ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ವಿಷ: ವೃದ್ದೆ ಸಾವು

Last Updated 10 ಜನವರಿ 2019, 8:51 IST
ಅಕ್ಷರ ಗಾತ್ರ

ಯಾದಗಿರಿ: ಮುದನೂರು ತೆರೆದ ಬಾವಿಗೆ ಕ್ರಿಮಿನಾಶಕ ಬೆರೆತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾರ ನಸುಕಿನ ಜಾವ ತೆಗ್ಗಳ್ಳಿ ಗ್ರಾಮದ ವೃದ್ಧೆ ಹೊನ್ನಮ್ಮ ಮೃತಪಟ್ಟಿದ್ದಾರೆ.

ಬುಧವಾರ ಕೆಂಭಾವಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊನ್ನಮ್ಮ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ರಕ್ತ ವಾಂತಿ ನಿಯಂತ್ರಣಕ್ಕೆ ಬಾರದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿಸಲು ಕರೆದೊಯ್ಯುವ ಸಂದರ್ಭದಲ್ಲಿ ಮಾರ್ಗಮಧ್ಯೆ ಅವರು ಅಸುನೀಗಿದ್ದಾರೆ ಎಂದು ಗ್ರಾಮಸ್ಥರಾದ ಗಿರೀಶ್ ಪಾಟೀಲ್ ತಿಳಿಸಿದ್ದಾರೆ.

ಕಿಡಿಗೇಡಿಗಳ ಪತ್ತೆಗೆ ಒತ್ತಾಯ: ಜಿ.ಪಂ. ಅಧ್ಯಕ್ಷ

ಕ್ರಿಮಿನಾಶಕ ಬೆರೆತ ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಗುರುವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಭೇಟಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇದು ಕಿಡಿಗೇಡಿಗಳ ಕೃತ್ಯ. ಯಾವುದೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿಲ್ಲ. ಯಾರಿಗೂ ಯಾರ ಮೇಲೂ ವೈಷಮ್ಯ ಇಲ್ಲ. ಕೃತ್ಯ ಎಸಗಿರುವವರನ್ನು ಪತ್ತೆಹಚ್ಚಿ ಶಿಕ್ಷಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದರು.

ಕೆಂಭಾವಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಳಮ್ಮ, ನಾಗಮ್ಮ, ಸುರೇಶ್, ಕಾಳಮ್ಮ, ಜಯಮ್ಮ, ಹಳ್ಳಮ್ಮ, ರಾಯಪ್ಪ, ಮೌನೇಶ ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.

ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸುರಪುರದ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿದುವಂತೆ ಜಿಲ್ಲಾಧಿಕಾರಿ ಸೂಚಿಸಿರುವುದಾಗಿ ವೈದ್ಯಾಧಿಕಾರಿ ಡಾ.ಕಿರಣ ಜಕ್ಕಾರೆಡ್ಡಿ ತಿಳಿಸಿದರು.

ಪಿಡಿಒಗೆ ಗ್ರಾಮಸ್ಥರಿಂದಘೇರಾವ್

ತೆಗ್ಗಳ್ಳಿಯ ವೃದ್ಧೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಕೆರಾ (ಬೆ) ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪಿಡಿಒ ಸಿದ್ರಾಮಪ್ಪ ಅವರನ್ನು ಘೇರಾವ್ ಹಾಕಿದರು.

ಆಕ್ರೋಶಿತರ ಗುಂಪು ಪಿಡಿಒ ಅವರ ಮೇಲೆ ಹಲ್ಲೆಗೂ ಮುಂದಾಯಿತಿ. ಪಿಡಿಒ ಸಿದ್ರಾಮಪ್ಪ ಈಗ ಪೊಲೀಸರ ರಕ್ಷಣೆಯಲ್ಲಿದ್ದಾರೆ.

ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿರುವ ಗ್ರಾಮಸ್ಥರು ವೃದ್ಧೆ ಸಾವಿಗೆ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಜಾಗ್ರತೆ ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.ಪಿಡಿಒ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT