ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ– ಈದ್‌ ಉಲ್‌ ಫಿತ್ರ್‌: ಹಿಂದೂ–ಮುಸ್ಲಿಂ ಭಾವೈಕ್ಯದ ಹಬ್ಬಗಳು

Published 8 ಏಪ್ರಿಲ್ 2024, 6:26 IST
Last Updated 8 ಏಪ್ರಿಲ್ 2024, 6:26 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯು ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿದೆ. ಈ ಬಾರಿ ಯುಗಾದಿ, ಈದ್‌ ಉಲ್‌ ಫಿತ್ರ್‌(ರಂಜಾನ್‌) ಹಬ್ಬ ಒಟ್ಟೊಟ್ಟಿಗೆ ಬಂದಿವೆ. ಏಪ್ರಿಲ್‌ 9ರಂದು ಚಂದ್ರಮಾನ ಯುಗಾದಿ, ಏ. 10ರಂದು ರಂಜಾನ್‌ ಆಚರಣೆ ನಡೆಯಲಿದೆ. ಆದರೆ, ಚಂದ್ರ ದರ್ಶನವಾದ ನಂತರ ಮುಸ್ಲಿಮರು ಹಬ್ಬ ಆಚರಿಸುತ್ತಾರೆ.

ಜಿಲ್ಲೆಯೂ ಧಾರ್ಮಿಕ ಸಹಿಷ್ಣುತೆಗೆ ಹೆಸರುವಾಸಿಯಾಗಿವೆ. ಹಿಂದೂ ಮುಸ್ಲಿಂ ಭಾವೈಕ್ಯದ ಹಲವಾರು ದೇವಾಲಯ, ದರ್ಗಾಗಳಿವೆ. ಹಿಂದೂಗಳು ಯುಗಾದಿ ಹಬ್ಬದಂದು ಬೇವು–ಬೆಲ್ಲ ತಯಾರಿಸಿ, ಮುಸ್ಲಿಮರನ್ನು ಮನೆಗೆ ಕರೆದು ಒಟ್ಟಾಗಿ ಪರಸ್ಪರ ಬೇವು ಸ್ವೀಕರಿಸಿ ಹಬ್ಬದ ಶುಭಾಶಯಗಳು ಕೋರುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗುತ್ತಾರೆ.

ಭಾವೈಕ್ಯತೆ ತಾಣವಾಗಿರುವ ತಿಂಥಣಿ ಮೌನೇಶ್ವರ ದೇವಸ್ಥಾನ, ಕೊಡೇಕಲ್ಲ ಕಾಲಜ್ಞಾನಿ ಬಸವೇಶ್ವರ ಸೇರಿದಂತೆ ವಿವಿಧೆಡೆ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. 

15ನೇ ಶತಮಾನದಲ್ಲಿ ಆಗಿ ಹೋದ ಮಹಾನ್‌ ಸಂತರಲ್ಲಿ ಕೊಡೇಕಲ್ಲ ಬಸವೇಶ್ವರರು ಅಗ್ರಗಣ್ಯರು. ‘ಒಂದೇ ಹಾಸಿಗೆ ಪೃಥ್ವಿ ಸಕಲಕೆ, ಒಂದೇ ಹೊದಿಕೆ ಆಕಾಶ ಮೇಲಕೆ, ಒಂದೇ ಜಲ ಮೇಘದಲಿ, ವಾಯು ಒಂದೇ, ಒಂದೇ ವಡಬಾಗ್ನಿ ಆಹುತಿ ಒಂದರೊಳು, ನೂರೊಂದು ಮಾಡುವ ಸಂದೇಹಿಗಳು, ನಮ್ಮ ನೆತ್ತರ ಬಲ್ಲರೇನಯ್ಯ ಬಸವ ಕೇಳೆಂದ’ ಎಂದು ಅವರು ತಮ್ಮ ವಚನಗಳಲ್ಲಿ ಸಾರಿದ್ದಾರೆ.

ಜಾತಿ, ಮತ, ಪಂಥಗಳ ಎಲ್ಲೆ ಮೀರಿದ ಸಮಾಜವಿದ್ದರೇ ಒಳ್ಳೆಯದು ಎಂಬ ಸಂದೇಶ ನೀಡಿದ್ದಾರೆ. ಅವರು ಅದರಂತೆಯೇ ನಡೆದುಕೊಂಡಿದ್ದಾರೆ. ಕೊಡೇಕಲ್ಲ ಬಸವೇಶ್ವರರು ಚರ‍್ಮಾಂಭರ ಧರಿಸಿ, ಒಂದು ಕಾಲಲ್ಲಿ ಕಂಸಿ(ಮುಸ್ಲಿಮರು ಧರಿಸುವ ಪಾದರಕ್ಷೆ), ಒಂದು ಕಾಲಲ್ಲಿ (ರಕ್ಷೆ) ಪಾದರಕ್ಷೆ ಧರಿಸಿ ಅಶ್ವರೂಢರಾಗಿದ್ದು, ಒಂದು ಕೈಯಲಿ ಹಂಡಿ ಹಿಡಿದಿದ್ದು ಕಾಲಜ್ಞಾನದ ಸಮಾನತೆಯ ತತ್ವ ಬೋಧಿಸಿದ್ದಾರೆ. 

ಅದರ ಪ್ರತೀಕವಾಗಿ ಕೊಡೇಕಲ್ಲ ಬಸವೇಶ್ವರ ಜಾತ್ರೆಯಲ್ಲಿ ಮುಸ್ಲಿಮರು, ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ಇಲ್ಲಿ ದೂಳ್ ಗಾಯಿ ಒಡೆಯಲಾಗುತ್ತದೆ. ದೇವಸ್ಥಾನದ ಒಳಗೆ ಹಿಂದೂ ವಾಸ್ತು ವಿನ್ಯಾಸ, ಹೊರಗೆ ದರ್ಗಾ ಮಿಶ್ರ ಶೈಲಿಯಲ್ಲಿನ ಕಟ್ಟಡ, ಹಸಿರು ಧ್ವಜ ಮುಂತಾದವು ಸಮಾನತೆಯ ಕುರುಹುಗಳು. ಓಂ ಏಕಲಾಕ ಐಂಸಿ ಹಜಾರ ಪಾಚೋಪೀರ್ ಮೌನೋದ್ದೀನ್ ಕಾಶಿಪತಿ ಗಂಗಾಧರ ಹರಹರ ಮಹಾದೇವ ಸರ್ವಧರ್ಮ ಸಮನ್ವಯತೆಯ ಈ ಶ್ಲೋಕ ಮೌನೇಶ್ವರರ ಮೂಲಮಂತ್ರ.

ಪೂರಕ ವರದಿ: ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ

ಸುರಪುರದ ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿರುವ ಮೌನೇಶ್ವರ ದೇವಸ್ಥಾನ
ಸುರಪುರದ ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿರುವ ಮೌನೇಶ್ವರ ದೇವಸ್ಥಾನ
ಹುಣಸಗಿ ತಾಲ್ಲೂಕಿನ ಭಾವೈಕ್ಯತೆಯ ತಾಣ ಕೊಡೇಕಲ್ಲ ಗ್ರಾಮದ ಕಾಲಜ್ಞಾನಿ ಬಸವೇಶ್ವರ ಜಾತ್ರೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಕುರಾನ್ ಪಠಣ ಸಲ್ಲಿಸುವ ಸಂಗ್ರಹ ಚಿತ್ರ
ಹುಣಸಗಿ ತಾಲ್ಲೂಕಿನ ಭಾವೈಕ್ಯತೆಯ ತಾಣ ಕೊಡೇಕಲ್ಲ ಗ್ರಾಮದ ಕಾಲಜ್ಞಾನಿ ಬಸವೇಶ್ವರ ಜಾತ್ರೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಕುರಾನ್ ಪಠಣ ಸಲ್ಲಿಸುವ ಸಂಗ್ರಹ ಚಿತ್ರ
ವಿಶಿಷ್ಟವಾಗಿ ಆಚರಣೆ
ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೊಡೇಕಲ್ಲ ನಾರಾಯಣಪುರ ಮಾಳನೂರು ರಾಜನಕೋಳೂರ ವಜ್ಜಲ್ ಸೇರಿದಂತೆ ಇತರ ಗ್ರಾಮಗಳಲ್ಲಿ ರಂಜಾನ್ ಹಾಗೂ ಯುಗಾದಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ರಂಜಾನ್ ದಿನ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ ಬಳಿಕ ತಮ್ಮ ಮನೆಯಲ್ಲಿ ಸಿಹಿಯಾದ(ಹಾಲಿನ ಖಾದ್ಯ) ಸುರಕುಂಬ ತಯಾರಿಸಿ ಎಲ್ಲರನ್ನೂ ಕರೆದು ಈ ಖಾದ್ಯವನ್ನು ನೀಡುತ್ತಾ ಪರಸ್ಪರ ಹಬ್ಬದ ಶುಭಾಶಯಗಳು ಕೋರಲಾಗುತ್ತದೆ. ಕೊಡೇಕಲ್ಲ ಗ್ರಾಮದಲ್ಲಿ ಭಾವೈಕ್ಯತೆ ಕೇಂದ್ರವಾಗಿರುವ ಕೊಡೇಕಲ್ಲ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನದಲ್ಲಿ ಪರಿಶಿಷ್ಟ ಜನರು ಕೃಷ್ಣಾ ನದಿಗೆ ತೆರಳಿ ಅಲ್ಲಿಂದ ತರುವ ಕೃಷ್ಣೆ ಗಂಗಾಜಲದಿಂದನ್ನು ಗಂಧವನ್ನು ತೇಯಲಾಗುತ್ತದೆ. ಬಳಿಕ ಗದ್ದುಗೆಗೆ ಈ ಗಂಧ ಅರ್ಪಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ.
ಸುರಪುರ: ಪಟ್ಟದಗತ್ತಿಯ ಮೆರವಣಿಗೆ
ಸುರಪುರ: ಇಲ್ಲಿನ ಗೋಸಲ ಅರಸರು ಭಾವೈಕ್ಯತೆಯ ಹರಿಕಾರರಾಗಿದ್ದರು ಎಂಬುದಕ್ಕೆ ರಂಜಾನ್‌ ಮತ್ತು ಬಕ್ರೀದ್ ಹಬ್ಬಗಳಂದು ಪಟ್ಟದಗತ್ತಿಯ ಮೆರವಣಿಗೆ ನಡೆಯುತ್ತಿರುವುದು ಸಾಕ್ಷಿಯಾಗಿದೆ. ಮೂರನೇ ದೊರೆ ರಾಜಾ ಪಿತಾಂಬರ ಬಹಿರಿ ಪಿಡ್ಡನಾಯಕ (1687-1727) ಆಳುತ್ತಿದ್ದ ಕಾಲ. ಮುಸ್ಲಿಮರು ರಾಜನ ಹತ್ತಿರ ತೆರಳಿ ರಂಜಾನ್ ದಿನ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸುತ್ತಾರೆ. ಆಡಳಿತ ರಕ್ಷಣೆ ಸಾಮ್ರಾಜ್ಯ ವಿಸ್ತರಣೆ ಅಭಿವೃದ್ಧಿ ಕಾರ್ಯಗಳಲ್ಲಿ ನಿರತನಾಗಿದ್ದ ಅರಸ ತನಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ನನ್ನ ಪಟ್ಟದಗತ್ತಿಯನ್ನು ನಿಮಗೆ ನೀಡುತ್ತೇನೆ. ಈದ್ಗಾದಲ್ಲಿ ಅದನ್ನು ಇಟ್ಟು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತೆ ತಿಳಿಸುತ್ತಾನೆ. ಇದಕ್ಕಾಗಿ ಜಹಗೀರುಗಳನ್ನು ನೀಡುತ್ತಾನೆ. ಈ ಕಾರ್ಯದ ಸಂಪ್ರದಾಯವನ್ನು ನಿರಂತರವಾಗಿ ನಡೆಸಲು ಸಾಹೇಬ ಮನೆತನವೊಂದನ್ನು ಗೊತ್ತು ಮಾಡಲಾಗುತ್ತದೆ. ರಾಜನು ನೀಡಿದ ಕತ್ತಿಯನ್ನು ರೇಷ್ಮೆ ವಸ್ತ್ರದಲ್ಲಿ ಸುತ್ತಿ ನಿಯುಕ್ತಿಗೊಳಿಸಿದ ವ್ಯಕ್ತಿಯ ಮನೆಯಲ್ಲಿ ಜತನವಾಗಿ ಇಡಲಾಗುತ್ತದೆ. ರಂಜಾನ್ ಮತ್ತು ಬಕ್ರೀದ್ ಸಾಮೂಹಿಕ ಪ್ರಾರ್ಥನೆಯ ದಿನ ಪಟ್ಟದಗತ್ತಿಗೆ ಪೂಜೆ ಸಲ್ಲಿಸಿ ಅದನ್ನು ಪಲ್ಲಕ್ಕಿಯಲ್ಲಿ ಇಟ್ಟು ನಿರ್ದಿಷ್ಟ ಧಿರಿಸು ಧರಿಸಿ ಸಾಹೇಬ ಶಹೆನಾಯಿ ಬಾಜೆಯೊಂದಿಗೆ ಮೆರವಣಿಗೆಯಲ್ಲಿ ಈದ್ಗಾಕ್ಕೆ ತರುತ್ತಾರೆ. ಅಲ್ಲಿ ಪಟ್ಟದಗತ್ತಿಯನ್ನು ಇಟ್ಟು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಅರಸ ಪಟ್ಟದಗತ್ತಿಯ ರೂಪದಲ್ಲಿ ತಮ್ಮ ಜೊತೆಗೆ ಭಾಗವಹಿಸುತ್ತಾರೆ ಎಂಬ ಭಾವನೆ ಇದೆ. ಸಾಮೂಹಿಕ ಪ್ರಾರ್ಥನೆ ಮುಗಿದ ಬಳಿಕ ಮತ್ತೆ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಸಾಹೇಬ ತಮ್ಮ ಮನೆಗೆ ತೆರಳಿ ಪಟ್ಟದಗತ್ತಿಯಲ್ಲಿ ರೇಷ್ಮೆ ವಸ್ತ್ರದಲ್ಲಿ ಸುತ್ತಿ ಜತನವಾಗಿ ಇಡುತ್ತಾರೆ. ಪಲ್ಲಕ್ಕಿಯಲ್ಲಿ ಹೋಗುವುದರಿಂದ ಈ ಸಂಪ್ರದಾಯ ನಡೆಸುವವರಿಗೆ ‘ಪಾಲ್ಕಿ ಸಾಹೇಬ’ ಎಂಬ ಹೆಸರು ಬಂದಿದೆ. ಈ ಸಂಪ್ರದಾಯ ಕಳೆದ ಮೂರು ದಶಕಗಳಿಂದ ಚಾಚೂ ತಪ್ಪದೇ ನಡೆಯುತ್ತಿದೆ. ಪ್ರಾರ್ಥನೆಯ ನಂತರ ಅರಮನೆಗೆ ತೆರಳಿ ರಾಜರಿಗೆ ಶುಭಾಶಯ ಹೇಳುವ ಪದ್ಧತಿ ಪಾಲಿಸಲಾಗುತ್ತದೆ. ಈಗ ಸಂಪ್ರದಾಯವನ್ನು ಪಾಲಿಸುತ್ತಿರುವ ಸೈಯದ್ ಅಹ್ಮದ್ ಪಾಶಾ ಖಾದ್ರಿ 13ನೇ ತಲೆಮಾರಿನವರು.
ಯುಗಾದಿಯಂದು ಮೊಲದ ಬೇಟೆ
ಜಿಲ್ಲೆಯಲ್ಲಿ ಯುಗಾದಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಯುಗಾದಿ ದಿನ ಅರಣ್ಯಕ್ಕೆ ತೆರಳಿ ಮೊಲದ ಬೇಟೆಯಾಡುವುದು ಸಾಮಾನ್ಯವಾಗಿತ್ತು. ಬೇಟೆಯಾಡಿದ ಮೊಲಗಳನ್ನು ಕೋಲಿಗೆ ಕಟ್ಟಿ ಹಲಗೆಯೊಂದಿಗೆ ಮೆರವಣಿಗೆಯಲ್ಲಿ ತಂದು ಬಡಾವಣೆಯ ಜನಕ್ಕೆ ಊಟ ಹಾಕುವುದು ಸಂಭ್ರಮವಾಗಿತ್ತು. ಕಟ್ಟುನಿಟ್ಟಿನ ಕಾನೂನು ಕ್ರಮಗಳಿಂದ ಈಗ ಇದು ನಿಂತಿದೆ. ಕೆಲ ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬದಂದು ಹೋಳಿ ಆಡುವುದು ವಾಡಿಕೆ. ಪಣಿ ಚೆಂಡು: ಎರಡು ಕಲ್ಲುಗಳ ಮಧ್ಯ ಕಟ್ಟಿಗೆಯ ಉದ್ದನೆಯ ಕೋಲು ಇಡಲಾಗುತ್ತಿತ್ತು. ಎರಡು ತಂಡಗಳನ್ನು ರಚಿಸಲಾಗುತ್ತದೆ. ನಿರ್ದಿಷ್ಟ ದೂರದಿಂದ ಚೆಂಡನ್ನು ಕೋಲಿಗೆ ಹೊಡೆಯಬೇಕು. ಕೋಲು ಬಿದ್ದರೆ ಎದುರಾಳಿ ತಂಡದ ಒಬ್ಬ ಆಟಗಾರ ಔಟ್. ಕೋಲಿಗೆ ಬಡಿಯದೆ ಪುಟಿದ ಚೆಂಡನ್ನು ಎದುರಾಳಿ ತಂಡದ ಆಟಗಾರ ಕ್ಯಾಚ್ ಹಿಡಿದರೆ ಚೆಂಡು ಎಸೆದ ಆಟಗಾರ ಔಟ್. ದೊಡ್ಡವರು ಚಿಕ್ಕವರು ಯುವಕರು ಈ ಆಟವನ್ನು ಆಡಿ ಸಂಭ್ರಮಿಸುತ್ತಿದ್ದರು. ಹಲಗೆ ಬಾರಿಸಿ ಮಜ ತೆಗೆದುಕೊಳ್ಳುತ್ತಿದ್ದರು. ಬಾಜಿಯೂ ನಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT