ಸೋಮವಾರ, ಮೇ 10, 2021
25 °C

ನಮ್ಮ ಊರು ನಮ್ಮ ಜಿಲ್ಲೆ: ಕೈ ಕುಸ್ತಿಯಲ್ಲಿ ಸಹೋದರರ ಮಿಂಚು

ಮಲ್ಲಿಕಾರ್ಜುನ ಬಿ.ಅರಿಕೇರಕರ್ Updated:

ಅಕ್ಷರ ಗಾತ್ರ : | |

Prajavani

ಕೂಡ್ಲೂರು(ಸೈದಾಪುರ): ಸಮೀಪದ ಕೂಡ್ಲೂರು ಗ್ರಾಮದಲ್ಲಿರುವ ನಾಗೇಂದ್ರ ನಾಯಕ ಹೊಸಮನಿ ಮತ್ತು ವೆಂಕಟರಾಯ ನಾಯಕ ಹೊಸಮನಿ ಸಹೋದರರು ಕೈಕುಸ್ತಿಯಲ್ಲಿ ಅಮೋಘ ಸಾಧನೆ ಮಾಡುತ್ತಿದ್ದಾರೆ.

ಕೈ ಕುಸ್ತಿ ಪಂದ್ಯಾಟದಲ್ಲಿ ‘ಕೂಡ್ಲೂರಿನ ಭೀಮ’ ಎಂದೇ ಪ್ರಸಿದ್ಧಿ ಪಡೆದಿರುವ ಇವರ ತಂದೆ ಭೀಮರಾಯ ನಾಯಕ ಹೊಸಮನಿ ಅವರ ಸಾಧನೆಯಿಂದ ಪ್ರೇರಣೆಗೊಂಡು ತಂದೆಯ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಕೈ ಕುಸ್ತಿ ಪಂದ್ಯಾವಳಿಯಲ್ಲಿ ಜಿಲ್ಲೆ ಹಾಗೂ ಪಕ್ಕದ ತೆಲಂಗಾಣ ರಾಜ್ಯದ ವಿವಿಧ ಗ್ರಾಮಗಳ ಜಾತ್ರೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಾ ಕೂಡ್ಲೂರಿನ ಕೀರ್ತಿ ಬೆಳಗುತ್ತಿದ್ದಾರೆ.

ಸಹೋದರರ ಸಾಧನೆ: ಕೂಡ್ಲೂರಿನ ಅಣ್ಣ ತಮ್ಮಂದಿರಿಬ್ಬರು ಸುಮಾರು ಹತ್ತು ವರ್ಷಗಳಿಂದ ಸೈದಾಪುರ ಸುತ್ತಮುತ್ತಲಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಜಾತ್ರೆ ವೇಳೆ ನಡೆಯುವ ಹೊನಲು ಬೆಳಕಿನ ಪಂದ್ಯಾಟದಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದು ತಂದಿದ್ದಾರೆ. ಅಣ್ಣ ನಾಗೇಂದ್ರ ನಾಯಕ ಹೊಸಮನಿ ಅವರು 80 ಕಲ್ಲುಬೆಳ್ಳಿ ಕಡಗ, 50 ಬೆಳ್ಳಿ ಕಡಗ, 30 ಬೆಳ್ಳಿ ಉಂಗುರು, 3 ಮೊಬೈಲ್ ಫೋನ್‍ಗಳನ್ನು ಗೆದ್ದಿದ್ದಾರೆ.

ತಮ್ಮ ವೆಂಕಟರಾಯ ನಾಯಕ ಹೊಸಮನಿ ಅವರು ಐದು ಜನರನ್ನು ಗೆದ್ದರೆ ಹಾಕುವ 5 ತೊಲೆ ಕಲ್ಲುಬೆಳ್ಳಿ ಕಡಗ 09, ನಾಲ್ಕು ಜನರನ್ನು ಗೆದ್ದರೆ ಹಾಕುವ ಬೆಳ್ಳಿ ಕಡಗ 08, ಮೂರು ಜನರನ್ನು ಗೆದ್ದರೆ ಹಾಕುವ ಬೆಳ್ಳಿ ಉಂಗುರ 20 ಹಾಗೂ 06 ಮೊಬೈಲ್ ಫೋನ್‍ಗಳನ್ನು ಗೆದ್ದಿದ್ದಾರೆ.

ಕೈ ಕುಸ್ತಿಗೆ ದೇಹ ಅಣಿಗೊಳಿಸಲು ಸೇವಿಸಬೇಕಾದ ಆಹಾರ ಪದಾರ್ಥ: ಕುಸ್ತಿ ಮಾಡುವವರಿಗೆ ದೇಹಕ್ಕೆ ಪೌಷ್ಟಿಕ ಆಹಾರ ಅತೀ ಮುಖ್ಯ. ಹಾಲು, ಬಾದಾಮಿ, ಗೋಡಂಬಿ, ಕೊಬ್ಬರಿ, ಬೆಲ್ಲ, ಹಣ್ಣು, ಬೆಣ್ಣೆ, ಮಾಂಸ, ಮೊಟ್ಟೆ, ಮೀನು ಮುಂತಾದವುಗಳನ್ನು ಸರಿಯಾಗಿ ಸೇವಿಸಬೇಕು. ಇದರಿಂದ ಶಕ್ತಿ ಬರುತ್ತದೆ. ಎದುರಾಳಿಗಳನ್ನು ಸುಲಭವಾಗಿ ಸೋಲಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ವೆಂಕಟರಾಯ ನಾಯಕ ಹೊಸಮನಿ ಕೂಡ್ಲೂರು.

***

ನಮ್ಮ ಈ ಸಾಧನೆಗೆ ನಮ್ಮ ತಂದೆಯೇ ಪ್ರೇರಣೆ. ಅವರು ಹಿಂದೆ ಕೈ ಕುಸ್ತಿಯಲ್ಲಿ ಗೆದ್ದ ಬಹುಮಾನಗಳನ್ನು ನೋಡಿಯೇ ನಾವು ಅವರ ಮಾರ್ಗದರ್ಶನದಲ್ಲಿ ಇಂದು ಸಾಗುತ್ತಿದ್ದೇವೆ.
-ವೆಂಕಟರಾಯ ನಾಯಕ ಹೊಸಮನಿ, ಕೈ ಕುಸ್ತಿಪಟು

***

ಕೈ ಕುಸ್ತಿ ಆಟದಲ್ಲಿ ನನ್ನಂತೆಯೇ ನನ್ನ ಮಕ್ಕಳು ತೋರುತ್ತಿರುವ ಸಾಧನೆ ಕಂಡು ನನಗೆ ಬಹಳ ಹೆಮ್ಮೆ ಎನಿಸುತ್ತಿದೆ. ಮಕ್ಕಳು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ.
-ಭೀಮರಾಯ ನಾಯಕ ಹೊಸಮನಿ, ಕೂಡ್ಲೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು