ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಖಾತ್ರಿ ಕೆಲಸಕ್ಕಾಗಿ ಪಂಚಾಯಿತಿ ಮುಂದೆ ಕಾರ್ಮಿಕರ ಪ್ರತಿಭಟನೆ 

Last Updated 15 ಜೂನ್ 2021, 9:55 IST
ಅಕ್ಷರ ಗಾತ್ರ

ಯರಗೋಳ (ಯಾದಗಿರಿ ಜಿಲ್ಲೆ): ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಮಗಾರಿ ಯೋಜನೆಯಡಿಯಲ್ಲಿ ಕೆಲಸ ನೀಡುವಂತೆ ಒತ್ತಾಯಿಸಿ ಮಂಗಳವಾರ ಗ್ರಾಮದ ನೂರಾರು ಸಂಖ್ಯೆಯ ಮಹಿಳೆಯರು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನೆ ಕಾವು ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಉಪ ನಿರ್ದೇಶಕ (ಗ್ರಾಮೀಣಾಭಿವೃದ್ಧಿ) ಚಂದ್ರಶೇಖರ್ ಪವಾರ್ ಆಗಮಿಸಿ ಪ್ರತಿಭಟನೆ ನಿರತ ಮಹಿಳಾ ಕಾರ್ಮಿಕರ ಮನವೊಲಿಸಿ ಮಾತನಾಡಿ, ‘ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿದೆ. ಯಾವುದೇ ಊಹಪೋಹಗಳಿಗೆ ಕಿವಿಗೊಡಬೇಡಿ. ಕೆಲಸ ಪಡೆಯುವುದು ನಿಮ್ಮ ಹಕ್ಕು, ಅದನ್ನು ನೀಡುವುದು ಅಧಿಕಾರಿಗಳ ಕರ್ತವ್ಯ’ ಎಂದು ಪ್ರತಿಭಟನಾನಿರತ ಮಹಿಳಾ ಕಾರ್ಮಿಕರಿಗೆ ಮನವೊಲಿಸಿದರು.

ಪಟ್ಟು ಬಿಡದ ಮಹಿಳೆಯರು ಕೈಯಲ್ಲಿ ಜಾಬ್ ಕಾರ್ಡ್, ಸಲಾಕೆ, ಪುಟ್ಟಿ, ಗುದ್ದಲಿ ಹಿಡಿದು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ನಿಗದಿ ಪಡಿಸಿದಷ್ಟು ಮಾನವ ದಿನಗಳ ಕೆಲಸ ನೀಡುವಂತೆ ಪಂಚಾಯಿತಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 1 ಗಂಟೆಗೂ ಹೆಚ್ಚು ಕಾಲ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು ಪವಾರ್ ಮತ್ತು ಚುನಾಯಿತ ಸದಸ್ಯರು ಪ್ರತಿಭಟನೆ ನಿಲ್ಲಿಸುವಂತೆ ಕಾರ್ಮಿಕರ ಮನವೊಲಿಸುವ ಯತ್ನ ನಡೆಸಿದರು. ಕಾರ್ಮಿಕರು ಮಾತ್ರ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಮಹಿಳಾ ಕಾರ್ಮಿಕರ ಪ್ರತಿಭಟನೆಗೆ ವಿವಿಧ ವಾರ್ಡ್‌ಗಳ ಜನರು ಕೈಜೋಡಿಸಿದರು. ಇನ್ನು ಕೆಲವರೂ ತಮ್ಮ ಜಾಬ್ ಕಾರ್ಡ್‌ಗಳು ಆಗದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರಾದ ಪದ್ಮಾವತಿ ಮಾತನಾಡಿ, ‘ಕೇಂದ್ರ ಸರ್ಕಾರ ಬಡವರಿಗಾಗಿ ಕೆಲಸ ನೀಡುತ್ತಿದ್ದಾರೆ. ಆದರೆ, ಪಂಚಾಯಿತಿ ಮಟ್ಟದಲ್ಲಿನ ಅಧಿಕಾರಿಗಳು ನಮಗೆ ಕೆಲಸ ನೀಡುತ್ತಿಲ್ಲ. ನಮ್ಮಂತ ಬಡವರು ದಿನದ ದುಡಿಮೆಯಿಲ್ಲದೆ ಬದುಕು ದುಸ್ತರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪದ್ಮಾವತಿ ಚಿಕ್ಕಬಾನರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕಾರ್ಮಿಕರಾದ ದೇವಮ್ಮ, ನಿಂಗಣ್ಣ, ಪ್ರೇಮಿಲಿಬಾಯಿ, ವಿಶ್ವಾನಂದ, ಯಲ್ಲಮ್ಮ, ಭೀಮಬಾಯಿ, ಸಣ್ಣ ಹಣಮಂತ, ಬಸವರಾಜ, ಸಂಜೀವಕುಮಾರ, ಸುವರ್ಣಾ, ರಾಧಮ್ಮ, ಪಾರ್ವತಿ, ಜಗದೇವಿ ಸೇರಿದಂತೆ ವಿವಿಧ ವಾರ್ಡ್‌ಗಳ ಜನರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT