ಭಾನುವಾರ, ಸೆಪ್ಟೆಂಬರ್ 26, 2021
28 °C
ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅಭಿಮತ

ಬಿಜೆಪಿಯಿಂದ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಬಿಜೆಪಿ ಸರ್ಕಾರದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಸಿಗುತ್ತಿದೆ. ಕಳೆದ 60 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ಇದನ್ನು ಕಡೆಗಣಿಸಿತ್ತು’ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಕೇವಲ ₹40 ಸಾವಿರ ಕೋಟಿ ಮಾತ್ರ ಮನ್ನಾ ಮಾಡಿದ್ದಾರೆ. ಆದರೆ, ಬಿಜೆಪಿ ಸರ್ಕಾರ 10 ಕೋಟಿ ಸಣ್ಣ ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ನೇರವಾಗಿ ಹಣ ಜಮಾ ಮಾಡಿದೆ. ಇದೇ 9ರಂದು ₹19 ಸಾವಿರ ಕೋಟಿ ಹಣ ಜಮಾ ಮಾಡಲಾಗಿದೆ’ ಎಂದು ತಿಳಿಸಿದರು.

‘ಉಜ್ವಲ ಯೋಜನೆಯಡಿ 8 ಕೋಟಿ ಜನರಿಗೆ ಗ್ಯಾಸ್‌ ಸಿಲಿಂಡರ್‌ ನೀಡಲಾಗಿದೆ. ವಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಹಣ ಸಹಾಯ ಮಾಡುತ್ತಿದೆ. ಆಯುಷ್ಮಾನ್‌ ಕಾರ್ಡ್‌ ಮಾಡಿಸುವ ಮೂಲಕ ಜನರಿಗೆ ನೆರವಾಗಬೇಕು’ ಎಂದರು.

‘ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ದಲ್ಲಾಳಿಗಳಾಗಿದ್ದಾರೆ. ಅವರು ನಿಜವಾದ ರೈತರೇ ಅಲ್ಲ, ಇವರಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ. ಕಾಂಗ್ರೆಸ್‌ ಇವರನ್ನು ಎತ್ತಿ ಕಟ್ಟಿದೆ. ಕೆಲ ರಾಜ್ಯಗಳವರು ಮಾತ್ರ ವಿರೋಧ ಮಾಡುತ್ತಿದ್ದಾರೆ’ ಎಂದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ‘ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬೀಜ ದಾಸ್ತಾನು ಸಂಗ್ರಹಣೆ ಉದ್ದೇಶದ ರೇಕ್ ಪಾಯಿಂಟ್ ನಿರ್ಮಾಣ ಮಾಡಲು ಕೇಂದ್ರ ಸಚಿವರಲ್ಲಿ ಮನವಿ ಮಾಡುತ್ತೇನೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮಠ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಇದನ್ನು ಸಹಿಸದ ಕಾಂಗ್ರೆಸ್‌ ಅಪಪ್ರಚಾರ ಮಾಡುವ ಮೂಲಕ ಪರಂಪರೆಯನ್ನು ಉಲ್ಲಂಘಿಸಿದೆ’ ಎಂದು ಟೀಕಿಸಿದರು.

ಕಲಬುರ್ಗಿ ವಿಭಾಗ ಪ್ರಭಾರಿ ರಾಜಕುಮಾರ ಪಾಟೀಲ ತೆಲ್ಕೂರ, ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ಮಾಜಿ ಶಾಸಕ ಗುರು ಪಾಟೀಲ ಶಿರವಾಳ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಶಶಿಲ್ ಜಿ ನಮೋಶಿ, ಕೃಷ್ಣಾ ಕಾಡಾ ಭೀಮರಾಯಗುಡಿ ಅಧ್ಯಕ್ಷ ಶರಣಪ್ಪ ತಳವಾರ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುರೇಶ ಸಜ್ಜನ್‌, ಗುರುಮಠಕಲ್ ಮತಕ್ಷೇತ್ರದ ಮುಖಂಡ ಸಾಯಿಬಣ್ಣ ಬೋರಬಂಡಾ, ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನಪುರ, ಎಪಿಎಂಸಿ ಅಧ್ಯಕ್ಷ ಭೀಮರೆಡ್ಡಿ ಮುದ್ನಾಳ, ಶಹಾಪುರ ಮುಖಂಡ ಅಮೀನರೆಡ್ಡಿ ಯಾಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ಕೆ.ನಾದ, ಅಧ್ಯಕ್ಷ ನಗರಸಭೆ ವಿಲಾಸ್ ಪಾಟೀಲ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌, ಯುಡ ಅಧ್ಯಕ್ಷ ಬಸವರಾಜ ಚಂದ್ರಿಕಿ, ಎಚ್‌.ಸಿ.ಪಾಟೀಲ, ವಿರೂಪಾಕ್ಷಯ್ಯ ಸ್ವಾಮಿ, ಕಾರ್ಯಕರ್ತರು ಇದ್ದರು.

ಜಿಲ್ಲಾ ಉಪಾಧ್ಯಕ್ಷ ನೀಲಕಂಠರಾಯ ಎಲ್ಹೇರಿ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರ ಸ್ವಾಗತಿಸಿದರು. ನಗರ ಮಂಡಲ ಅಧ್ಯಕ್ಷ ಸುರೇಶ್ ಅಂಬಿಗೇರ ವಂದಿಸಿದರು.

***

ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು
ಭಗವಂತ ಖೂಬಾ, ಕೇಂದ್ರ ಸಚಿವ

***

ಕೋವಿಡ್‌ ನಿಯಮ ಉಲ್ಲಂಘನೆ

ಜಿಲ್ಲೆಯಲ್ಲಿ ಆಗಸ್ಟ್ 30ರವರೆಗೆ ಸಾಮಾಜಿಕ, ರಾಜಕೀಯ, ಮೆರವಣಿಗೆಗಳು ಮತ್ತು ಸಭೆಗಳನ್ನು ನಿಷೇಧಿಸಿ ಆದೇಶಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ರಾಜಕೀಯ ಮುಖಂಡರು ನೂರಾರು ಜನರನ್ನು ಸೇರಿಸಿ ಸಭೆ ನಡೆಸಿದ್ದಾರೆ.

ಖೂಬಾ ಅವರನ್ನು ಸ್ವಾಗತಿಸಲು ಮಾಸ್ಕ್ ಧರಿಸದೆ, ಅಂತರ ಕಾಪಾಡಿಕೊಳ್ಳದೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

‘ಜನಾರ್ಶೀವಾದ ಯಾತ್ರೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವತಿಯಿಂದ ಯಾವುದೇ ಪರವಾನಗಿ ನೀಡಿಲ್ಲ. ಕಾರ್ಯಕ್ರಮ ಮಾಡುವ ಬಗ್ಗೆ ಮೌಕಿಕ ಮತ್ತು ಪತ್ರದ ಮೂಲಕವೂ ಯಾವುದೇ ಪರವಾನಗಿ ತೆಗೆದುಕೊಂಡಿಲ್ಲ. ಕೋವಿಡ್‌ ನಿಯಮ ಉಲ್ಲಂಘನೆಯಾಗಿದ್ದರೆ ತನಿಖೆ ಮಾಡಿ ಕಾರ್ಯಕ್ರಮ ಅಯೋಜಕರಿಗೆ ನೋಟಿಸ್‌ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
********
ಯುವ ಮೋರ್ಚಾದಿಂದ ಬೈಕ್‌ ರ್‍ಯಾಲಿ

ಜನಾರ್ಶೀವಾದ ಯಾತ್ರೆಗೆ ಬಂದ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಬೈಕ್‌ ರ್‍ಯಾಲಿ ಮೂಲಕ ಬಿಜೆಪಿ ಯುವ ಮೋರ್ಚಾದಿಂದ ಕಾರ್ಯಕ್ರಮ ನಡೆಯುವ ವಿದ್ಯಾಮಂಗಲ ಕಾರ್ಯಾಲಯಕ್ಕೆ ಕರೆತರಲಾಯಿತು.

ಹತ್ತಿಕುಣಿ ಕ್ರಾಸ್‌ನ ಮೂಲಕ ಆರಂಭವಾದ ಮೆರವಣಿಗೆ ಗಾಂಧಿ ವೃತ್ತ, ಕನಕ ವೃತ್ತ, ಅಂಬೇಡ್ಕರ್‌ ವೃತ್ತದ ಮೂಲಕ ಕಾರ್ಯಾಲಯದವರೆಗೆ ತಲುಪಿತು. ಮೆರವಣಿಗೆ ಉದ್ದಕ್ಕೂ ವಿವಿಧ ವಾದ್ಯ ಮೇಳಗಳ ಮೂಲಕ ತೆರೆದ ಜೀಪಿನಲ್ಲಿ ಸಚಿವರು, ಶಾಸಕರು, ನಗರಸಭೆ ಅಧ್ಯಕ್ಷ ಸೇರಿದಂತೆ ಹಲವಾರು ಮುಖಂಡರು ಇದ್ದರು.
***
ಬೋರಬಂಡ ಬೆಂಬಲಿಗರ ಆಕ್ರೋಶ

ಸ್ವಾಗತ ಭಾಷಣದಲ್ಲಿ ಗುರುಮಠಕಲ್‌ ಬಿಜೆಪಿ ಮುಖಂಡ ಸಾಯಿಬಣ್ಣ ಬೋರಬಂಡ ಅವರ ಹೆಸರನ್ನು ಮರೆತ್ತಿದ್ದರಿಂದ ಅವರ ಬೆಂಬಲಿಗರು ಕೆಲವೊತ್ತು ಸಭೆಯಲ್ಲಿ ಗದ್ದಲ ಮಾಡಿದರು.

ನಮ್ಮ ಭಾಗದ ಮುಖಂಡರನ್ನು ಸ್ವಾಗತಿಸದೇ ಅವಮಾನ ಮಾಡಲಾಗಿದೆ. ಕಾರ್ಯಕ್ರಮದಿಂದ ಎದ್ದು ಹೋಗುತ್ತೇವೆ ಎಂದು ಪಟ್ಟು ಹಿಡಿದರು. ನಂತರ ಜಿಲ್ಲಾ ಘಟಕದ ಅಧ್ಯಕ್ಷರಾದಿಯಾಗಿ ಮುಖಂಡರು ಮನವೊಲಿಸಿದರು.

ನಗರದ ತುಂಬಾ ಫ್ಲೆಕ್ಸ್‌ ಹಾವಳಿ:

ನಗರಾದ್ಯಂತ ಫ್ಲೆಕ್ಸ್‌ ಹಾವಳಿ ಜೋರಾಗಿತ್ತು. ಜನಾರ್ಶೀವಾದ ಯಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು ರಸ್ತೆ ವಿಭಜಕದ ಮಧ್ಯೆ ರಾರಾಜಿಸುತ್ತಿದ್ದವು. ಸುಭಾಷ ವೃತ್ತ, ಶಾಸ್ತ್ರಿ ವೃತ್ತ, ಹೊಸ ಬಸ್‌ ನಿಲ್ದಾಣ ರಸ್ತೆ ಸೇರಿದಂತೆ ವಿವಿಧ ಕಡೆ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು.
****
ಕ್ಷಮೆಯಾಚಿಸಿದ ನಿರೂಪಕ

ಸಚಿವರ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದ ನೀಲಕಂಠರಾಯ ಎಲ್ಹೇರಿ ಮಾಧ್ಯಮಗಳ ಬಗ್ಗೆ ಇಲ್ಲದ ಸಲ್ಲದ ವಿಷಯ ಪ್ರಸ್ತಾಪಿಸಿದರು. ಅಧಿವೇಶನ ನಡೆಯದ ಕುರಿತು ಪತ್ರಿಕೆ, ಟಿವಿ ಮಾಧ್ಯಮದವರು ಸುದ್ದಿ ಬಿತ್ತರಿಸುವುದಿಲ್ಲ. ಪ್ರಧಾನಿ ಮೋದಿ ಅವರ ಅಭಿವೃದ್ಧಿ ಸುದ್ದಿಗಳನ್ನು ಪ್ರಸಾರ ಮಾಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಮಾಧ್ಯಮದವರು ಭಾಷಣದ ಮಧ್ಯೆದಲ್ಲಿಯೇ ನಿರೂಪಕರನ್ನು ತರಾಟೆಗೆ ತೆಗೆದುಕೊಂಡರು. ಪತ್ರಿಕೆ, ಟಿವಿ ನೋಡಿದರೆ ಗೊತ್ತಾಗುತ್ತದೆ. ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾರ್ಯಕ್ರಮ ಬಹಿಷ್ಕರಿಸುತ್ತೇವೆ ಎಂದರು. ನಂತರ ಕೆಳಗಿಳಿದು ಬಂದು ನಿರೂಪಕ ಸೇರಿದಂತೆ ಮುಖಂಡರು ಕ್ಷಮೆ ಕೇಳಿದ ನಂತರ ಕಾರ್ಯಕ್ರಮ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು