ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋರನಹಳ್ಳಿಗೆ ಪಟ್ಟಣ ಪಂಚಾಯಿತಿ: ಶಾಸಕರ ಭರವಸೆ

ದೋರನಹಳ್ಳಿ ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ಆದ್ಯತೆ; ಶಾಸಕ ಮುದ್ನಾಳ
Last Updated 13 ಆಗಸ್ಟ್ 2022, 2:57 IST
ಅಕ್ಷರ ಗಾತ್ರ

ಯಾದಗಿರಿ: ದೋರನಹಳ್ಳಿಯನ್ನು ಪಟ್ಟಣ ಪಂಚಾಯಿತಿ ಮಾಡಬೇಕೆಂದು ಮನವಿ ಮಾಡಿದ್ದೀರಿ. ನಾನು ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಭರವಸೆ ನೀಡಿದರು.

ಯಾದಗಿರಿ ಮತಕ್ಷೇತ್ರದ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ₹60 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಕಂದಾಯ ಇಲಾಖೆಯ ನಾಡ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಗ್ರಾಮದಲ್ಲಿ ಅಂದಾಜು ₹13 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೆಲದಿನಗಳ ಹಿಂದೆ ವಡಗೇರಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜನೆಗೆ ಬದಲಾವಣೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ್ದೇನೆ. ನನ್ನ ಮತಕ್ಷೇತ್ರದಲ್ಲಿಯೇ ದೋರನಹಳ್ಳಿ ಗ್ರಾಮ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಕಾರಣ ಜನರ ಬೇಡಿಕೆಯಂತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡು ಬದಲಾವಣೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಬರುವ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಮೆಡಿಕಲ್ ಕಾಲೇಜ ಆರಂಭವಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಮತಕ್ಷೇತ್ರದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗಲಿದೆ. ಕೇಂದ್ರ ಸರ್ಕಾರ ಯಾದಗಿರಿ ಜಿಲ್ಲೆಯನ್ನು ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಪರಿಗಣಿಸಿ ತೆಗೆದು ಕೊಂಡಿರುವುದರಿಂದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಅನುದಾನ ನೀಡಿದೆ ಎಂದು ತಿಳಿಸಿದರು.

ನಾಡ ಕಚೇರಿ ಕಟ್ಟಡ ಕಾಮಗಾರಿಗಳನ್ನು ಅಧಿಕಾರಿಗಳು ಗುಣಮಟ್ಟದಿಂದ ಕೈಗೊಳ್ಳಬೇಕು. ಜೊತೆಗೆ ನಿಗದಿತ ಅವಧಿಯೊಳಗೆ ಮುಗಿಸಬೇಕು. ಇದಕ್ಕೆ ಗ್ರಾಮಸ್ಥರು ಅಗತ್ಯ ಸಹಕಾರ ನೀಡಬೇಕೆಂದು ಸೂಚಿಸಿದರು.

ಶಹಾಪುರ ತಹಶೀಲ್ದಾರ್‌ ಮಧುರಾಜ ಕೂಡ್ಲಿಗಿ ಮಾತನಾಡಿ, ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸೂಕ್ತ ಕಟ್ಟಡ ಕೊರತೆ ಇತ್ತು. 2022-23ನೇ ಸಾಲಿನ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ ನಾಡಕಚೇರಿ ನಿರ್ಮಾಣಕ್ಕೆ ₹19 ಲಕ್ಷ ಅನುದಾನ ನೀಡಲಾಗಿದೆ. ಉಳಿದ ಅನುದಾನವನ್ನು ಶಾಸಕರು ನೀಡಿರುವುದರಿಂದ ಹೊಸ ಸುಸಜ್ಜಿತ ಕಟ್ಟಡ ಸಿಬ್ಬಂದಿಗೆ ಕೆಲಸ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷತೆ ನಿಂಗಮ್ಮ ಶಹಾಪುರ, ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ಕಿರಣಕುಮಾರ, ಯಾದಗಿರಿ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ರುದ್ರಗೌಡ ಪಾಟೀಲ ಇದ್ದರು. ನಾಗೇಶ ಸ್ವಾಗತಿಸಿದರೆ, ವೆಂಕಣ್ಣ ವಂದಿಸಿದರು.

ಇದೇ ವೇಳೆ ಶಾಸಕರು ಸಾರ್ವಜನಿಕರಿಗೆ ಅಮೃತ ಸ್ವಾತಂತ್ರ ಮಹೋತ್ಸವ ಅಂಗವಾಗಿ ರಾಷ್ಟ್ರ ಧ್ವಜಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT