ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ವಿಶ್ವಕ್ಕೆ ಹಿಂದೂ ಧರ್ಮ ಪರಿಚಯಿಸಿದ ಸಂತ ವಿವೇಕಾನಂದ

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮತ; ರಾಷ್ಟ್ರೀಯ ಯುವ ಸಪ್ತಾಹ
Last Updated 12 ಜನವರಿ 2023, 16:37 IST
ಅಕ್ಷರ ಗಾತ್ರ

ಯಾದಗಿರಿ: ದೇಶದ ಕೋಟ್ಯಂತರ ಜನ ಯುವಕರಿಗೆ ಇಂದಿಗೂ ಸ್ಫೂರ್ತಿಯಾದವರು ಸ್ವಾಮಿ ವಿವೇಕಾನಂದರು. ಇವರು ಆಧುನಿಕ ಯುಗದ ಶ್ರೇಷ್ಠ ಸಂತರು ಮತ್ತು ಹಿಂದೂ ಧರ್ಮವನ್ನು ವಿಶ್ವಕ್ಕೆ ಪರಿಚಯಿಸಿದ ಸಂತ ಸ್ವಾಮಿ ವಿವೇಕಾನಂದರು ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗ ಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಗುರುವಾರ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ, ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ ಪ್ರಯುಕ್ತ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಯಂ ಉದ್ಯೋಗ ಕೈಗೊಳ್ಳಲು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಯುವ ಸಮುದಾಯ ಸದುಪಯೋಗ ಪಡೆದು ಸ್ವಂತ ದುಡಿಮೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಜನರು ಬಣ್ಣ ಬಣ್ಣದ ಜಾಹೀರಾತುಗಳಿಗೆ ಮರುಳಾಗದೆ ಖರೀದಿಸುವ ವಸ್ತುಗಳ ನಿಖರ ದಿನಾಂಕಗಳನ್ನು ಗಮನಿಸಿ ಅದರ ಮೌಲ್ಯ ತಿಳಿದು, ನಕಲಿ ಅಸಲಿ ಕುರಿತಾಗಿ ಎಚ್ಚರವಹಿಸಬೇಕು. ಗ್ರಾಹಕರ ಹಕ್ಕುಗಳ ಕುರಿತು ಮಾಹಿತಿ ಪಡೆದು ಖರೀದಿಸಿ ಸಾಮಗ್ರಿಗಳಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಬಹುದು ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮಾತನಾಡಿ ನಮ್ಮ ಜಿಲ್ಲೆಯಲ್ಲಿಯೇ ಉದ್ಯೋಗವಿರಬೇಕು, ಬೇರೆ ಕಡೆ ಬೇಡ ಎಂಬ ಮನೋಭಾವ ಯುವಕರು ಕೈ ಬಿಡಬೇಕು. ಯಾವುದೇ ಕ್ಷೇತ್ರದಲ್ಲಾದರೂ ಕೆಲಸ ಮಾಡಬಲ್ಲೆ ಎಂಬ ನಿರ್ಧಾರದೊಂದಿಗೆ ಅವಕಾಶ ಕಲ್ಪಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಯುವಕರು ಉದ್ಯೋಗ ಹರಿಸಿ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುವ ಬದಲು ಸ್ವಯಂ ಉದ್ಯೋಗಿಗಳಾಗಿ ಹಲವರಿಗೆ ಕೆಲಸ ಕೊಡುವಂತಾಗಬೇಕು ಎಂದರು.

ಇದೆ ವೇಳೆ ಪಿರಾಮಲ್ ಫೌಂಡೇಶನ್‌ನಿಂದ ಜಿಲ್ಲಾ ಕೌಶಲ ಇಲಾಖೆಯ ಸಹಯೋಗದೊಂದಿಗೆ ಯವಕರು ಸಂದರ್ಶನ ಹೇಗೆ ಎದುರಿ ಸಬೇಕು ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಸಿದರು.

ಈ ಸಂದರ್ಭದಲ್ಲಿ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರನಾಥ ಕೆ. ನಾದ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರುದ್ರಗೌಡ ಪಾಟೀಲ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ಬಸಪ್ಪ ತಳವಡಿ, ಕ್ರೀಡಾ ಇಲಾಖೆ ಅಧಿಕಾರಿ ರಾಜು ಭಾವಿಹಳ್ಳಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಪ್ರಭುದೊರೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್,. ಕೌಶಲಾಭಿವೃದ್ದಿ ಇಲಾಖೆ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ, ಲೀಡ್ ಕಾಲೇಜು ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಇದ್ದರು.

ಮದ್ಯ ಮಾರಾಟ ಸಂಪೂರ್ಣ ನಿಷೇಧ
ಮೈಲಾಪುರ ಗ್ರಾಮದಲ್ಲಿ ಮೈಲಾಲಿಂಗೇಶ್ವ ಜಾತ್ರೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಮೈಲಾಪುರ, ಅರಕೇರಾ ಹಾಗೂ ರಾಮಸಮುದ್ರ ಗ್ರಾಮ ಗಳಲ್ಲಿ ಜನವರಿ 11ರ ಮಧ್ಯರಾತ್ರಿಯಿಂದ ಜನವರಿ 18ರ ಮಧ್ಯರಾತ್ರಿಯ ವರೆಗೆ ಎಲ್ಲಾ ವೈನ್‌ಶಾಪ್, ಬಾರ್‌ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಸ್ನೇಹಲ್ ಆರ್., ಆದೇಶ ಹೊರಡಿಸಿದ್ದಾರೆ.

'ಗುರಿ-ಕನಸು ಸಾಧಿಸಲು ಛಲ ಇಲ್ಲದವರು ನಿಜವಾದ ಬಡವರು'
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಹಣ ಇಲ್ಲದವರು ಬಡವರಲ್ಲ, ಗುರಿ-ಕನಸು ಸಾಧಿಸಲು ಛಲ ಇಲ್ಲದವರು ನಿಜವಾದ ಬಡವರು ಎಂಬ ವಿವೇಕಾನಂದರ ವಾಕ್ಯದಂತೆ ಯುವ ಜನತೆ ಉತ್ತಮ ಶಿಕ್ಷಣ ಪಡೆದು ಸಂಘಟಿತರಾಗಿ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ಯುವಕರಿಗೆ ಕರೆ ನೀಡಿದರು.

ಯುವ ಸಮುದಾಯಕ್ಕೆ ನಿರಂತರವಾಗಿ ತರಬೇತಿಗಳನ್ನು ನೀಡುವ ಉದ್ದೇಶದಿಂದ ಕೌಶಲ ಕೇಂದ್ರ ಸ್ಥಾಪಿಸಿದೆ. ಮಹಿಳೆಯರು ಸ್ವ- ಸಹಾಯ ಸಂಘಗಳ ಮುಖಾಂತರ ಹೆಚ್ಚಿನ ಆದಾಯ ಗಳಿಸಿ ಸ್ವಾವಲಂಬಿ ಜೀವನ ನಡೆಸುವುದಕ್ಕೆ ಸರ್ಕಾರವು ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.

ಯುವ ಸಪ್ತಾಹ ದಿನದ ಅಂಗವಾಗಿ ಗ್ರಾಮ ಪಂಚಾಯಿತಿಗೆ ಒಂದರಂತೆ 122 ಯುವ ಸಂಘ ಸ್ಥಾಪಿಸಿ ಸರ್ಕಾರದಿಂದ ಹಣ ಹೂಡಿಕೆ ಮಾಡಿ ಯುವಕರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಿ ಸ್ವಯಂ ಉದ್ಯೋಗ ಪಡೆದು ಅವಕಾಶ ಮಾಡಲಾಗುತ್ತಿದೆ ಎಂದರು.

ಹುಣಸಗಿ: ವಿವೇಕಾನಂದರ ಜಯಂತಿ
ಹುಣಸಗಿ:
ಭಾರತೀಯ ಇತಿಹಾಸದಲ್ಲಿ ಧ್ಯಾನ ಮತ್ತು ಜ್ಞಾನದ ದಿವ್ಯ ವ್ಯಕ್ತಿತ್ವವನ್ನು ಹೊಂದಿದವರು ಸ್ವಾಮಿ ವಿವೇಕಾನಂದರು ಎಂದು ಆಶೀರ್ವಾದ ಗ್ಲೋಬಲ್ ಶಾಲೆಯ ಉಪಾಧ್ಯಕ್ಷ ಡಾ. ಚನ್ನಬಸವನಗೌಡ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಅವರ 160 ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಸ್ಪಂದನ ಪಬ್ಲಿಕ್ ಶಾಲೆ: ಹುಣಸಗಿ ಪಟ್ಟಣದ ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಮುಖ್ಯ ಶಿಕ್ಷಕಿ ಸೌಂದರ್ಯ ಅವರು ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶಾಲೆಯ ಮುಖ್ಯಸ್ಥ ಮಲ್ಲಿಕಾರ್ಜುನ ಗುತ್ತೇದಾರ, ಸ್ವಪ್ನ ಅಗ್ನಿ, ಪಲ್ಲವಿ ಇತರರು ಇದ್ದರು.

ಬಲಶೆಟ್ಟಿಹಾಳ: ಹುಣಸಗಿ ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸಂಗಯ್ಯ ಬಾಚ್ಯಾಳ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಈ ವೇಳೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

***

ನಮ್ಮ ಜಿಲ್ಲೆಯಲ್ಲಿಯೇ ಉದ್ಯೋಗವಿರಬೇಕು, ಬೇರೆ ಕಡೆ ಬೇಡ ಎಂಬ ಸೀಮಿತ ಮನೋಭಾವ ಯುವಕರು ಬಿಡಬೇಕು. ಯಾವುದೇ ಕ್ಷೇತ್ರದಲ್ಲಾದರೂ ಕೆಲಸ ಮಾಡಬಲ್ಲೆ ಎಂಬ ನಿರ್ಧಾರದೊಂದಿಗೆ ಅವಕಾಶ ಕಲ್ಪಿಸಿಕೊಳ್ಳಬೇಕು.
–ಅಮರೇಶ ಆರ್‌ ನಾಯ್ಕ್, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT