ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಕಡಿವಾಣ; ಪೊಲೀಸರಿಗೆ ಸವಾಲು

Last Updated 7 ಅಕ್ಟೋಬರ್ 2021, 4:56 IST
ಅಕ್ಷರ ಗಾತ್ರ

ಶಹಾಪುರ: ಕೆಲವು ತಿಂಗಳಿಂದ ಶಹಾಪುರ, ಗೋಗಿ ಮತ್ತು ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೇರಿದಂತೆ ಏಳು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದು ಪೊಲೀಸರಿಗೆ ಸವಾಲಿನ ಜತೆಗೆ ತಲೆನೋವಾಗಿ ಪರಿಣಮಿಸಿದೆ.

ಸರಣಿ ಪ್ರಕರಣಗಳಿಂದ ಜನರು ಕೂಡ ಆತಂತಕ್ಕೆ ಒಳಗಾಗಿದ್ದಾರೆ. ತಿಂಗಳ ಹಿಂದಷ್ಟೇ ಮಹಿಳೆಯನ್ನು ನಗ್ನಗೊಳಿಸಿ ಅತ್ಯಾಚಾರ ಎಸಗಲಾಗಿದೆ ಎನ್ನುವ ವರ್ಷದ ಹಿಂದಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರಿಂದ ಇಡೀ ತಾಲ್ಲೂಕಿನ ಜನರು ತಲೆ ತಗ್ಗಿಸುವಂತೆ ಆಗಿದೆ. ಈ ಘಟನೆ ಬೆನ್ನಲ್ಲೇ ಮತ್ತೆರಡು ಪ್ರಕರಣಗಳು ವರದಿಯಾಗಿ ಜನರಲ್ಲಿ ಆತಂಕ ಶುರುವಾಗಿದೆ. ಪೊಲೀಸರು ತಕ್ಷಣ ಕಾರ್ಯೋನ್ಮಖರಾಗಿ ಆರೋಪಿಗಳನ್ನು ಬಂಧಿಸಿರುವುದು ಸಮಾಧಾನದ ಸಂಗತಿಯಾಗಿದೆ.

’ಜನರು ಹೆಚ್ಚು ಜಾಗ್ರತೆ ವಹಿಸುವುದು ಸದ್ಯದ ಅಗತ್ಯವಾಗಿದೆ‘ ಎಂದು ಬಿಜೆಪಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಹೇಳುತ್ತಾರೆ.

’ಬಹುತೇಕ ಪ್ರಕರಣಗಳಲ್ಲಿ ಹುಡುಗ ಮತ್ತು ಹುಡುಗಿ ಪ್ರೇಮಿಸಿದಾಗ ಅದಕ್ಕೆ ಜಾತಿ ಹಾಗೂ ವಯಸ್ಸಿನ ಅಡ್ಡಿ ಜತೆಗೆ, ಕುಟುಂಬದ ಪ್ರತಿಷ್ಠೆಯಿಂದ ಸಂತ್ರಸ್ತೆಯ ಪರವಾಗಿ ಪಾಲಕರು ದೂರು ದಾಖಲಿಸುತ್ತಾರೆ. ಇಲ್ಲಿ ನಿಜವಾಗಿಯೂ ಅತ್ಯಾಚಾರ ಆಗಿರುವುದಿಲ್ಲ. ಪರಸ್ಪರ ಸಮ್ಮತಿಯ ಮೇರೆಗೆ ದೈಹಿಕ ಸಂಪರ್ಕ ನಡೆದರು ಸಹ ಕಾನೂನು ಚೌಕಟ್ಟಿನಲ್ಲಿ ಅಪರಾಧವಾಗಿದ್ದರಿಂದ ತಕ್ಷಣ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುತ್ತೇವೆ. ಕಟು ವಾಸ್ತವದ ಸತ್ಯವನ್ನು ನಾವು ಯಾರ ಮುಂದೆ ಹೇಳುವಂತಿಲ್ಲ‘ ಎನ್ನುತ್ತಾರೆ ಪೊಲೀಸ್ ತನಿಖಾಧಿಕಾರಿ ಒಬ್ಬರು.

’ಸಂತ್ರಸ್ತೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆಯನ್ನು ದಾಖಲಿಸಿಕೊಳ್ಳುವಾಗ ಕೆಲ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾಗಿ ಹೇಳಿಕೆಯನ್ನು ತದ್ವಿರುದ್ಧವಾಗಿ ಹೇಳಿರುವುದೂ ಇದೆ. ಇಂತಹ ಸೂಕ್ಷ್ಮ ವಿಚಾರವನ್ನು ನಾವು ಬಾಯಿ ಬಿಡುವಂತಿಲ್ಲ. ಜನರು ಜಾಗೃತಗೊಳ್ಳುವುದು ಮುಖ್ಯ ಎನ್ನುತ್ತಾರೆ‘ ಅವರು.

ವಿವಿಧ ಗ್ರಾಮದಲ್ಲಿ ಜಾಗೃತಿ ಸಭೆ: ತಾಲ್ಲೂಕಿನ ಸಗರ, ಟೋಕಾಪುರ, ಶಿರವಾಳ ಗ್ರಾಮದಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ಹಾಗೂ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು, ನೊಂದವರು ಭಯಪಡದೆ ಠಾಣೆಗಳಲ್ಲಿ ದೂರು ದಾಖಲಿಸಬೇಕು ಎಂದು ಪೊಲೀಸರು ಮನವಿ ಮಾಡಿದರು.

*
ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇಲಾಖೆಗೆ ಜನರು ಸಹಕಾರ ನೀಡಬೇಕು. ದೌರ್ಜನ್ಯದ ನಡೆದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.
-ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT