ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ತಗ್ಗು ದಿನ್ನೆಗಳ ರಸ್ತೆ; ಬಸ್ ಸೇವೆ ಕಡಿತ

ದಶಕ ಕಳೆದರೂ ದುರಸ್ತಿಯಾಗದೆ ರಸ್ತೆ; ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ
Last Updated 22 ಸೆಪ್ಟೆಂಬರ್ 2021, 16:44 IST
ಅಕ್ಷರ ಗಾತ್ರ

ವಡಗೇರಾ: ತಾಲ್ಲೂಕಿನ ಕಾಡಂಗೇರಾ ಬಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು, ಪ್ರಯಾಣಿಕರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ದುರವಸ್ಥೆಯಿಂದ ಬಸ್‌ ಸೌಕರ್ಯವಿಲ್ಲದೆ ನಿತ್ಯ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ವಯೋವೃದ್ಧರು ಪರದಾಡುವಂತಾಗಿದೆ.

ರಸ್ತೆಯ ತುಂಬ ತಗ್ಗು, ದಿನ್ನೆಗಳು ಬಿದ್ದಿದ್ದು ವಾಹನಗಳು ಸಂಚರಿಸದಂತಹ ದುಸ್ಥಿತಿ ಇದೆ. ಹೀಗಾಗಿ, ಯಾದಗಿರಿ ಹಾಗೂ ಶಹಾಪುರ ಬಸ್ ಘಟಕಗಳ ಅಧಿಕಾರಿಗಳು ಈ ಮಾರ್ಗದಲ್ಲಿ ಬಸ್‌ ಸಂಪರ್ಕ ಕಲ್ಪಿಸಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ನಿತ್ಯ 5–6 ಕಿ.ಮೀ. ನಡೆದುಕೊಂಡೇ ತರಗತಿಗಳಿಗೆ ಹೋಗಬೇಕಿದೆ. ಖಾಸಗಿ ವಾಹನಗಳು ದುಬಾರಿ ಹಣ ಕೇಳುತ್ತಾರೆ. ಜತೆಗೆ ಸಕಾಲಕ್ಕೆ ಬರುವುದಿಲ್ಲ. ಆರ್ಥಿಕ ಹೊಡೆತ ಹಾಗೂ ರಸ್ತೆ ಅವ್ಯವಸ್ಥೆಯಿಂದ ಕೆಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಹಿಡಿಶಾಪ ಹಾಕುವಂತಾಗಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಗ್ರಾಮಕ್ಕೆ ಬಸ್ ಸೇವೆ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಮನವಿ.

ಗ್ರಾಮಕ್ಕೆ ಬಸ್‌ ಸೇವೆ ಕಲ್ಪಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆಗ ಅವರು ‘ಮೊದಲು ನಿಮ್ಮೂರಿಗೆ ಸರಿಯಾದ ರಸ್ತೆ ಮಾಡಿಸಿ. ಗ್ರಾಮದಲ್ಲಿನ ಚರಂಡಿಗಳ ದುರಸ್ತಿ ಮಾಡಿ. ಆಮೇಲೆ ಬಸ್‌ಗಳು ಓಡಾಡುತ್ತವೆ’ ಎನ್ನುತ್ತಾರೆ. ಅವರ ಸಹವಾಸ ಬೇಡವೆಂದು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.

ರಸ್ತೆ ಹಾಗೂ ಬಸ್ ಸೇವೆಯ ಮಾಹಿತಿ ಕೇಳಲು ಪಿಡಿಒ ಅವರಿಗೆ ಕರೆ ಮಾಡಿದರೂಸ್ವೀಕರಿಸಲಿಲ್ಲ.

ಮರೀಚಿಕೆಯಾದ ಸ್ವಚ್ಛತೆ: ಗ್ರಾಮದಲ್ಲಿ ಸ್ವಚ್ಛ ಭಾರತ ಯೋಜನೆ, ಗ್ರಾಮೀಣ ನೈರ್ಮಲ್ಯದಂತಹ ಯೋಜನೆಗಳು ಜಾರಿಯಲ್ಲಿದ್ದರೂ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಕಾಲರ, ಮಲೇರಿಯಾ, ಡೆಂಗಿ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದೆ ಎಂದು ರಾಘವೇಂದ್ರ ನಾಯಕ ಬೇಸರ ವ್ಯಕ್ತಪಡಿಸಿದರು.

ಚರಂಡಿಯಲ್ಲಿ ಹುಳು ತುಂಬಿಕೊಂಡಿದ್ದು ಕೊಳಚೆ ನೀರು ರಸ್ತೆಯ‌ ಮೇಲೆ ಹರಿದು ದುರ್ವಾಸನೆ ಬೀರುತ್ತಿದೆ. ಪಂಚಾಯತಿ ಅಧಿಕಾರಿಗಳು ತಮಗೆ ಸಂಬಂಧ ಇಲ್ಲ ಎಂಬಂತ ವರ್ತಿಸುತ್ತಿದ್ದಾರೆ. ಇದೇ ರಸ್ತೆಗಳಲ್ಲಿ ನಿತ್ಯ ಓಡಾಡುತ್ತಾರೆ. ಆದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.

ಗ್ರಾಮದ ಸಮಸ್ಯೆಗಳ ಬಗ್ಗೆ ಪಿಡಿಒ ಮತ್ತು ಇಒ ಅವರಿಗೆ ಅನೇಕ ಬಾರಿ ಮನವಿ‌ ಮಾಡಿದ್ದೇವೆ. ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗ್ರಾಮ ಪಂಚಾಯಿತಿ ಕಚೇರಿ ಮುಂದೆಯೂ ಅನೈರ್ಮಲ್ಯದ ವಾತಾವರಣವಿದೆ. ಅಧಿಕಾರಿಗಳಿಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುತ್ತಿಲ್ಲ ಎಂದು ಗ್ರಾಮದ ದೇವು ಮಡಿವಾಳ, ದುರ್ಗಪ್ಪ ಕಲಾಲ್, ಸಿದ್ದು ಪೂಜಾರಿ ಹೇಳಿದರು.

ಸಮರ್ಪಕವಾದ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬಂದರು ಗ್ರಾಮದ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಗುತ್ತಿಲ್ಲ. ಈ ಅನುದಾನ ಎಲ್ಲಿಗೆ ಹೋಗುತ್ತದೆ? ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಯ ಕಾರ್ಯಗಳು ಕಾಣುತ್ತಿಲ್ಲ. ಹೀಗಾಗಿ, ಅನುದಾನವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ರಾಘವೇಂದ್ರ ಆರೋಪಿದರು.

***

ಯಾವುದೇ ಗ್ರಾಮದಲ್ಲಿ ಅನೈರ್ಮಲ್ಯದ ವಾತಾವರಣ ಕಂಡುಬಂದರೇ ಶೀಘ್ರವೇ ಕ್ರಮ ಜರುಗಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿ ಸ್ವಚ್ಛಗೊಳಿಸಲಾಗುತ್ತದೆ
ಶಿಲ್ಪಾಶರ್ಮಾ, ಜಿಲ್ಲಾ‌ ಪಂಚಾಯತಿ ಸಿಇಒ

***

ಗ್ರಾಮದಲ್ಲೇ ಗ್ರಾಮ ಪಂಚಾಯಿತಿ ಕಚೇರಿ ಇದ್ದರೂ ಸ್ವಚ್ಛತೆ ಮರೀಚಿಕೆಯಾಗಿದೆ. ಸ್ವಚ್ಛತೆ ಕಾಪಾಡಲು ಆಗದಿರುವುದು ನಾಚಿಕೆಗೇಡಿನ ಸಂಗತಿ
ರಾಘವೇಂದ್ರ ನಾಯಕ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT