ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವೈಭವದ ‌ನವರಾತ್ರಿ ಉತ್ಸವಕ್ಕೆ ಜಿಲ್ಲೆ ಸಜ್ಜು

ದೇವಸ್ಥಾನಗಳಿಗೆ ದೀಪಾಲಂಕಾರ, ವಿವಿಧ ಸ್ಪರ್ಧೆಗಳ ಆಯೋಜನೆ: ಪುರಾಣ–ಪ್ರವಚನ, ದೇವಿ ಪ್ರತಿಷ್ಠಾಪನೆ
Last Updated 7 ಅಕ್ಟೋಬರ್ 2021, 7:00 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ದಸರಾ ಹಬ್ಬದ ಅಂಗವಾಗಿ ನವರಾತ್ರಿ ಉತ್ಸವಕ್ಕೆ ಜಿಲ್ಲೆ ಸಜ್ಜುಗೊಂಡಿದೆ.

ವಿವಿಧ ದೇವಸ್ಥಾನಗಳಲ್ಲಿ ನವ ರಾತ್ರಿ ಅಂಗವಾಗಿ ಅಂಭಾ ಭವಾನಿ ದೇವಿಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದೆ. ದರ್ಶನಕ್ಕೆ ಬರುವ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ.

ನಗರದ ರೈಲ್ವೆ ಸ್ಟೆಷನ್‌ ಸಮೀಪದ ಹಿಂದೂ ಸೇವಾ ಸಮಿತಿ ವತಿಯಿಂದ ಅಂಭಾ ಭವಾನಿ ದೇವಿಮೂರ್ತಿ ಪ್ರತಿಷ್ಠಾಪನೆಗೆ ವೇದಿಕೆ ನಿರ್ಮಾಣವಾಗಿದೆ.

ನಗರದ ಶಾಸ್ತ್ರಿ ವೃತ್ತದಿಂದ ದೇವಸ್ಥಾನದ ವರೆಗೆ ಎರಡು ಬದಿಯಲ್ಲಿ ವಿದ್ಯುತ್‌ ದೀಪಾಂಕಾರ ಮಾಡಲಾಗಿದೆ. ವಿವಿಧ ಕಡೆ ಭಕ್ತರನ್ನು ಆಹ್ವಾನಿಸುವ ದೊಡ್ಡ ಬ್ಯಾನರ್ ಹಾಕಲಾಗಿದೆ.

ಗುರುವಾರದಿಂದ ಆರಂಭವಾಗುವ ನವರಾತ್ರಿ ಉತ್ಸವವು ಮಧ್ಯಾಹ್ನ 12 ಗಂಟೆಗೆ ದೇವಿಯ ಗಂಗಾಸ್ನಾನವು ಭೀಮಾ ನದಿಯಲ್ಲಿ ಜರುಗಲಿದೆ. ಡೊಳ್ಳು, ಬಜಾಭಂಜಂತ್ರಿ ಮೂಲಕ ಮೆರವಣಿಗೆ ಮೂಲಕ ತಂದು ದೇವಸ್ಥಾನದಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ನಂತರ ಅಭಿಷೇಕ ಸೇರಿದಂತೆ ವಿವಿಧ ಪೂಜೆ ಪುನಸ್ಕಾರಗಳು ಜರುಗಲಿವೆ.

ನವರಾತ್ರಿ ಅಂಗವಾಗಿ ಪ್ರತಿ ದಿನ ರಾತ್ರಿ 9ಗಂಟೆಯಿಂದ 11ರ ವರೆಗೆ ದಾಂಡಿಯಾ ನೃತ್ಯ ಪ್ರದರ್ಶನ ನಡೆಯುವುದು. ಮಧ್ಯಾಹ್ನ ಅನ್ನದಾ ಸೋಹ, ಸಂಜೆ ಪ್ರಸಾದ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸೇವಾ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಚವ್ಹಾಣ್‌ ತಿಳಿಸಿದರು.

ಉತ್ಸವಕ್ಕೆ ಅಬ್ಬೆತುಮಕೂರು ಸಜ್ಜು:ಜಿಲ್ಲೆಯ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ಅ.7ರಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ ಎಂದು ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಅಣಿಮಾದಿ ಅಷ್ಟಸಿದ್ದಿಗಳನ್ನು ಕಟ್ಟಿ ಮೆರೆದ ವಿಶ್ವಾರಾಧ್ಯರು ಈ ನಾಡುಕಂಡ ಅಪರೂಪದ ಸಂತರು. ಗಂವ್ಹಾರದಲ್ಲಿ ಜನಿಸಿ ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ಕಾಶೀಘನ ಪಂಡಿತರೆಂದೇ ಖ್ಯಾತರಾದವರು. ತಾವು ಸಂಪಾದಿಸಿದ್ದ ಜ್ಞಾನವನ್ನು ಈ ಲೋಕದ ಜನತೆಗೆ ಉಣಬಡಿಸಲು ಲೋಕಸಂಚಾರ ಕೈಗೊಂಡಿದ್ದರು. ದೇವಿಯ ಆರಾಧಕರಾಗಿದ್ದ ಅವರು ಕಠಿಣವಾದ ತಪ್ಪಸ್ಸನ್ನು ಮಾಡುವುದರ ಮೂಲಕ ದೇವಿಯನ್ನು ಒಲಿಸಿಕೊಂಡ ಮಹಾತ್ಮರು. ವಿಶ್ವಾರಾಧ್ಯರ ತಪಃಶಕ್ತಿಗೆ ದೇವಿ ಒಲಿದು ವರಕರುಣಿಸಿದ್ದಾಗಿ ಪ್ರತೀತಿ ಇದೆ. ಹೀಗಾಗಿ ಕ್ಷೇತ್ರದಲ್ಲಿ ದೇವಿಯ ಆರಾಧನೆಯನ್ನು ಭಕ್ತಿಯಿಂದ ಮಾಡಿಕೊಂಡು ಬರಲಾಗುತ್ತಿದೆ. ನವರಾತ್ರಿಯ ವೇಳೆ ವಿಶೇಷವಾದ ಪಾರಾಯಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ನಿತ್ಯ ದೇವಿಯ ಮೂರ್ತಿಗೆ ವಿಶೇಷ ಪೂಜೆ, ದೇವಿಯ ಪಾರಾಯಣ ಹಾಗೂ ಮಹಾ ಮಂಗಳಾರುತಿ ನಡೆಯಲಿದೆ. 9 ದಿನಗಳ ಕಾಲ ಈ ಉತ್ಸವ ನಡೆಯಲಿದ್ದು, ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

40ನೇ ವಾರ್ಷಿಕ ದಸರಾ ಹಬ್ಬ:ಬೆಟ್ಟದಲ್ಲಿನ ಬೆಟ್ಟದ ಭುವನೇಶ್ವರಿ ಮಂದಿರದ ವತಿಯಿಂದ 40ನೇ ವಾರ್ಷಿಕ ದಸರಾ ಹಬ್ಬದ ಅಂಗವಾಗಿ ಅ.14ರ ಮಧ್ಯಾಹ್ನ 2ಕ್ಕೆ ದೇವಾಲಯದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ.

ಮಕ್ಕಳ ನೃತ್ಯ, ಗಾಯನ, ವಚನ ಗಾಯನ, ಭರತನಾಟ್ಯ, ಶಿವತಾಂಡವ ನೃತ್ಯ, ಜಾನಪದ ನೃತ್ಯ, ಮಕ್ಕಳ ವೇಷಭೂಷಣ, ಏಕಪಾತ್ರಾಭಿನಯ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿವೆ. ಆಸಕ್ತ ಪಾಲಕ, ಪೋಷಕರು ಹೆಸರು ನೋಂದಾಯಿಸಿಕೊಳ್ಳಲು ದೇವಾಲಯದ ವ್ಯವಸ್ಥಾಪಕ ಶಿವರಾಮ್ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಗುರುಪ್ರಸಾದ್ ವೈದ್ಯ 98807 17814 ಅವರನ್ನು ಸಂಪರ್ಕಿಸಬಹುದು.

‌ಕೋವಿಡ್ ನಿಯಮ ಪಾಲಿಸಿ ಆಚರಣೆ
ಸುರಪುರ:
ಕಳೆದ 34 ವರ್ಷಗಳಿಂದ ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ನಡೆಯುತ್ತಿದ್ದ ನಾಡಹಬ್ಬ ಉತ್ಸವ ಕೋವಿಡ್ ಕಾರಣ ಕಳೆದ ವರ್ಷ ಜರುಗಲಿಲ್ಲ.

‘ಈ ಬಾರಿ ಕೋವಿಡ್ ನಿಯಮಾವಳಿ ಪ್ರಕಾರ ಉತ್ಸವವನ್ನು ಸರಳವಾಗಿ ಆಚರಿಸಲು ಉತ್ಸವ ಸಮಿತಿ ನಿರ್ಧರಿಸಿದೆ’ ಎಂದು ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ತಿಳಿಸಿದ್ದಾರೆ.

‘ಗರುಡಾದ್ರಿ ಕಲಾ ಮಂದಿರದಲ್ಲಿ ಅ.7ರಿಂದ ಅ.14ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 7 ಗಂಟೆಗೆ ನಾಡದೇವಿಯ ಮೆರವಣಿಗೆಗೆ ಶಾಸಕ ರಾಜೂಗೌಡ ಚಾಲನೆ ನೀಡುವರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ. 8ರಿಂದ ಅ. 12ರವರೆಗೆ ನಿತ್ಯ ಶಾಲಾ ಮಕ್ಕಳಿಗೆ ವಿವಿಧ ಲೇಖನ, ಭಾಷಣ, ರಂಗೋಲಿ, ಕ್ರೀಡೆ ಸ್ಪರ್ಧೆಗಳು ನಡೆಯುತ್ತವೆ. ಅ.13ರಂದು ಸ್ಪಂದನ ತಂಡದವರಿಂದ ರಸಮಂಜರಿ ಮತ್ತು ಭರತನಾಟ್ಯ ನಡೆಯಲಿದೆ. ಅ. 14ರಂದು ಸಮಾರೋಪ ನಡೆಯಲಿದೆ’ ಎಂದು ಅವರು ತಿಳಿಸಿದರು.

ದೋರನಹಳ್ಳಿ ನಾಡಹಬ್ಬ ಸಕಲ ಸಿದ್ಧತೆ
ದೋರನಹಳ್ಳಿ (ಶಹಾಪುರ)
: ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಶಾಂಭವಿ ಮಾತಾ ಚಿಕ್ಕಮಠದಲ್ಲಿ ಎರಡು ವರ್ಷದಿಂದ ದಸರಾ ಉತ್ಸವವನ್ನು ಕೊರೊನಾ ಹಾಗೂ ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಮಠದ ಪೀಠಾಧಿಪತಿ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು ಸಂಕಲ್ಪದಂತೆ ದಸರಾ ಉತ್ಸವಕ್ಕೆ ಸಕಲ ತಯಾರಿ ಪೂರ್ಣಗೊಂಡಿದೆ.

ಪುರಾಣದ ಪ್ರವಚನ ವೇಳೆ ಮಳೆ ಬಂದರೆ ಪುರಾಣ ಕೇಳಲು ಬರುವ ಭಕ್ತರಿಗೆ ತೊಂದರೆಯಾಗುತ್ತಿತ್ತು. ಇದರ ಶಾಶ್ವತ ಪರಿಹಾರಕ್ಕೆ ಶೆಡ್ ನಿರ್ಮಾಣ ಮಾಡಲಾಗಿದೆ. ಗ್ರಾಮದ ಭಕ್ತ ಸಮೂಹವು ಪಾಲ್ಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಯಕ್ರಮದ ವೇದಿಕೆಯು ಸಿದ್ಧಗೊಂಡಿದೆ. ಮಠದ ಒಳಾಂಗಣ ಮತ್ತು ಹೊರಾಂಗಣಕ್ಕೆ ಬಣ್ಣ ಬಳಿಯಲಾಗಿದೆ. ದೇವಸ್ಥಾನವನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿದೆ.

ಬುಧವಾರ ಘತ್ತರಗಿ ಭಾಗ್ಯವಂತಿ ದೇವಿ ಪುರಾಣ ಆರಂಭವಾಯಿತು. ಗುರುವಾರ ಶಾಲಾ ಮಕ್ಕಳಿಂದ ನಾಟಕೋತ್ಸವ, ಸಾಂಸ್ಕೃತಿಕ ಚಟುವಟಿಕೆಗಳು ಜರುಗಲಿವೆ. ಸಾಧಕರ ಸನ್ಮಾನಕ್ಕಾಗಿ ಸಕಲ ತಯಾರಿ ನಡೆದಿದ್ದು, ಭಕ್ತರಿಗೆ ಪ್ರಸಾದ ಮತ್ತು ವಸತಿಯ ವ್ಯವಸ್ಥೆಯು ಭರದಿಂದ ಸಾಗಿದೆ.

ಶಹಾಪುರ ನಗರದ ಕುಂಬಾರಗೇರಿ ಹಿರೇಮಠದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಗುರುವಾರದಿಂದ ಅ.14ವರೆಗೆ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಪ್ರತಿದಿನ ಪ್ರವಚನ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸ ಲಾಗುವುದು ಎಂದು ಹಿರೇಮಠ ನಾಡಹಬ್ಬ ದಸರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

***

ಮಠದ ದಸರಾ ಉತ್ಸವಕ್ಕಾಗಿ ನೂರಾರು ಭಕ್ತ ಸಮೂಹ ಒಂದು ವಾರದಿಂದ ಸಿದ್ದತೆ ಮಾಡಿದ್ದಾರೆ. ಭಕ್ತರ ಇಚ್ಛೆಯಂತೆ ಕಾರ್ಯಕ್ರಮಗಳು ನಡೆಯಲಿವೆ.
-ಶಿವಲಿಂಗ ರಾಜೇಂದ್ರ ಶಿವಾಚಾರ್ಯ, ಶಾಂಭವಿ ಮಾತಾ ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT