ಮಂಗಳವಾರ, ಜೂನ್ 28, 2022
26 °C
ಕೋವಿಡ್ ರೋಗಿಗಳಿಗೆ ನಿತ್ಯ ಪೌಷ್ಟಿಕ ಆಹಾರ, ಸುರಕ್ಷಾ ಸಾಮಗ್ರಿಗಳ ವಿತರಣೆ

ಸೋಂಕಿತರ ನೆರವಿಗೆ ರಾಜುಗೌಡ ಸೇವಾ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರ ರಾಣಿ ಚನ್ನಮ್ಮ ಕೋವಿಡ್ ಆರೈಕೆ ಕೇಂದ್ರದಲ್ಲಿ ಹಲವಾರು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕೋವಿಡ್ ಸೋಂಕಿತರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕಾರ್ಯದಲ್ಲಿ ರಾಜುಗೌಡ ಸೇವಾ ಸಮಿತಿ ನಿರತವಾಗಿದೆ.

ಹದಿನೈದು ದಿನಗಳಿಂದ ನಿತ್ಯವೂ ಅವರ ಆಹಾರ ಮತ್ತು ಆರೈಕೆ ದಿನಚರಿಯ ಜೊತೆಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವ ಸಮಿತಿ ಸದಸ್ಯರು, ಕೋವಿಡ್ ಪೀಡಿತರಲ್ಲಿ ಆತಂಕ ನಿವಾರಿಸುತ್ತಿದ್ದಾರೆ.

‘ಬೆಳಿಗ್ಗೆ ಯೋಗಾಸನ ಬಳಿಕ ಕಷಾಯ, ಮೊಳಕೆಕಾಳು, ವಿವಿಧ ಹಣ್ಣುಗಳು, ಸಜ್ಜಕ ನೀಡುತ್ತೇವೆ. ಸಂಜೆ ಸ್ಥಳೀಯವಾಗಿ ಲಭ್ಯವಿರುವ ಕಲಾವಿದರಿಂದ ಮಿಮಿಕ್ರಿ, ಸಂಗೀತ, ಹಾಸ್ಯ ಕಾರ್ಯಕ್ರಮ ಆಯೋಜಿಸುವ ಮೂಲಕ ಅವರಲ್ಲಿನ ರೋಗದ ಭಯ ನಿವಾರಿಸಲಾಗುತ್ತದೆ’ ಎಂದು ರಾಜುಗೌಡ ಸೇವಾ ಸಮಿತಿಯ ಬಸವರಾಜ ಭದ್ರಗೋಳ ತಿಳಿಸಿದರು.

‘ಪ್ರತಿಯೊಬ್ಬರೂ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಮುಖ್ಯ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈಗಾಗಲೇ ಸುರಪುರ ಮತ್ತು ಹುಣಸಗಿ ತಾಲ್ಲೂಕಿನಲ್ಲಿ ಕೋವಿಡ್ ಹತೋಟಿಗೆ ಬಂದಿದೆ. ಕ್ಷೇತ್ರದಲ್ಲಿ ರಾಜುಗೌಡ ಸೇವಾ ಸಮಿತಿ ಕೊರೊನಾ ಸೊಂಕಿತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ’ ಎಂದು ಶಾಸಕ ರಾಜೂಗೌಡ ತಿಳಿಸಿದರು.

‘ಕೊಡೇಕಲ್ಲ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರೈಕೆ ಕೇಂದ್ರದಲ್ಲಿ 52 ಹಾಗೂ ಕಿತ್ತೂರ ರಾಣಿ ಚನ್ನಮ್ಮ ಕೋವಿಡ್ ಆರೈಕೆ ಕೇಂದ್ರದಲ್ಲಿ 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ನಿತ್ಯ ಚಹಾ, ಬಿಸ್ಕಿಟ್ ಹಾಗೂ ಉಪಹಾರ ಎರಡು ಹೊತ್ತು ಊಟ ಹಾಗೂ ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಹುಣಸಗಿ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ತಿಳಿಸಿದರು.

ಉಪತಹಶೀಲ್ದಾರ್ ಬಸವರಾಜ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ, ಮಲ್ಲು ದಂಡಿನ, ಬಸವರಾಜ ಮೇಲಿನಮನಿ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

****

ಆರೈಕೆ ಕೇಂದ್ರದಲ್ಲಿ ಡೊಳ್ಳು ಕುಣಿತ

ಹುಣಸಗಿ : ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರ ರಾಣಿ ಚನ್ನಮ್ಮ ಕೋವಿಡ್ ಆರೈಕೆ ಕೇಂದ್ರದಲ್ಲಿ ಶಾಸಕ ರಾಜೂಗೌಡ ಡೊಳ್ಳು ಬಾರಿಸಿ ಸೋಂಕಿತರಿಗೆ ಸ್ಥೈರ್ಯ ತುಂಬಿದ್ದಾರೆ.

ಹನುಮಸಾಗರದ ಡೊಳ್ಳಿನ ಕಲಾತಂಡದಿಂದ ಡೊಳ್ಳು ಕುಣಿತ ಕಾರ್ಯಕ್ರಮ ಆಯೋಜಿಸಲಗಿತ್ತು. ಈ ಕಾರ್ಯಕ್ರಮದಲ್ಲಿ ಸ್ವತಃ ಶಾಸಕ ರಾಜೂಗೌಡ ಅವರೇ ಡೊಳ್ಳು ಹಾಕಿಕೊಂಡು ಕುಣಿತದಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ ಕೆಲ ಹೊತ್ತು ಎಲ್ಲರ ಸಂತಸಕ್ಕೆ ಪಾರವೇ ಇರಲಿಲ್ಲ. ಕೆಲ ಅಭಿಮಾನಿಗಳು ಕೆಕೆ ಹಾಕಿ ಸಂಭ್ರಮಿಸಿದರು.
 
ನಂತರ ಶಾಸಕ ರಾಜೂಗೌಡ ಮಾತನಾಡಿ, ‘ಕೋವಿಡ್‌ ಬಂದಿದೆ ಎಂದು ಯಾರು ಎದೆಗುಂದಬೇಡಿ. ಧೈರ್ಯದಿಂದ ಇದ್ದು, ವೈದ್ಯರು ನೀಡುವ ಸಲಹೆ ಪಾಲಿಸಿ ಔಷಧಿ ತೆಗೆದುಕೊಂಡಲ್ಲಿ ಕೊರೊನಾ ನಮ್ಮಿಂದ ಓಡಿ ಹೋಗುವುದರಲ್ಲಿ ಎರಡು ಮಾತಿಲ್ಲ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು