ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ತಾಲ್ಲೂಕು ರಚನೆಗೆ ಹೋರಾಟ

ಕೆಂಭಾವಿ ಪಟ್ಟಣ ತಾಲ್ಲೂಕು ಕೇಂದ್ರವನ್ನಾಗಿಸಲು ಸಾಮೂಹಿಕ ಸಂಘಟನೆಗಳ ಒಕ್ಕೂಟ ಒತ್ತಾಯ
Last Updated 26 ಸೆಪ್ಟೆಂಬರ್ 2020, 2:14 IST
ಅಕ್ಷರ ಗಾತ್ರ

ಕೆಂಭಾವಿ: ಕೆಂಭಾವಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಕೆಂಭಾವಿ ತಾಲ್ಲೂಕು ಹೋರಾಟ ಸಮಿತಿಯ ಯುವ ಘಟಕದ ನೇತೃತ್ವದಲ್ಲಿ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪುರಸಭೆಯಲ್ಲಿ ವಿವಿಧ ಸಂಘಟನೆಯ ಮುಖಂಡರು ಹಾಗೂ ಪದಾಧಿಕಾರಿಗಳು ಜಮಾವಣೆಗೊಂಡು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಪುರಸಭೆಯಿಂದ ಹಳೆ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಮಾಡಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು.

ಕೆಂಭಾವಿ ತಾಲ್ಲೂಕು ಹೋರಾಟ ಸಮಿತಿಯ ಯುವ ಘಟಕದ ಅಧ್ಯಕ್ಷ ದ್ಯಾವಪ್ಪಗೌಡ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿಯೇ ಕೆಂಭಾವಿಯು ಅತೀ ದೊಡ್ಡ ಹೋಬಳಿ ಕೇಂದ್ರವಾಗಿದೆ. 14 ಗ್ರಾಮ ಪಂಚಾಯಿತಿಗಳು ಉಳ್ಳ ಕಂದಾಯ ವಲಯ ಇದಾಗಿದೆ. 1.15 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಪಟ್ಟಣ ಪ್ರದೇಶವಾಗಿರುವ ಕೆಂಭಾವಿ ಪಟ್ಟಣದ ಮೂಲಕ ಎರಡು ರಾಜ್ಯ ಹೆದ್ದಾರಿಗಳು ಹಾಯ್ದು ಹೋಗುತ್ತವೆ. ಎಲ್ಲಾ ರಂಗದಲ್ಲೂ ಕೆಂಭಾವಿಯು ಮುಂಚೂಣಿಯಲ್ಲಿದೆ. ಆದರೂ, ಕೆಂಭಾವಿ ತಾಲ್ಲೂಕು ಕೇಂದ್ರ ಸ್ಥಾನದಿಂದ ವಂಚಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಂಭಾವಿ ಪಟ್ಟಣವನ್ನು ರಾಜ್ಯ ಸರ್ಕಾರ ತಾಲ್ಲೂಕು ಕೇಂದ್ರ ಎಂದು ಘೋಷಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆಗಳನ್ನು ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.

ಚಲೋ ಬೆಂಗಳೂರು: ಕೆಂಭಾವಿ ಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು ಮಾತನಾಡಿ, ಪ್ರತಿಭಟನೆಯಿಂದ ನಮ್ಮ ಬೇಡಿಕೆ ಈಡೇರಿಸದಿದ್ದರೆ ಕೆಂಭಾವಿಯಿಂದ ಬೆಂಗಳೂರವರೆಗೂ ಪಾದಯಾತ್ರೆ ಕೈಗೊಂಡು ಮುಖ್ಯಮಂತ್ರಿ ಯಡಿಯೂ ರಪ್ಪನವರ ಮನೆ ಮುಂದೆ ಹಾಗೂ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದರು.

ಸ್ಥಳಕ್ಕೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಆಗಮಿಸಿ ಪ್ರತಿಭಟನಕಾರರ ಮನವೊಲಿಸಿದರು. ಅಧಿವೇಶನ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿ ಕೇಂದ್ರ ಸ್ಥಾನದಲ್ಲಿದ್ದಾರೆ. ನಿಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ಸಹಾಯಕ ಆಯುಕ್ತರು ಹೇಳಿದಾಗ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನಾಕಾರರು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಷ.ಬ್ರ.ಸಿದ್ದಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು, ಕರಡಕಲ್ ಕೋರಿಸಿದ್ದೇಶ್ವರ ಮಹಾಮಠದ ವಕ್ತಾರ ಶಿವಪ್ರಕಾಶ, ಶ್ರೀಶೈಲ್ ಕಾಚಾಪುರ, ಎಚ್.ಆರ್.ಬಡಿಗೇರ್, ಶಿವಶರಣ ನಾಗರೆಡ್ಡಿ, ಪ್ರಶಾಂತ ದೊಡ್ಡಮನಿ, ಬಸವರಾಜ ಅಂಗಡಿ, ಮಲ್ಲು ಸಜ್ಜನ, ಬಸವಣ್ಣೆಪ್ಪ ಕೆಂಭಾವಿಕರ್, ಮಲ್ಲಿಕಾರ್ಜುನಯ್ಯ, ಬಂದೇನವಾಜ ನಾಲತವಾಡ, ಬಂದೇನವಾಜ ನಾಶಿ, ಶ್ರೀನಿವಾಸಗೌಡ ಯಾಳಗಿ, ರಾಮನಗೌಡ, ಬಾವಾಸಾಬ ನದಾಫ್, ಢಾಲಾಯತ್, ಹಳ್ಳೆಪ್ಪ, ಚಾಂದಾಪಾಶಾ ಮುಲ್ಲಾ, ದೇವು ಹಡಪದ, ಕೃಷ್ಣ, ಮರೆಪ್ಪ ಮಲ್ಲಾ, ಶಿವಪ್ಪ, ಭಾಗೇಶ ಏವೂರ, ದೇವು ಹಂದ್ರಾಳ, ಮಹಿಪಾಲರೆಡ್ಡಿ ಡಿಗ್ಗಾವಿ, ಶಂಕ್ರೆಪ್ಪ ದೇವೂರ, ವಿಕಾಸ ಸೊನ್ನದ, ದೇವು ಕವಾಲ್ದಾರ, ರಂಗಪ್ಪ, ರಾಘು ದೊರೆ, ಬಸ್ಸು ಮ್ಯಾಗೇರಿ, ಸೋಮನಾಥ, ಬಸವರಾಜ ಕವಾಲ್ದಾರ, ಸುರೇಶ ಮಾಳಳ್ಳಿಕರ್ ಸೇರಿದಂತೆ ಯುವ ಘಟಕದ ಪದಾಧಿಕಾರಿಗಳು, ಪುರಸಭೆ ಸದಸ್ಯರು, ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT