ಶುಕ್ರವಾರ, ಅಕ್ಟೋಬರ್ 23, 2020
27 °C
ನ್ಯಾ.ಎ. ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆರ್‌ಎಸ್‌ಎಸ್‌ಗೆ‌ ಮೊರೆ: ಮುತ್ತಣ್ಣ ಬೆಣ್ಣೂರ

ಸಮುದಾಯದವರಿಂದಲೇ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಸಮುದಾಯದವರೇ ಅಡ್ಡಿ ಹಾಕುತ್ತಿದ್ದಾರೆ. ಹೀಗಾಗಿ ಸಂಘ ಪರಿವಾರದವರ ಮಧ್ಯೆಸ್ಥಿಕೆ ವಹಿಸುವಂತೆ ಒಳ ಮೀಸಲಾತಿ ಜಾರಿಗೆ ಒತ್ತಡ ಹಾಕಲಾಗಿದೆ ಎಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಕೆಲವರು ಹೆಸರಿಗೆ ಮಾತ್ರ ಅಂಬೇಡ್ಕರ್‌ ಅನುಯಾಯಿಗಳು ಆಗಿದ್ದಾರೆ. ಆದರೆ, ಒಳ ಮೀಸಲಾತಿಗೆ ವಿರೋಧ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯ ಕಲ್ಪನೆಯಡಿಯಲ್ಲಿ ಸಂಘ ಪರಿವಾರ ನಮಗೆ ಪರಿಹಾರವಾಗಿ ಕಾಣುತ್ತಿದೆ. ಹೀಗಾಗಿ ಅವರ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.

ಒಳಮೀಸಲಾತಿ ಕಲ್ಪಿಸುವ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಕಳೆದ 20 ವರ್ಷಗಳಿಂದ ಮಾದಿಗ ಸಮಾಜದಿಂದ ಹೋರಾಟ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ವರದಿ ಜಾರಿಗೆ ತರಲಿಲ್ಲ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜಿಲ್ಲೆಯಲ್ಲಿ ಗ್ರಾಮ ವಾಸ್ತ್ಯವ್ಯಕ್ಕೆ ಬಂದಾಗ ಮನವಿ ಸಲ್ಲಿಸಿದಾಗ ಸದನದಲ್ಲಿ ಮಂಡಿಸಲು ಸಮಾಜ ಕಲ್ಯಾಣ ಮಂತ್ರಿ ಪ್ರಿಯಾಂಕ್ ಖರ್ಗೆಗೆ ತಿಳಿಸಿದ್ದರು. ಆದರೆ, ಸದನದಲ್ಲಿ ವರದಿ ಮಂಡನೆಯಾಗಿಲ್ಲ ಎಂದರು.

2010ರಲ್ಲಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ವರದಿ ಅನುಷ್ಠಾನ ಮಾಡಲು ಹಣ ಬಿಡುಗಡೆ ಮಾಡಿತ್ತು. ಮಾದಿಗ ಸಮುದಾಯ ಬಿಜೆಪಿಗೆ ಮತ ಕೊಟ್ಟಿರುವುದರಿಂದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕೆಂದು ಆರ್‌ಎಸ್‌ಎಸ್ ಮುಖಂಡರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

‌ಸರ್ಕಾರದ ಯೋಜನೆಗಳನ್ನು ಬಹುಪಾಲು ಸ್ಪರ್ಶ ಸಮುದಾಯ ದಲಿತರು ಲಾಭ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಮೂಲ ದಲಿತರಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಪರಿಶಿಷ್ಟರಲ್ಲೆ ಬಲಾಢ್ಯ ಸಮುದಾಯದವರು ವರದಿ ಜಾರಿಗೆ ಅಡ್ಡಿಪಡಿಸುತ್ತಿದ್ದಾರೆ. ದಲಿತ ಸಂಘಟನೆಗಳಲ್ಲಿನ ಒಗ್ಗಟ್ಟಿನ ಕೊರತೆಯಿಂದ ವರದಿ ಜಾರಿಗೆ ಹಿನ್ನೆಡೆಯಾಗುತ್ತಿರುವುದರಿಂದ ಸಂಘ ಪರಿವಾರದ ಮೊರೆ ಹೋಗಿದ್ದೇವೆ. ಅವರು ಸಕರಾತ್ಮಾಕವಾಗಿ ಸ್ಪಂದಿಸಿರುವುದರಿಂದ ಆಶಾಭಾವನೆ ಹೊಂದಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಖಂಡಪ್ಪ ದಾಸನ್, ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ದಾಸನಕೇರಿ, ಸಮಾಜದ ಮುಖಂಡ ಮಲ್ಲಣ್ಣ ದಾಸನಕೇರಿ, ಶಾಂತರಾಜ ಮೋಟನಳ್ಳಿ, ಸ್ಯಾಂಸನ್ ಮಾಳಿಕೇರಿ, ದೇವಿಂದ್ರನಾಥ ನಾದ, ಲಿಂಗಪ್ಪ ಹತ್ತಿಮನಿ, ವಕೀಲ ಶಾಂತಪ್ಪ ಖಾನಳ್ಳಿ, ‌ರಾಮಚಂದ್ರ ಕಾಂಬಳೆ, ರವಿ ನಾವೆದ್ಗಕರ್‌ ಇದ್ದರು.

***

ಒಳ ಮೀಸಲಾತಿ ಪಡೆಯುವುದು ನಮ್ಮ ಜನ್ಮ ಸಿದ್ಧ ಹಕ್ಕು. ಇದಕ್ಕೆ ಅಡ್ಡಿ ಪಡಿಸುವವರು ಸಂವಿಧಾನ ವಿರೋಧಿಗಳು
- ಮುತ್ತಣ್ಣ ಬೆಣ್ಣೂರ, ಸಮಿತಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.