ಸೂರು ವಂಚಿತ ಪರಿಶಿಷ್ಟ ಪಂಗಡ ಕುಟುಂಬಗಳು

7
ವನದುರ್ಗ: 30 ವರ್ಷಗಳಿಂದ ಗುಡಿಸಲಿನಲ್ಲಿ ವಾಸ

ಸೂರು ವಂಚಿತ ಪರಿಶಿಷ್ಟ ಪಂಗಡ ಕುಟುಂಬಗಳು

Published:
Updated:
Deccan Herald

ಶಹಾಪುರ: ತಾಲ್ಲೂಕಿನ ವನದುರ್ಗ ಗ್ರಾಮದ ಪರಿಶಿಷ್ಟ ಜಾತಿಯ 20 ಕುಟುಂಬಗಳು ಸೂರಿಲ್ಲದೆ ಸಂಕಷ್ಟದಲ್ಲಿ ಬದುಕುತ್ತಿವೆ.

ವನದುರ್ಗ ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ. ಐದು ಸಾವಿರ ಜನಸಂಖ್ಯೆ ಇದೆ. ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  30 ವರ್ಷಗಳಿಂದ ಈ ಕುಟುಂಬಗಳು ಗ್ರಾಮದ ಹೊರವಲಯದ ಎತ್ತರ ಪ್ರದೇಶದಲ್ಲಿ ಗುಡಿಸಲಿನಲ್ಲಿ ವಾಸವಾಗಿವೆ.‌

ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುವ ಈ ಕುಟುಂಬಗಳಿಗೆ ಸ್ವಂತ ಮನೆ ಕನಸಾಗಿದೆ. 

‘ಹಳ್ಳದ ದಂಡೆಯಲ್ಲಿ ಬೆಳೆಯುವ ಆಪು (ಉದ್ದನೆಯ ಸೊಪ್ಪಿ) ತಂದು ನಾಲ್ಕು ಕಡೆ ಕಟ್ಟಿಗೆ ನೆಟ್ಟು, ಅದರ ಮೇಲೆ ತೊಗರಿ ಕಟ್ಟಿಗೆ ಹಾಗೂ ಪ್ಲಾಸ್ಟಿಕ್ ಚೀಲ ಹೊದಿಕೆ ಹಾಕಿದ್ದೇವೆ. ಮಳೆಗಾಲದಲ್ಲಿ ನಮ್ಮ ಪಾಡು ಹೇಳತೀರದು’ ಎಂದು ಗುಡಿಸಲು ವಾಸಿ ಲಕ್ಷ್ಮಿ ಅಳಲು ತೋಡಿಕೊಂಡರು.

‘ವಿದ್ಯುತ್ ಸಂಪರ್ಕವಿಲ್ಲ. ಸಂಜೆ ಸೂರ್ಯ ಮುಳುಗುವ ಮುನ್ನ  ಊಟ ಮಾಡಿಕೊಳ್ಳುತ್ತೇವೆ. ವಿಷ ಜಂತುಗಳ ಭಯದ ನೆರಳಿನಲ್ಲಿ ಮಕ್ಕಳನ್ನು ಎದೆಗೆ ಅವುಚಿಕೊಂಡು ರಾತ್ರಿ ಕಾಲ ಕಳೆಯುತ್ತೇವೆ. ಚಿಮಣಿ ಬುಡ್ಡಿಯೇ ನಮಗೆ ವಿದ್ಯುತ್. ತುಸು ಗಾಳಿ ಬಿಟ್ಟರೆ ಗುಡಿಸಲಿಗೆ ಬೆಂಕಿ ತಾಗುವ ಆತಂಕವು ನಮ್ಮನ್ನು ಕಾಡುತ್ತಿದೆ. ಮಧ್ಯಾಹ್ನದ ಬಿಸಿಯೂಟ ಸಿಗುತ್ತದೆ ಎಂದು ನಮ್ಮ ಮಕ್ಕಳು ತುಸು ದೂರದಲ್ಲಿರುವ ಶಾಲೆಗೆ ಹೋಗುತ್ತಾರೆ. ನಮಗೇ ನೆರಳಿನ ಆಸರೆ ಇಲ್ಲ ಎಂದ ಮೇಲೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ದೂರದ ಮಾತು’ ಎಂದು ಅಸಹಾಯಕತೆ ವ್ಯಕ್ತಪಡಿಸಿರು.

‘ಗುಡಿಸಲು ಮುಕ್ತ ಗ್ರಾಮ ಎಂಬ ಸರ್ಕಾರದ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಪ್ರತಿ ವರ್ಷ ಸರ್ಕಾರದ ವಿವಿಧ ಯೋಜನೆಗಳ ಅಡಿ ಮನೆಗಳು ಮಂಜೂರು ಆಗಿದ್ದರೂ  ನಿಜವಾದ  ಫಲಾನುಭವಿಗಳಿಗೆ   ತಲುಪಿಲ್ಲ. ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದು ಸುಸ್ತಾಗಿ ಹೋಗಿದ್ದೇವೆ. ಪ್ರತಿಯೊಂದಕ್ಕೂ ನಾಳೆ ಬಾ ಎಂಬ ಸಿದ್ಧ ಉತ್ತರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡುತ್ತಾರೆ. ಗ್ರಾಮ ಪಂಚಾಯಿತಿ ಸದಸ್ಯರು ಮೊದಲು ಮನೆಗಳನ್ನು ಹಂಚಿಕೆ ಮಾಡಿಕೊಂಡು ತಮ್ಮ ಹಿಂಬಾಲಕರಿಗೆ ನೀಡುತ್ತಾರೆ. ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂಬುದು ಗುಡಿಸಲು ನಿವಾಸಿಗಳ ಆರೋಪ.

‘ಅಲ್ಲಿನ ನಿವಾಸಿಗಳಿಗೆ ಈಗಾಗಲೇ ಐದು ಮನೆಗಳನ್ನು ನೀಡಲಾಗಿದೆ. ಇನ್ನೂ ವಿವಿಧ ಯೋಜನೆ ಅಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಿರಂತರ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ಮನವಿ ಸಲ್ಲಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ ದೊರೆ ತಿಳಿಸಿದರು.

ಗ್ರಾಮ ಸಭೆ ಮೂಲಕ 400 ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಮಂಜೂರಾತಿಗೆ ಕಳಿಸಲಾಗಿದೆ. ಅಗತ್ಯ ದಾಖಲೆ ಮೂಲಕ ಬಂದರೆ ಪರಿಶೀಲಿಸಲಾಗುವುದು
- ಭೀಮಣ್ಣಗೌಡ ಪಾಟೀಲ ಬಿರಾದಾರ, ಪಿಡಿಒ, ವನದುರ್ಗ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !