4

ಕಂದಾಯ ಶಾಖೆ ಸ್ಥಾಪನೆ: ಸಿಗದ ಸ್ಪಂದನೆ

Published:
Updated:
ಕೆಂಭಾವಿಯಲ್ಲಿರಿವ ಜೆಸ್ಕಾಂ ಶಾಖಾಧಿಕಾರಿಗಳ ಕಚೇರಿ.

ಕೆಂಭಾವಿ: ಪಟ್ಟಣ ಸೇರಿದಂತೆ ವಲಯದಾದ್ಯಂತ ವಸತಿ ಹಾಗೂ ವಾಣಿಜ್ಯ ಪ್ರದೇಶದಿಂದ ಜೆಸ್ಕಾಂ ಇಲಾಖೆಗೆ ಗ್ರಾಹಕರು ಪ್ರತಿ ತಿಂಗಳು ₹ 30 ಲಕ್ಷದವರೆಗೆ ವಿದ್ಯುತ್ ಬಿಲ್ ಪಾವತಿಸುತ್ತಾರೆ. ಆದರೆ ಗ್ರಾಹಕರಿಗೆ ಅನುಕೂಲವಾಗುವ ಕಂದಾಯ ಶಾಖೆಯನ್ನು ಸ್ಥಾಪಿಸಲು ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಪಟ್ಟಣದಲ್ಲಿ ಕೇಂದ್ರಿಕೃತ ಬ್ಯಾಂಕುಗಳು, ಯುಕೆಪಿ ವಸತಿಗೃಹಗಳು, ಕೈಗಾರಿಕಾ ತರಬೇತಿ ಕೇಂದ್ರಗಳು, ಶಾಲಾ ಕಾಲೇಜು, ಆಸ್ಪತ್ರೆ ಸೇರಿದಂತೆ ವಲಯದಲ್ಲಿ  40 ರಿಂದ 45 ಗ್ರಾಮಗಳು ಒಳಪಟ್ಟಿದೆ.  ಯಾವುದೆ ಗ್ರಾಹಕರ ವಿದ್ಯುತ್ ಬಿಲ್ಲು ವ್ಯತ್ಯಾಸ ಕಂಡುಬಂದರೆ, ಪಾವತಿಸಿದ ಬಿಲ್ಲು ಬೇರೆ ಗ್ರಾಹಕರ ಹೆಸರಿಗೆ ಜಮೆಯಾದರೆ ಅಥವಾ ಗ್ರಾಹಕರ ಇತರೆ ಕುಂದುಕೊರತೆ ಸರಿಪಡಿಸಿಕೊಳ್ಳಬೇಕಾದರೆ ಗ್ರಾಹಕರು ಸುರಪುರದಲ್ಲಿನ ಜೆಸ್ಕಾಂ ಉಪ ವಿಭಾಗ ಕಚೇರಿಗೆ ಸಂಪರ್ಕಿಸಬೇಕು. ಈ ಎಲ್ಲದರ ಮಧ್ಯೆ ಕೆಲ ಗ್ರಾಹಕರು ತಾವು ತುಂಬಿದ ಹಣ ತಮ್ಮ ಆರ್‌ಆರ್ ಸಂಖ್ಯೆಗೆ ಜಮೆಯಾಗದೆ ಬೇರೆ ಆರ್‌ಆರ್‌ ಸಂಖ್ಯೆಗೆ ಜಮೆಯಾಗಿ, ನಷ್ಟ ಅನುಭವಿಸಿದ್ದಾರೆ.

ಕೆಂಭಾವಿ ವಲಯದಾದ್ಯಂತ ವಸತಿಗೃಹಗಳು, ಹಿಟ್ಟಿನ ಗಿರಣಿ, ಅಂಗಡಿ ಮುಗ್ಗಟ್ಟುಗಳಿಂದ ಪ್ರತಿ ತಿಂಗಳು ₹ 30 ಲಕ್ಷಕ್ಕೂ ಅಧಿಕ ವಿದ್ಯುತ್‌ ಬಿಲ್ಲು ಸಂಗ್ರಹವಾಗುತ್ತಿದೆ. ಪಟ್ಟಣದಲ್ಲಿರುವ ಗುತ್ತಿಬಸವೇಶ್ವರ ಏತ ನೀರಾವರಿ ಹಾಗು ಮಲ್ಲಾಬಾದ ಏತ ನೀರಾವರಿಯಿಂದ ₹ 90 ರಿಂದ ₹ 95 ಲಕ್ಷ ಸಂಗ್ರಹವಾಗಿತ್ತಿದೆ ಎನ್ನಲಾಗಿದೆ.

ಕೆಂಭಾವಿ ವಲಯವು ಜಿಲ್ಲೆಯಲ್ಲಿ ಅತಿ ದೊಡ್ಡ ಶಾಖೆಯಾಗಿದೆ. ಜೆಸ್ಕಾಂ ಇಲಾಖೆಗೆ ಸಾಕಷ್ಟು ಆದಾಯ ಬರುತ್ತಿದ್ದರೂ ಮಳೆ ಗಾಳಿಯಿಂದ ವಿದ್ಯುತ್ ಕಂಬಗಳು ಮುರಿದು ಬಿದ್ದರೆ ತಕ್ಷಣ ಸರಿಪಡಿಸಲು ವಿದ್ಯುತ್ ಕಂಬಗಳ ಲಭ್ಯತೆ ಕೂಡ ಇಲ್ಲದಂತಾಗಿದೆ. ಈಗಾಗಲೇ ಪಟ್ಟಣಕ್ಕೆ ಹೆಚ್ಚುವರಿ 3 ವಿದ್ಯುತ್ ಪರಿವರ್ತಕಗಳು ಮಂಜುರಾತಿಯಾಗಿದ್ದು ಕಂಬಗಳ ಕೊರತೆಯಿಂದ ಪರಿವರ್ತಕಗಳನ್ನು ಆಳವಡಿಸಲಾಗಿರುವುದಿಲ್ಲ.

‘ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಮುತುವರ್ಜಿ ವಹಿಸಿ ಪಟ್ಟಣದಲ್ಲಿ ಕಂದಾಯ ಶಾಖೆ ಸ್ಥಾಪಿಸಿ, ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ ಕಂಬಗಳ ಲಭ್ಯತೆ ಒದಗಿಸಿ ಪರಿವರ್ತಕಗಳ ಅಳವಡಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಕಂದಾಯ ಶಾಖೆ ಸ್ಥಾಪಿಸುವುದು ಅವಶ್ಯವಿದೆ. ಗ್ರಾಹಕರ ಸಮಸ್ಯೆ ಎದುರಿಸಲು ಸಹಕಾರಿಯಾಗಲಿದೆ. ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ಶ್ರೀಶೈಲ್, ಶಾಖಾಧಿಕಾರಿ, ಜೆಸ್ಕಾಂ ಇಲಾಖೆ

ಪಟ್ಟಣದಲ್ಲಿ ಜೆಸ್ಕಾಂ ಇಲಾಖೆಯ ಕಂದಾಯ ಶಾಖೆ ಸ್ಥಾಪಿಸುವಂತೆ ಪುರಸಭೆವತಿಯಿಂದ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಇಲಾಖೆಯಿಂದ ಯಾವುದೆ ರೀತಿಯ ಉತ್ತರ ಬಂದಿಲ್ಲ.
– ದೇವಪ್ಪ ಮ್ಯಾಗೇರಿ, ಅಧ್ಯಕ್ಷ, ಕೆಂಭಾವಿ ಪುರಸಭೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !