊರಿನಲ್ಲಿರುವ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಅನೇಕ ಸಲ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕೇವಲ ಕುಂಟುನೆಪ ಹೇಳುತ್ತ ಮುಂದುಡುತ್ತಾರೆ.
- ದಾನಪ್ಪ, ಗ್ರಾಮ ಪಂಚಾಯಿತಿ ಸದಸ್ಯ

*
ಗ್ರಾಮದಲ್ಲಿರುವ ಚರಂಡಿ ಸ್ವಚ್ಛಗೊಳಿಸಲು ಹಾಗೂ ಇತರ ಸಮಸ್ಯೆ ಪರಿಹಾರ ನೀಡಲು ಪಂಚಾಯಿತಿಯಲ್ಲಿರುವ ಬಜೆಟ್ ಆಧಾರದ ಮೇಲೆ ಕೆಲಸಗಳನ್ನು ಪ್ರಾರಂಭ ಮಾಡುತ್ತೇವೆ.
-ಸಯ್ಯದ್ ಅಲಿ, ಪಿಡಿಒ, ಜೈಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT