ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚ ಮುಕ್ತ ಜಿಲ್ಲೆ ಎಂದು 2018ರಲ್ಲೇ ಘೋಷಣೆ: ‘ಬಯಲು ಬಹಿರ್ದೆಸೆ’ಗಿಲ್ಲ ಮುಕ್ತಿ

Published 9 ಮೇ 2023, 3:25 IST
Last Updated 9 ಮೇ 2023, 6:12 IST
ಅಕ್ಷರ ಗಾತ್ರ

ಬಿ.ಜಿ. ಪ್ರವೀಣಕುಮಾರ

ಯಾದಗಿರಿ: ಬೆಟ್ಟಗುಡ್ಡಗಳಿಂದ ಕೂಡಿರುವ ಯಾದಗಿರಿಯು ಬಯಲು ಶೌಚ ಮುಕ್ತ ಜಿಲ್ಲೆ ಎಂದು 2018ರಲ್ಲೇ ಘೋಷಣೆಯಾಗಿದೆ. ಆದರೆ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಯಲು ಬಹಿರ್ದೆಸೆ ‘ಪದ್ಧತಿ’ ಇಂದಿಗೂ ಕೊನೆಗೊಂಡಿಲ್ಲ.

ಬೆಳಗಿನ ಜಾವವೇ ಗ್ರಾಮಗಳಿಗೆ ತೆರಳಿ ಅಭ್ಯರ್ಥಿಗಳು ಎಲ್ಲರಿಗೂ ‘ಕೈ ಮುಗಿದು’ ಮತಯಾಚಿಸುವಾಗ, ಅವರ ಎದುರು ‘ಕೈಯಲ್ಲಿ ಚೊಂಬು’ ಹಿಡಿದು ಗ್ರಾಮಸ್ಥರು ಹೊಲಗಳತ್ತ ಹೋಗುವುದು ಸಾಮಾನ್ಯವಾಗಿದೆ. ಇದನ್ನು ಕಂಡ ಕೆಲ ಅಭ್ಯರ್ಥಿಗಳು ‘ಮನೆಗೊಂದು ಇಲ್ಲವೇ ಸಾರ್ವಜನಿಕ ಶೌಚಾಲಯ’ ನಿರ್ಮಿಸಿಕೊಡುವುದಾಗಿ ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ 3 ನಗರಸಭೆ ಮತ್ತು 3 ಪುರಸಭೆಗಳಿವೆ. ಆದರೆ, ಜನಸಂಖ್ಯೆಗೆ ತಕ್ಕ ಶೌಚಾಲಯಗಳು ಇಲ್ಲ. ಸಾಮೂಹಿಕ ಶೌಚಾಲಯಗಳಲ್ಲಿ ನೀರಿಲ್ಲ. ಹೀಗಾಗಿ ‘ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಅನಿವಾರ್ಯ’ ಎಂಬ ಸ್ಥಿತಿ ಇದೆ.

‌‌‘ಕೆಲ ಕಡೆ ಬಂಡೆಗಲ್ಲುಗಳ ಮೇಲೆ ಮನೆಗಳಿರುವ ಕಾರಣ ಶೌಚಗುಂಡಿ ನಿರ್ಮಿಸಿಕೊಳ್ಳಲು ಆಗಿಲ್ಲ. ಮನೆ ಆವರಣದಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಜಾಗವಿಲ್ಲ. ಇದ್ದರೂ ಕಟ್ಟಿಕೊಳ್ಳಲು ಮನೆಯ ಹಿರಿಯರು ಒಪ್ಪುವುದಿಲ್ಲ. ಕೆಲವರು ಶೌಚಾಲಯ ಕಟ್ಟಿಕೊಂಡಿದ್ದಾರೆ.

ಆದರೆ, ನೀರಿನ ಸೌಲಭ್ಯ ಇಲ್ಲದ ಕಾರಣ ಬಯಲಿಗೆ ಹೋಗುತ್ತಾರೆ’ ಎಂದು ಗ್ರಾಮಸ್ಥ ಸೂರಪ್ಪ ತಿಳಿಸಿದರು.

‘ಮನೆ ಆವರಣದಲ್ಲಿ ಇಕ್ಕಟ್ಟಾದ ಶೌಚಾಲಯ ನಿರ್ಮಿಸಿಕೊಂಡರೆ ಕೆಟ್ಟ ವಾಸನೆ ಬರುವುದೆಂದು ಅಕ್ಕಪಕ್ಕದ ಮನೆಯವರು ಕಿರಿಕಿರಿ ಮಾಡುತ್ತಾರೆ. ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಕಾಡುವುದರಿಂದ ಶೌಚಾಲಯವಿದ್ದರೂ ಪ್ರಯೋಜನ ಆಗುವುದಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತದೆ. ಆದರೆ, ನೀರಿನ ಸೌಲಭ್ಯ ಕಲ್ಪಿಸುವುದಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಸುಕಿನಲ್ಲಿ ಗ್ರಾಮಸ್ಥರ ಕೈಗೆ ಗುಲಾಬಿ ಹೂವನ್ನು ನೀಡಿ, ಶೌಚಾಲಯದ ಮಹತ್ವ ತಿಳಿಸುವ ಕಾರ್ಯವು ಇಲ್ಲಿ ವಿಫಲವಾಗಿದೆ.

‘ಮನೆಯಲ್ಲಿ ಶೌಚಾಲಯ ಇರಬಾರದು ಎಂಬ ಮೂಢನಂಬಿಕೆ ಕೆಲ ಗ್ರಾಮಸ್ಥರಲ್ಲಿದೆ. ಕೆಲ ಕಡೆ ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟರೂ ಅದನ್ನು ಕೋಳಿ ಗೂಡು, ಕಟ್ಟಿಗೆ ಇಡುವ ಸ್ಥಳವಾಗಿ ಬಳಸಲಾಗುತ್ತಿದೆ’ ಎಂದು ಸ್ವಚ್ಛ ಭಾರತ ಅಭಿಯಾನ ಸಿಬ್ಬಂದಿ ಮಾಹಿತಿ ನೀಡಿದರು.

33,810 ಮನೆಗಳಿಗೆ ಶೌಚಾಲಯವಿಲ್ಲ

2012–2013ರ ಜಿಲ್ಲಾ ಪಂಚಾಯಿತಿ ಸಮೀಕ್ಷೆ ಪ್ರಕಾರ, ಜಿಲ್ಲೆಯಲ್ಲಿ 1,69,731 ಮನೆಗಳಲ್ಲಿ ಶೌಚಾಲಯ ಇರಲಿಲ್ಲ. ಆದರೆ, 2021–2022ರ ಅಕ್ಟೋಬರ್‌ 31ರವರೆಗಿನ ಅಂಕಿ ಅಂಶಗಳ ಪ್ರಕಾರ 1,35,921 ಮನೆಗಳಿಗೆ ಶೌಚಾಲಯ ನಿರ್ಮಿಸಿ ಕೊಡಲಾಗಿದೆ. 33,810 ಮನೆಗಳಲ್ಲಿ ಇನ್ನಷ್ಟೇ ನಿರ್ಮಿಸಬೇಕಿದೆ. ‘2023ನೇ ಸಾಲಿನಲ್ಲಿ 5 ಸಾವಿರ ಶೌಚಾಲಯ ನಿರ್ಮಿಸುವ ಗುರಿಯಿದೆ. 6 ಸಾವಿರ ಅರ್ಜಿಗಳು ಬಂದಿವೆ. ಚುನಾವಣೆ ಬಳಿಕ ಅರ್ಜಿಗಳನ್ನು ಪರಿಶೀಲಿಸಿ, ಅನುಮೋದನೆ ಕೊಡುತ್ತೇವೆ’ ಎಂದು ಸ್ವಚ್ಛ ಭಾರತ ಅಭಿಯಾನ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಶೌಚಾಲಯಗಳ ಸಮೀಕ್ಷೆ ನಡೆದಿದೆ. ನರೇಗಾ ಅಡಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ, ಮಕ್ಕಳ ಜೊತೆ ಪೋಷಕರಿಗೆ ಅರಿವು ಮೂಡಿಸಲಾಗುವುದು.
ಗರಿಮಾ ಪನ್ವಾರ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ, ಯಾದಗಿರಿ
ಬಟ್ಟೆಯಿಂದ ಮರೆ ಮಾಡಿಕೊಂಡು ಬಹಿರ್ದೆಸೆಗೆ ಹೋಗಬೇಕು. ಇಲ್ಲವೇ ರಾತ್ರಿ ಅಥವಾ ನಸುಕಿನಲ್ಲಿ ಬಯಲಿಗೆ ಹೋಗಬೇಕು. ಆಗ ಲೈಂಗಿಕ ಕಿರುಕುಳ, ಅತ್ಯಾಚಾರ ಆಗುವ ಸಾಧ್ಯತೆ ಇರುತ್ತದೆ.
ಗ್ರಾಮಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT