ಸೋಮವಾರ, ಜುಲೈ 4, 2022
23 °C

ಸುರಪುರ ನಗರಸಭೆ ಸಾಮಾನ್ಯ ಸಭೆ: ಮಳಿಗೆಗಳ ಬಾಡಿಗೆ ಹೆಚ್ಚಳದ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ನಗರಸಭೆಯ ಪ್ರತಿ ಮಳಿಗೆಗೆ ತಿಂಗಳಿಗೆ ₹6,800 ಬಾಡಿಗೆ ಮತ್ತು ₹2 ಲಕ್ಷ ಠೇವಣಿ ನಿಗದಿಪಡಿಸುವುದಕ್ಕೆ ಗುರುವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಪ್ಪಿಗೆ ನೀಡಿದರು.

ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ ಈ ಬಗ್ಗೆ ಒತ್ತಾಯಿಸಿದ್ದರು. ರಂಗಂಪೇಟೆಯ ಮಳಿಗೆಗಳಿಗೆ ಮಾಸ್ಟರ್ ಪ್ಲಾನ ನಂತರ ಬಾಡಿಗೆ ನಿಗದಿಪಡಿಸುವ ಕುರಿತು ನಿರ್ಧರಿಸಲಾಯಿತು.

ಆಡಳಿತ ಪಕ್ಷದ ಹಿರಿಯ ಸದಸ್ಯ ವೇಣುಮಾಧವ ನಾಯಕ ಮಾತನಾಡಿ, ‘ಕರ ವಸೂಲಿಗಾರರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ನಿಗದಿತ ಪ್ರಮಾಣದಲ್ಲಿ ಕರ ವಸೂಲಿ ಆಗುತ್ತಿಲ್ಲ ಇದರಿಂದ ನಗರಸಭೆಗೆ ಆದಾಯ ಬರುತ್ತಿಲ್ಲ’ ಎಂದು ಆಕ್ಷೇಪ ಎತ್ತಿದರು.

ಎಲ ಸದಸ್ಯರು ಪಕ್ಷ ಭೆದ ಮರೆತು  ಕರ ವಸೂಲಿಗಾರರನ್ನು ತರಾಟೆಗೆ ತೆಗೆದುಕೊಂಡರು. ಪೌರಾಯುಕ್ತ ಜೀವನ ಕುಮಾರ ಕಟ್ಟಿಮನಿ ಮಧ್ಯೆ ಪ್ರವೇಶಿಸಿ ಸಮಜಾಯಿಸಿ ನೀಡಿದರು. ಮಾರ್ಚ್‌ ಒಳಗೆ ಪ್ರತಿಶತ ಗುರಿ ತಲುಪುವಂತೆ ಸದಸ್ಯರು ತಾಕೀತು ಮಾಡಿದರು.

ರಂಗಂಪೇಟ-ತಿಮಾಪುರದಲ್ಲಿ ರಸ್ತೆ ವಿಸ್ತರಣೆಯಲ್ಲ್ಲಿ 46 ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಿದ್ದಿವೆ. ಅವರಿಗೆ ಮನೆ ಒದಗಿಸುವ ಕುರಿತು ನಿರ್ಣಯ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.

ವಣಿಕ್ಯಾಳ ಹತ್ತಿರದ ನಗರಸಭೆಯ ನಿವೇಶನದಲ್ಲಿ 10 ಹೆಚ್ಚುವರಿಯಾಗಿ ಕಾಯ್ದಿರಿಸಿ ಒಟ್ಟು 56 ಕುಟುಂಬಗಳಿಗೆ ಮನೆ ಒದಗಿಸಿಕೊಡುವ ಮತ್ತು ಮಾಸ್ಟರ್ ಪ್ಲಾನ್ ನಂತರ ಹಳೆ ಸಿಸಿ ತೆಗೆದು ಹೊಸದಾಗಿ ಸಿಸಿ ರಸ್ತೆ ನಿರ್ಮಾಣ ಮಾಡುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು.

‘ನಗರದ ಕೆಲ ಬಡಾವಣೆ ಮತ್ತು ತಿಮ್ಮಾಪುರದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ. ಜನರು ಕತ್ತಲಲಿ ಓಡಾಡುತ್ತಾರೆ. ವಡ್ಡರ ಕಾಲೊನಿ ಯಲ್ಲಿ ಕಿಡಿಗೇಡಿಗಳು ರಾತ್ರಿ ವೇಳೆ ಕೊಳವೆಬಾವಿ ಮೋಟರ್ ಕಳ್ಳತನ ಮಾಡಿದ್ದಾರೆ. ಇದರಿಂದ ನೀರು ಸರಬರಾಜು ನಿಂತುಹೋಗಿದೆ’ ಎಂದು ಸದಸ್ಯ ಮಲ್ಲೇಶಿ ಪೂಜಾರಿ ಮತ್ತು ಸುವರ್ಣ ಎಲಿಗಾರ ಸಭೆಯ ಗಮನಕ್ಕೆ ತಂದರು.

ಶಿಬಾರ್ ಬಂಡಿಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಂಡು ಮೂಲಸೌಲಭ್ಯ ಒದಗಿಸಲು ತೀರ್ಮಾನಿಸಲಾಯಿತು. ಪಾಳದಕೇರಿಯ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿಗೆ ₹ 9 ಲಕ್ಷ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಲಾಯಿತು.

ಅಧ್ಯಕ್ಷ ಸುಜಾತಾ ವೇಣುಗೋಪಾಲ ಜೇವರ್ಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹೇಶ ಪಾಟೀಲ, ವ್ಯವಸ್ಥಾಪಕ ಯಲ್ಲಪ್ಪ ನಾಯಕ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

***

15ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿಗಾಗಿ ₹67 ಲಕ್ಷ ಮಂಜೂರು ಆಗಿದೆ. ಪ್ರತಿ ವಾರ್ಡ್‍ನಲ್ಲಿ ಹೊಸ ಕೊಳವೆಬಾವಿ ಕೊರೆದು ಮೋಟರ್‌ ಜೋಡಿಸಿ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು.
-ಜೀವನಕುಮಾರ್ ಕಟ್ಟಿಮನಿ, ಪೌರಾಯುಕ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು