ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಾದ್ಯಂತ ಪಿಯು ಪರೀಕ್ಷೆ ಸುಗಮ

17 ಕೇಂದ್ರಗಳಲ್ಲಿ ನಡೆದ ಪರೀಕ್ಷೆ, 973 ಹಾಜರು, 90 ವಿದ್ಯಾರ್ಥಿಗಳು ಗೈರು
Last Updated 22 ಏಪ್ರಿಲ್ 2022, 16:29 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ 17 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ಶುಕ್ರವಾರ (ಏ.22) ದಿಂದ ಆರಂಭಗೊಂಡಿದ್ದು, ಸುಗಮವಾಗಿ ನಡೆದಿದೆ.

ಬಿಸಿನೆಸ್‌ ಸ್ಟಡಿ ಪರೀಕ್ಷೆಗೆ 1,063 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 973 ಹಾಜರಾಗಿದ್ದರೆ, 90 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಬೆಳಿಗ್ಗೆ 10.30ರಿಂದ 1.30ರ ತನಕ ಪರೀಕ್ಷೆ ನಡೆಯಿತು.

ಸರ್ಕಾರಿ, ಅನುದಾನ ಸಹಿತ, ಅನುದಾನ ರಹಿತ ಕಾಲೇಜುಗಳು ಸೇರಿ ಜಿಲ್ಲೆಯಲ್ಲಿ 95 ಪದವಿ ಪೂರ್ವ ಕಾಲೇಜುಗಳಿವೆ. ಇದರಲ್ಲಿ 17 ‍ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ.

ತಪಾಸಣೆ ಮಾಡಿ ಕೊಠಡಿಗೆ ಪ್ರವೇಶ: ಶುಕ್ರವಾರ ಬೆಳಿಗ್ಗೆ 9ಗಂಟೆಗೆಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪೋಷಕರ ಜೊತೆ ವಿದ್ಯಾರ್ಥಿಗಳು ಆಗಮಿಸಿದ್ದರು.

ಸಂಭ್ರಮದಿಂದಲೇ ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಿದ್ದರು. ಕಾಲೇಜು ಆವರಣದಲ್ಲಿ ಕೊನೆ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. ಅಲ್ಲಲ್ಲಿ ಗುಂಪುಗುಂಪಾಗಿ ನಿಂತು ಚರ್ಚೆ ಮಾಡುತ್ತಿದ್ದರು.

ಕಾಲೇಜು ಆವರಣದ ಹೊರಗಡೆ ಇರುವ ಬೋರ್ಡ್‌ನಲ್ಲಿ ಕೋಣೆ ಸಂಖ್ಯೆ ಪರಿಶೀಲಿಸಿಕೊಂಡು ತೆರಳಿದರು. ಪರೀಕ್ಷಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಬಿಡುತ್ತಿದ್ದರು.

ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಥರ್ಮಲ್ ಸ್ಕ್ರೀನಿಂಗ್ ಮಾಡಿದರು. ಕೈಗಳಿಗೆಸ್ಯಾನಿಟೈಸ್ ಸಿಂಪಡಿಸಿದರು.

17 ಕೇಂದ್ರಗಳಿಗೆ ಇಬ್ಬರಂತೆ ಒಟ್ಟು 34 ವಿಶೇಷ ಜಾಗೃತ ಸದಸ್ಯರನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಪರೀಕ್ಷಾ ಕೇಂದ್ರಕ್ಕೆ ಡಿಸಿ ಡಾ.ರಾಗಪ್ರಿಯಾ ಭೇಟಿ: ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿರುವ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ ರಾಗಪ್ರಿಯಾ ಆರ್., ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರೀಕ್ಷೆ ಸಿದ್ಧತೆ, ಆರೋಗ್ಯ ತಪಾಸಣೆ ಕೌಂಟರ್, ಅಂತರದ ಮಾರ್ಕಿಂಗ್ ವ್ಯವಸ್ಥೆ, ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಿ ಎಂದು ಶುಭ ಹಾರೈಸಿದರು.

ಜಿಲ್ಲೆಯಲ್ಲಿ 6,004 ವಿದ್ಯಾರ್ಥಿಗಳು, 4,424 ವಿದ್ಯಾರ್ಥಿನಿಯರು ಸೇರಿ ಒಟ್ಟು 10,428 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 17 ಪರೀಕ್ಷಾ ಕೇಂದ್ರಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ವೇಳೆ ಡಿಡಿಪಿಯು ಚಂದ್ರಕಾಂತ ಹಿಳ್ಳಿ, ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಜಾಗೃತ ದಳದ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್‌.ಎಸ್. ಇದ್ದರು.

ಎಸ್‌ಪಿ ಭೇಟಿ: ಪಿಯು ಪರೀಕ್ಷೆ ಕಾರಣ ನಗರದ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ನೀಡಿದರು. ನಗರದ ಪದವಿ ಪೂರ್ವ ಕಾಲೇಜು, ಜವಾಹರ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪೊಲೀಸ್‌ ಭದ್ರತೆ ವೀಕ್ಷಿಸಿದರು. ಕೊಠಡಿಯೊಳಗೆ ತೆರಳಿ ಪರಿಶೀಲನೆ ನಡೆಸಿದರು.

ನಗರ ಸೇರಿದಂತೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಪಿಎಸ್‌ಐ, ಸಿಪಿಐ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

***

ಹುಣಸಗಿ: ಸೂಸುತ್ರವಾಗಿ ಆರಂಭವಾದ ಪಿಯು ಪರೀಕ್ಷೆ
ಹುಣಸಗಿ:
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರದಿಂದ ಪಿಯುಸಿ ಪರೀಕ್ಷೆಗಳು ಆರಂಭವಾದವು.

ಶುಕ್ರವಾರ ನಡೆದ ವಾಣಿಜ್ಯ ಶಾಸ್ತ್ರ ವಿಭಾಗದ ಪರೀಕ್ಷೆಗೆ ಒಟ್ಟು 2 ಬ್ಲಾಕ್‌ಗಳಲ್ಲಿ 60 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು.

ಅದರಲ್ಲಿ 4 ವಿದ್ಯಾರ್ಥಿಗಳು ಗೈರು ಆಗಿದ್ದರು ಎಂದು ಕೇಂದ್ರದ ಮುಖ್ಯಸ್ಥ ವಿ.ಎಸ್.ಬಿರಾದಾರ ತಿಳಿಸಿದರು.

ಹುಣಸಗಿ, ಕೊಡೇಕಲ್ಲ, ನಾರಾಣಪುರ ಹಾಗೂ ಕಕ್ಕೇರಾದ ನಾಲ್ಕು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧಿಕಾರಿ ಪ್ರಕಾಶ ದೇಸಾಯಿ ಸ್ಥಳದಲ್ಲಿಯೇ ಹಾಜರಿದ್ದರು.

***

ಹಿಜಾಬ್‌, ಪರೀಕ್ಷಾ ಅವ್ಯವಹಾರ ಸೇರಿದಂತೆ ಇನ್ನಿತರ ಅಹಿತಕರ ಘಟನೆಗಳು ನಡೆದಿಲ್ಲ. ಮೊದಲ ದಿನ ಪರೀಕ್ಷೆ ಸುಗಮವಾಗಿ ನಡೆದಿದೆ
-ಚಂದ್ರಕಾಂತ ಜಿ ಹಿಳ್ಳಿ, ಉಪನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ

***

ಪರೀಕ್ಷೆಗೆ ಚೆನ್ನಾಗಿ ಸಿದ್ಧವಾಗಿದ್ದು, ಉತ್ತಮವಾಗಿ ಬರೆದಿದ್ದೇನೆ. ಪಠ್ಯ ಬೋಧನೆ ಮಾಡಿದ ಉಪನ್ಯಾಸಕರು ಹೇಳಿದ ಪ್ರಶ್ನೆಗಳೇ ಬಂದಿವೆ
-ಮೌನೇಶ್‌, ದ್ವಿತೀಯ ಪಿಯು ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT