ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟ್ಕಾ ಹಾವಳಿ: ಕಡಿವಾಣವೇ ಸವಾಲು

ತಿಂಗಳಲ್ಲಿ 37 ಪ್ರಕರಣ ದಾಖಲು; ಮಿಸ್ಡ್‌ಕಾಲ್‌ ಮೊರೆ ಹೋದ ಬುಕ್ಕಿಗಳು
Last Updated 9 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮಟ್ಕಾ ಹಾವಳಿ ವಿಪರೀತವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಹರಸಾಹಸ ಮಾಡುತ್ತಿದೆ. ಆದರೆ, ತಂತ್ರಜ್ಞಾನ ಮೊರೆ ಹೋದ ಬುಕ್ಕಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.

ಜಿಲ್ಲೆಯಲ್ಲಿ 15 ಪೊಲೀಸ್‌ ಠಾಣೆಗಳಿದ್ದು, ಒಂದು ತಿಂಗಳಿಂದ 37 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ, ಮಟ್ಕಾ ಬರೆಯುವ ಬುಕ್ಕಿಗಳು ಕದ್ದುಮುಚ್ಚಿ ವ್ಯವಹಾರ ನಡೆಸುತ್ತಿದ್ದಾರೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಮಟ್ಕಾ ವ್ಯವಹಾರ ನಡೆಯುತ್ತಿದ್ದು, ಕಿರಾNi ಅಂಗಡಿಗಳಲ್ಲಿ ಇದು ಜೋರಾಗಿದೆ. ಅನೇಕರು ಇದರಿಂದ ಮನೆಮಠ ಕಳೆದುಕೊಂಡು ನಷ್ಟದಲ್ಲಿದ್ದರೂ ಭಯ ಇಲ್ಲದಂತೆ ಆಗಿದೆ. ಜಿಲ್ಲೆಯ ಕುಗ್ರಾಮಗಳಲ್ಲಿಯೂ ಜನರು ಮಟ್ಕಾ ಆಟದಲ್ಲಿ ತೊಡಗಿಸಿಕೊಂಡಿರುವುದಕ್ಕೆ ನಿದರ್ಶನಗಳಿವೆ.

ಕಲಂ 78 (3) ಕೆ.ಪಿ ಕಾಯ್ದೆಯಡಿ ಮಟ್ಕಾ ಬುಕ್ಕಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಆದರೆ, ಬುಕ್ಕಿಗಳಿಗೆ ಕಠಿಣ ಶಿಕ್ಷೆ ಇಲ್ಲದ ಕಾರಣ ಅನಾಯಾಸವಾಗಿ ಜಾಮೀನು ಪಡೆದು ಹೊರ ಬರುತ್ತಾರೆ.

ಮಿಸ್ಡ್‌ ಕಾಲ್‌ ನೀಡಿ ಸಂಖ್ಯೆ ನೋಂದಣಿ:

ಈಚೆಗೆ ಪೊಲೀಸರು ಮಟ್ಕಾ ಅಡ್ಡೆಗಳ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ ಎಚ್ಚೆತ್ತುಕೊಂಡ ಮಟ್ಕಾ ಬುಕ್ಕಿಗಳು ಮೊಬೈಲ್‌ ಮಿಸ್ಡ್‌ ಕಾಲ್‌ನಿಂದ ನೋಂದಣಿ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಪೊಲೀಸರಿಗೆ ಇದು ಸವಾಲಾಗಿದೆ. ಯಾರು ಎಲ್ಲಿ ಹೇಗೆ ಬುಕ್‌ ಮಾಡಿಕೊಳ್ಳುತ್ತಾರೆ ಎನ್ನುವುದು ತಿಳಿಯದಾಗಿದೆ. ಇದರಿಂದ ಬುಕ್ಕಿಗಳ ಚಲನವಲನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡುವ ಅವಶ್ಯವಿದೆ.

ಮಟ್ಕಾ ಬುಕ್ಕಿಗಳ ಪರೇಡ್‌: ಈಚೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಮಟ್ಕಾ ಬುಕ್ಕಿಗಳ ಪರೇಡ್‌ ನಡೆಯಿತು. ಯಾದಗಿರಿ ನಗರದ 15 ಬುಕ್ಕಿಗಳು, ಸೈದಾಪುರ 15, ಗುರುಮಠಕಲ್‌ 8, ವಡಗೇರಾ ಪೊಲೀಸ್‌ ಠಾಣೆ ವ್ಯಾಪ್ತಿಯಿಂದ 9 ಬುಕ್ಕಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು. ಕೂಲಿ ಕೆಲಸ ಮಾಡುವವರು, ರೈತರು, ಯುವಕರು, ಇಳಿ ವಯಸ್ಸಿನವರು ಇದರಲ್ಲಿ ಪಾಲ್ಗೊಂಡಿರುವುದು ಪರೇಡ್‌ನಿಂದ ತಿಳಿದುಬಂದಿದೆ.

ಕಾನೂನು ಬದಲಾಗುತ್ತದೆ: ಈಚೆಗೆ ಮಟ್ಕಾ ಬುಕ್ಕಿಗಳನ್ನು ಪೊಲೀಸ್‌ ಸ್ಟೇಷನ್‌ಗೆ ಕರೆಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿದ್ದರು. ಆದರೆ, ಈಗ ಕಾನೂನು ಬದಲಾಗುತ್ತಿದ್ದು, ಬುಕ್ಕಿಗಳನ್ನು ಸೀದಾ ಜೈಲಿಗೆ ಕಳಿಸುವಂತಹ ಕಾಯ್ದೆ ಬರಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಖಡಕ್‌ ಎಚ್ಚರಿಕೆ ನೀಡಿದ್ದರು.

‘ಇನ್ನೊಬ್ಬರ ತಲೆ ಮೇಲೆ ಕಲ್ಲು ಹಾಕಿ ನೀವು ಜೀವನ ಸಾಗಿಸಬೇಕಾ. ಮಟ್ಕಾ ಆಡುವವರ ಸಂಸಾರ ಹಾಳು ಮಾಡಿ ನೀವು ಜೀವನ ಮಾಡಬೇಕಾ. ಇಂದೇ ಕೊನೆ ಮಾಡಬೇಕು. ಮತ್ತೆ ಸಿಕ್ಕಿ ಬಿದ್ದರೆ ಜೈಲಿಗೆ ಕಳಿಸುತ್ತೇವೆ. ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.

‘ಮುಂದಿನ ದಿನಗಳಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಅಂಥವರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಗಡಿಪಾರು ಮಾಡುವ ಕ್ರಮ ಜರುಗಿಸುವ ಬಗ್ಗೆ ಪೊಲೀಸ್ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಪಟ್ಟಣ ಅಥವಾ ಗ್ರಾಮಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರ ಗೌಪ್ಯವಾಗಿ ಇಡಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

***

ಟೈಲರ್‌, ಶಿಕ್ಷಕರು ಭಾಗಿ!

ಮಟ್ಕಾ ದಂಧೆಯಲ್ಲಿ ಟೈಲರ್‌ಗಳು, ಶಿಕ್ಷಕರು, ಕೂಲಿ ಕಾರ್ಮಿಕರು, ಚಾಲಕರು, ಇಸ್ತ್ರಿ ಅಂಗಡಿಯವರು, ಖಾಸಗಿ ಕೆಲಸದವರು, ಕಿರಾಣಿ ವ್ಯಾಪಾರಿಗಳು ಭಾಗಿಯಾಗಿರುವುದು ತಿಳಿದುಬಂದಿದೆ.

ಕೆಲವರು ಮಟ್ಕಾ ಬರೆಯುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಇದು ಲಕ್ಷಾಂತರ ರೂಪಾಯಿಗಳ ವ್ಯವಹಾರವಾಗಿದ್ದರಿಂದ ಹೆಚ್ಚಿನ ಲಾಭದ ನಿರೀಕ್ಷೆಯಿಂದ ಕೆಲವರು ಪರೋಕ್ಷವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ.

ಒಂದು ಸಾವಿರಕ್ಕೆ ಇಂತಿಷ್ಟು ಎಂದು ಕಮಿಷನ್‌ ಪಡೆಯುವ ಬುಕ್ಕಿಗಳು, ಸಾರ್ವಜನಿಕರಿಂದ ಜೂಟಾಟ ಮಾಡಿಸುವುದು ನಡೆದಿದೆ. ಇದಕ್ಕೆ ಕಡಿವಾಣ ಹಾಕಿ ಜಿಲ್ಲೆಯನ್ನು ಮಟ್ಕಾ ಮುಕ್ತ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

***

ಮಟ್ಕಾ ಬುಕ್ಕಿಗಳ ಕಡಿವಾಣಕ್ಕೆ ಪೊಲೀಸ್‌ ಬಾತ್ಮಿದಾರರು, ಸಾರ್ವಜನಿಕರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತಿದೆ
–ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT