ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಉದ್ಘಾಟನೆಗೆ ಕಾದಿರುವ ಪೊಲೀಸ್‌ ಠಾಣೆಗಳು

Published 4 ಜನವರಿ 2024, 4:54 IST
Last Updated 4 ಜನವರಿ 2024, 4:54 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಕೆಂಭಾವಿ ಹಾಗೂ ಯಾದಗಿರಿ ನಗರ ಪೊಲೀಸ್‌ ಠಾಣೆ ಕಟ್ಟಡಗಳು ಉದ್ಘಾಟನೆಗೆ ಕಾದಿವೆ. ಕಳೆದ ಒಂದು ವರ್ಷದಲ್ಲಿ ಕಾಮಗಾರಿ ನಡೆದು 2023ರ ಡಿಸೆಂಬರ್‌ ತಿಂಗಳಲ್ಲೇ ಉದ್ಘಾಟನೆಯಾಗಬೇಕಾಗಿತ್ತು. ಆದರೆ, ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಜಿಲ್ಲೆಯ ಕೆಂಭಾವಿ ಪೊಲೀಸ್‌ ಠಾಣೆ ಕಟ್ಟಡವನ್ನು ₹1.5 ಕೋಟಿ ಹಾಗೂ ಯಾದಗಿರಿ ನಗರ ಪೊಲೀಸ್‌ ಠಾಣೆ ಕಟ್ಟಡ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕೆಂಭಾವಿ ಠಾಣೆಯನ್ನು ಗ್ರೇಡ್‌–4ರ ಹಂತ ಹಾಗೂ ಯಾದಗಿರಿ ನಗರ ಠಾಣೆಯನ್ನು ಗ್ರೇಡ್‌–5ರ ಹಂತದಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಠಾಣೆಗಳನ್ನು ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿರ್ಮಿಸಿದೆ.

ಶತಮಾನದ ಇತಿಹಾಸ ಠಾಣೆಗಳು: ಎರಡೂ ಪೊಲೀಸ್‌ ಠಾಣೆಗಳು ಶತಮಾನದ ಇತಿಹಾಸ ಹೊಂದಿವೆ. ಯಾದಗಿರಿ ನಗರದ ಹೃದಯ ಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ನಗರ ಪೊಲೀಸ್‌ ಠಾಣೆ ಭೂಮಿಯಿಂದ 10 ಅಡಿ ಎತ್ತರದಲ್ಲಿದೆ.

ಪ್ರವೇಶ ದ್ವಾರದಲ್ಲಿ 7 ಹಾಗೂ ಕಟ್ಟಡದೊಳಗೆ ಪ್ರವೇಶಿಸಿಲು 4 ಮೆಟ್ಟಿಲುಗಳಿದ್ದವು. ಈಗ ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ.

‘ನಗರ ಠಾಣೆ ಬ್ರಿಟಿಷರ ಕಾಲದಲ್ಲಿ ತೆರಿಗೆ ಸಂಗ್ರಹ ಕಚೇರಿಯಾಗಿತ್ತು. ನಂತರ ನಿಜಾಮರ ಆಡಳಿತದಲ್ಲಿ ಪೊಲೀಸ್‌ ಠಾಣೆಯಾಗಿ ರೂಪುಗೊಂಡಿದೆ. ಪೊಲೀಸ್‌ ಠಾಣೆ ಪಕ್ಕದಲ್ಲಿ ಆಗ ಯಾವ ಕಟ್ಟಡಗಳೂ ಇರಲಿಲ್ಲ. ಅಕ್ಕಪಕ್ಕದಲ್ಲಿ ಯಾವುದೇ ಘಟನೆಗಳಾದರೂ ಎತ್ತರದಲ್ಲಿ ಕಟ್ಟಡ ಇರುವುದರಿಂದ ಅಧಿಕಾರಿ ವರ್ಗಕ್ಕೆ ತಿಳಿದುಬರುತ್ತಿತ್ತು. ಇಂಥ ಐತಿಹಾಸಿಕ ಹಿನ್ನೆಲೆಯನ್ನು ಕಟ್ಟಡ ಹೊಂದಿತ್ತು’ ಎನ್ನುತ್ತಾರೆ ಸಂಶೋಧಕ ಭೀಮರಾಯ ಲಿಂಗೇರಿ.

ನಗರದಲ್ಲಿ 72 ವಸತಿ ಗೃಹಗಳು ನಿರ್ಮಾಣವಾಗಿದ್ದು, ಇವು ಕೂಡ ಉದ್ಘಾಟನೆಯಾಗಿಲ್ಲ. ಆದರೆ, ಈಗಾಗಲೇ ಕೆಲವರು ವಸತಿ ಗೃಹದಲ್ಲಿದ್ದಾರೆ. ಉದ್ಘಾಟನೆಯಾದ ನಂತರ ಮತ್ತಷ್ಟು ಪೊಲೀಸ್‌ ಸಿಬ್ಬಂದಿ ವಾಸ ಮಾಡುವ ಸಾಧ್ಯತೆ ಇದೆ.

ನೂತನವಾಗಿ ನಿರ್ಮಾಣವಾಗಿರುವ ಕೆಂಭಾವಿ ಪೊಲೀಸ್ ಠಾಣೆ ಕಟ್ಟಡ
ನೂತನವಾಗಿ ನಿರ್ಮಾಣವಾಗಿರುವ ಕೆಂಭಾವಿ ಪೊಲೀಸ್ ಠಾಣೆ ಕಟ್ಟಡ
- ಯಾದಗಿರಿ ಜಿಲ್ಲೆಯಲ್ಲಿ ಎರಡು ಪೊಲೀಸ್‌ ಠಾಣೆಗಳು ನಿರ್ಮಾಣವಾಗಿವೆ. ಇನ್ನೂ ನಮಗೆ ಹಸ್ತಾಂತರವಾಗಿಲ್ಲ. ಉದ್ಘಾಟನೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ
- ಜಿ.ಸಂಗೀತಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

‘ಇತಿಹಾಸ ಉಳಿಯಲಿ’

‘ಯಾದಗಿರಿ ನಗರ ಠಾಣೆ ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು ಬ್ರಿಟಿಷ್‌ ಮತ್ತು ಹೈದರಾಬಾದ್‌ ನಿಜಾಮರ ಕಾಲದಲ್ಲಿ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿತ್ತು. ಈಗ ಅದೇ ಜಾಗದಲ್ಲಿ ನೂತನ ಕಟ್ಟಡ ತಲೆ ಎತ್ತಿದೆ. ಐತಿಹಾಸಿಕ ಸ್ಥಳದ ಕುರಿತು ಸಾರ್ವಜನಿಕರಿಗೆ ಮಾಹಿತಿ ತಿಳಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಮುಂದಾಗಬೇಕಿದೆ’ ಎನ್ನುತ್ತಾರೆ ಇತಿಹಾಸ ತಜ್ಞ ಭಾಸ್ಕರರಾವ್ ಮುಡಬೂಳ. ಹೈದರಾಬಾದ್‌ ಕರ್ನಾಟಕ ವಿಮೋಚನೆಗಾಗಿ ಸೆಣಸಾಡಿದ ಜಿಲ್ಲೆಯ ಹೋರಾಟಗಾರರನ್ನು ಆಗಿನ ನಗರ ಪೊಲೀಸ್‌ ಠಾಣೆಯಲ್ಲಿ ಬಂಧಿಸಿ ಇಡಲಾಗಿತ್ತು ಎನ್ನುವುದು ಇತಿಹಾಸ. ಹೋರಾಟಗಾರಗಾರರಾದ ಈಶ್ವರಲಾಲ್‌ ಭಟ್ಟಡ್‌ ಕೊಲ್ಲೂರು ಮಲ್ಲಪ್ಪ ವಿಶ್ವನಾಥರಡ್ಡಿ ಮುದ್ನಾಳ ಜಗನ್ನಾಥ ರಾವ್‌ ಚಂಡ್ರಕಿ ಸೇರಿ ಹಲವಾರು ಹೋರಾಟಗಾರನ್ನು ಸೆರೆ ಹಿಡಿದು ಇಲ್ಲಿ ಇಡಲಾಗಿತ್ತು.

ಎಲ್ಲೆಲ್ಲಿ ಪೊಲೀಸ್‌ ಠಾಣೆಗಳಿವೆ?

ಜಿಲ್ಲೆಯಲ್ಲಿ ಎಸ್.ಪಿ ಯಾದಗಿರಿ ಕಚೇರಿ ಯಾದಗಿರಿ ಉಪ ವಿಭಾಗ ಸುರಪುರ ಉಪ ವಿಭಾಗ ಯಾದಗಿರಿ ವೃತ್ತ ಶಹಾಪುರ ವೃತ್ತ ಹುಣಸಗಿ ವೃತ್ತ ಯಾದಗಿರಿ ನಗರಠಾಣೆ ಯಾದಗಿರಿ ಗ್ರಾಮೀಣ ಮಹಿಳಾ ಪೊಲೀಸ್‌ ಠಾಣೆ ಸಂಚಾರ ಪೊಲೀಸ್‌ ಠಾಣೆ ವಡಗೇರಾ ಪೊಲೀಸ್‌ ಠಾಣೆ ಗುರುಮಠಕಲ್‌ ಪೊಲೀಸ್‌ ಠಾಣೆ ಸೈದಾಪುರ ಪೊಲೀಸ್‌ ಠಾಣೆ ಸುರಪುರ ಪೊಲೀಸ್‌ ಠಾಣೆ ಶಹಾಪುರ ಪೊಲೀಸ್‌ ಠಾಣೆ ಭೀಮರಾಯನ ಗುಡಿ ಪೊಲೀಸ್‌ ಠಾಣೆ ಗೋಗಿ ಪೊಲೀಸ್‌ ಠಾಣೆ ಹುಣಸಗಿ ಪೊಲೀಸ್‌ ಠಾಣೆ ಕೆಂಭಾವಿ ಪೊಲೀಸ್‌ ಠಾಣೆ ಕೊಡೇಕಲ್ಲ ಪೊಲೀಸ್‌ ಠಾಣೆ ನಾರಾಯಣಪುರ ಪೊಲೀಸ್‌ ಠಾಣೆ ಸಿಇಎನ್‌ಪಿಎಸ್ ಪೊಲೀಸ್‌ ಠಾಣೆಗಳಿವೆ.

ಪೊಲೀಸ್‌ ಠಾಣೆಯಲ್ಲಿ ಸಿಬ್ಬಂದಿ ಕೊರತೆ

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಪಿಎಸ್‌ಐ ಠಾಣೆಯಿಂದ ಪಿಐ ಠಾಣೆಯಾಗಿ ಮೇಲ್ದರ್ಜೆಗೇರಿದ ನಂತರ ಇಲ್ಲಿನ ಪೊಲೀಸ್‌ ಠಾಣೆಗೆ ಅಗತ್ಯ ಸಿಬ್ಬಂದಿಯ ಪೂರೈಕೆ ಮಾತ್ರ ಆಗಿಲ್ಲ. ಪಿಐ ಠಾಣೆಯಲ್ಲಿ 1 ಪಿಐ 4 ಪಿಎಸ್‌ಐ ಎಎಸ್‌ಐ 6 ಎಚ್‌ಸಿ 20 ಪಿಸಿ 36 ಸೇರಿ 67 ಜನ ಸಿಬ್ಬಂದಿ ನೀಡಬೇಕು. ಸದ್ಯ ಗುರುಮಠಕಲ್‌ ಠಾಣೆಯಲ್ಲಿ ಅನುಮೋದಿತ ಮಾನವ ಸಂಪನ್ಮೂಲದಲ್ಲಿ 1 ಪಿಐ ಕ್ರೈಮ್‌ ಮತ್ತು ಲಾ ಅಂಡ್‌ ಆರ್ಡರ್‌ನ ತಲಾ 2 ಪಿಎಸ್‌ಐ ಸೇರಿ ನಾಲ್ಕು ಜನ ಇರಬೇಕಾದಲ್ಲಿ ಕೇವಲ 1 ಪಿಎಸ್‌ಐ ಮಾತ್ರ ನಿಯೋಜನೆಯಾಗಿದ್ದು ಉಳಿದ ಮೂರು ಹುದ್ದೆ ಖಾಲಿಯಿವೆ. ಎಎಸ್‌ಐ 4 ಜನರಿದ್ದು 13 ಎಚ್‌ಸಿ 25 ಜನ ಪಿಸಿಗಳಲ್ಲಿ 22 ಕರ್ತವ್ಯದಲ್ಲಿದ್ದು ಮೂರು ಪಿಸಿ ಹುದ್ದೆ ಖಾಲಿಯಿವೆ. 47 ಅನುಮೋದಿತ ಮಾನವ ಸಂಪನ್ಮೂಲದಲ್ಲಿ 41 ಜನ ನಿಯೋಜನೆಯಾಗಿದ್ದು 6 ಹುದ್ದೆಗಳು ಖಾಲಿಯಿವೆ.

ಕೇವಲ ಪಿಎಸ್‌ಐ ದರ್ಜೆಯಿಂದ ಪಿಐ ದರ್ಜೆಗೆ ಮೇಲ್ದರ್ಜೆಗೇರಿದೆ. ಠಾಣೆಯ ಅಧಿಕಾರಿಯ ದರ್ಜೆ ಹೆಚ್ಚಿಸಿದ್ದು ಮಾನವ ಸಂಪನ್ಮೂಲದಲ್ಲಿ ಹೆಚ್ಚಳವಾಗಿಲ್ಲ ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT