ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಸಗರನಾಡಿನ ಸಾಂಸ್ಕೃತಿಕ ರಾಯಭಾರಿ

ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಇನ್ನಿಲ್ಲ
Last Updated 27 ಜುಲೈ 2020, 16:41 IST
ಅಕ್ಷರ ಗಾತ್ರ

ಸುರಪುರ: ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಎಂದೇ ಸುಪರಿಚಿತರಾಗಿದ್ದ ಮಾಜಿ ಸಚಿವ ರಾಜಾ ಮದನಗೋಪಾಲನಾಯಕ (70) ಸೋಮವಾರ ನಿಧನರಾದರು.

ಆಗಸ್ಟ್ 22, 1951ರಂದು ಜನಿಸಿದ್ದ ನಾಯಕ ಅವರು 1983, 1985, 1989ರಲ್ಲಿ ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 1992ರಲ್ಲಿ ವೀರಪ್ಪ ಮೊಯಿಲಿ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ, ಸಣ್ಣ ಉಳಿತಾಯ, ಕರ್ನಾಟಕ ರಾಜ್ಯ ಲಾಟರಿ ಸಚಿವರಾಗಿದ್ದರು. 1994 ರಲ್ಲಿ ಕಾಂಗ್ರೆಸ್ ಪಕ್ಷದಿಂದ, 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಜಿತರಾದರು. 2004ರಲ್ಲಿ ಜೆಡಿಎಸ್ ಪಕ್ಷದಿಂದ ರಾಯಚೂರು ಲೋಕಸಭೆಗೆ ಸ್ಪರ್ಧಿಸಿ 409 ಮತಗಳಿಂದ ಸೋಲು ಅನುಭವಿಸಿದರು. 2014ರಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲುಂಡರು.

ಸಚಿವರಿದ್ದಾಗ ನಗರದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದರು. ಲಾಟರಿ ಡ್ರಾವನ್ನು ಸುರಪುರದಲ್ಲಿ ನಡೆಸಿದ್ದರು. ಕಾಲೇಜು ದಿನಗಳಲ್ಲಿ ಮುಂದಾಳತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ಸುರಪುರ ಪ್ರಭು ಕಾಲೇಜಿನಲ್ಲಿ ಪದವಿ ಪೂರೈಸಿದ್ದ ಅವರು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿದ್ದರು. ಎಪಿಎಂಸಿ ಮಂಜೂರು, ಪದವಿ ಕಾಲೇಜು ಮಂಜೂರಾತಿ, ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಿದ್ದು, 20 ಪ್ರೌಢಶಾಲೆ, ಮೂರು ಕಾಲೇಜು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.

20 ವರ್ಷದಿಂದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಮತ್ತು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಮಹಾಕವಿ ಲಕ್ಷ್ಮೀಶ ವಾಚನ ಸಂಘ ಸ್ಥಾಪಿಸಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸುರಪುರದಲ್ಲಿಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದರು.

ಸಗರನಾಡಿನಲ್ಲಿ ಯಾವುದೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆದರೆ ಅಲ್ಲಿ ರಾಜಾ ಮದನಗೋಪಾಲನಾಯಕರ ನೇತೃತ್ವ ಇರುತ್ತಿತ್ತು. ಇಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಗರುಡಾದ್ರಿ ಕಲಾ ಮಂದಿರ ಕಟ್ಟಿಸಿದ್ದರು. 1980ರ ಲೋಕಸಭಾ ಚುನಾವಣೆಯಲ್ಲಿ ಬಿ.ವಿ. ದೇಸಾಯಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಸುರಪುರ ವಿಧಾನನಸಭಾ ಕ್ಷೇತ್ರದಲ್ಲಿ ಅವರ ಪ್ರಚಾರಕ್ಕೆ ಯಾರೂ ಇರಲಿಲ್ಲ. ಆ ಸಮಯದಲ್ಲಿ ರಾಜಾ ಮದನಗೋಪಾಲನಾಯಕ ದೇಸಾಯಿ ಬೆಂಬಲಕ್ಕೆ ನಿಂತು ಅವರ ವಿಜಯಕ್ಕೆ ಕಾರಣರಾದರು. ಬಿ.ವಿ. ದೇಸಾಯಿ ಅವರು 1983 ರಲ್ಲಿ ರಾಜಾ ಮದನಗೋಪಾಲನಾಯಕ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ನೆರವಾದರು. ಉತ್ತಮ ಕ್ರೀಡಾ ಪಟುವಾಗಿದ್ದ ರಾಜಾ ಮದನಗೋಪಾಲನಾಯಕ ಕ್ರೀಡೆಗೂ ಸಾಕಷ್ಟು ಉತ್ತೇಜನ ನೀಡಿದ್ದಾರೆ. ರಾಜಾ ಮದನಗೋಪಾಲನಾಯಕ ಅವರ ನಿಧನದಿಂದ ಸಗರನಾಡಿನ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಾಜಕೀಯ ಕ್ಷೇತ್ರ ಬಡವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT