ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಗೊಳಿಸಿ ಸೆರೆ ಹಿಡಿಯುವ ಯತ್ನ ವಿಫಲ: ಸಣ್ಣಹಳ್ಳದಲ್ಲಿ ಮೊಸಳೆ ಸಾವು

Last Updated 20 ಜೂನ್ 2021, 1:27 IST
ಅಕ್ಷರ ಗಾತ್ರ

ಯಕ್ಷಿಂತಿ(ಶಹಾಪುರ/ವಡಗೇರಾ): ತಾಲ್ಲೂಕಿನ ಯಕ್ಷಿಂತಿ ಗ್ರಾಮದ ಸಣ್ಣ ಹಳ್ಳದಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿದೆ. ಶನಿವಾರ ಹಳ್ಳದ ಕಡೆ ಹೋದವರು ಮೊಸಳೆಯನ್ನು ಕಂಡು ಕಲ್ಲು ಎತ್ತಿ ಹಾಕಿರುವ ಕಾರಣ ಮೊಸಳೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಹಳ್ಳದಲ್ಲಿ ಮೊಸಳೆ ನೋಡಿ ಮಹಿಳೆಯರು ಚೀರಾಡುತ್ತಾ ಓಡಿ ಬಂದಿದ್ದಾರೆ. ಅದೇ ವೇಳೆಗೆ ದ್ವಿಚಕ್ರ ವಾಹನದಲ್ಲಿ ಬೇರೆ ಊರಿಗೆ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳು ಗಾಬರಿಗೊಂಡ ಮಹಿಳೆಯರನ್ನು ವಿಚಾರಿಸಿದಾಗ ಮೊಸಳೆ ಇರುವುದನ್ನು ತಿಳಿಸಿದ್ದಾರೆ.

ಮೊಸಳೆ ಪೊದೆಯೊಳಗೆ ಹೋಗುತ್ತಿದ್ದಂತೆ ಅಲ್ಲಿಯೇ ಇದ್ದ ಕಲ್ಲುಗಳನ್ನು ಎತ್ತಿ ಹಾಕಿ ಗಾಯಗೊಳಿಸಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಆದರೆ ಕಲ್ಲಿನ ಹೊಡೆತಕ್ಕೆ ಮೊಸಳೆ ಸಾವನ್ನಪ್ಪಿರಬಹುದು ಎಂದು ಗ್ರಾಮದ ನಿಂಗಣ್ಣ ಕರಡಿ ಶಂಕೆ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಪಶು ವೈದ್ಯಾಧಿಕಾರಿ ಮೊಸಳೆಯ ಪಂಚನಾಮೆ ನಡೆಸಿದ್ದಾರೆ. ಮೊಸಳೆ ಯಾವ ರೀತಿ ಸತ್ತಿರಬಹುದು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ ಎಂದು ಶಹಾಪುರ ಉಪ ಅರಣ್ಯವಲಯ ಅಧಿಕಾರಿ ಐ.ಬಿ.ಹೂಗಾರ
ತಿಳಿಸಿದ್ದಾರೆ.

ಜನರಲ್ಲಿ ಆತಂಕ: ಮೊಸಳೆ ಸಾವನ್ನಪ್ಪಿದರೂ ಜನರು ಹಳ್ಳದ ಕಡೆ ಹೋಗಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಣ್ಣಹಳ್ಳ ಪೂರ್ಣ ಪರಿಶೀಲನೆ ನಡೆಸಬೇಕಿದೆ. ಜನರಲ್ಲಿ ಮನೆ ಮಾಡಿದ ಆತಂಕವನ್ನು ಹೋಗಲಾಡಿಸುವ ಅಗತ್ಯವಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬಾರದ ಪರಿಹಾರ: ಯಕ್ಷಿಂತಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಎರಡು ತಿಂಗಳ ಹಿಂದೆ ಮೊಸಳೆಗೆ ಬಲಿಯಾಗಿದ್ದ ಶಾರದಹಳ್ಳಿಯ ಗ್ರಾಮದ ಹಣಮಂತ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ₹ 5ಲಕ್ಷ ಪರಿಹಾರ ಇಂದಿಗೂ ಬಂದಿಲ್ಲ. ಕಡು ಬಡತನದಲ್ಲಿ ಇರುವ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮತ್ತೊಮ್ಮೆ ಮೇಲಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

***

ನಾಮಫಲಕ ಅಳವಡಿಸಲು ಒತ್ತಾಯ

ಯಕ್ಷಿಂತಿ ಗ್ರಾಮದ ಬಳಿ ಕೃಷ್ಣಾ ನದಿಯಿಂದ ನಿರಂತರ ಮರಳು ಸಾಗಣೆಯಿಂದ ದೊಡ್ಡದಾದ ಕಂದಕ(ಗುಂಡಿ) ಬಿದ್ದಿವೆ. ಅಲ್ಲದೆ ಹಳ್ಳದ ಮರಳು ಸಾಗಣೆಯಿಂದಲೂ ಕಂದಕ ನಿರ್ಮಾಣವಾಗಿವೆ. ಇದರಿಂದ ಮೊಸಳೆ ವಾಸಿಸಲು ಅನುಕೂಲವಾಗಿದೆ. ಮೊಸಳೆಯು ಆಹಾರ ಅರಸಿ ಹಳ್ಳದ ದಂಡೆಗೆ ಬಂದಿರಬಹುದು. ಎರಡು ತಿಂಗಳ ಹಿಂದೆ ಮೊಸಳೆಗೆ ವ್ಯಕ್ತಿ ಬಲಿಯಾಗಿದ್ದರು. ಆಗ ನದಿ ಹಾಗೂ ಹಳ್ಳದ ಪಕ್ಕದಲ್ಲಿ ‘ಮೊಸಳೆ ಇವೆ’ ಎಂಬ ಎಚ್ಚರಿಕೆಯ ನಾಮಫಲಕ ಅಳವಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೆವು ಇಂದಿಗೂ ಅಳವಡಿಸಿಲ್ಲ ಎನ್ನುತ್ತಾರೆ ಗ್ರಾಮದ ನಿವಾಸಿ ಜೆ.ಬಿ.ಬಸರಡ್ಡಿ.

‌ಅರಣ್ಯ ಇಲಾಖೆಯಿಂದ ಗೂಗಲ್, ಬಂದಳ್ಳಿ, ಜೋಳದಡಗಿ, ಕೋಡಾಲ್ ಮುಂತಾದ ನದಿ ಪಾತ್ರದ ದಂಡೆಯ ಬಳಿ ನಾಮಫಲಕ ಅಳವಡಿಸಲಾಗಿದೆ. ಯಕ್ಷಿಂತಿ ಗ್ರಾಮದ ಬಳಿ ನಾಮಫಲಕ ಅಳವಡಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಶಹಾಪುರ ಉಪವಲಯ ಅರಣ್ಯ ಅಧಿಕಾರಿ ಐ.ಬಿ.ಹೂಗಾರ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT