ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಸೆಳೆಯಲು ‘ಸಮಾಜ ಸೇವಕರ’ ಪೈಪೋಟಿ; ರಾಜಕೀಯ ಚಟುವಟಿಕೆ ಚುರುಕು

ಜನರ ಓಲೈಕೆಗೆ ಮುಖಂಡರಿಂದ ಬಗೆಬಗೆಯ ಕಸರತ್ತು
Last Updated 1 ಮೇ 2022, 4:52 IST
ಅಕ್ಷರ ಗಾತ್ರ

ಯಾದಗಿರಿ: ವಿಧಾನಸಭಾ ಚುನಾವಣೆ ಘೋಷಣೆಗೆ ಸದ್ಯಕ್ಕೆ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಪಕ್ಷಾಂತರ, ಪೈಪೋಟಿ, ಲಾಬಿ ಎಲ್ಲವೂ ಸದ್ದಿಲ್ಲದೇ ನಡೆಯುತ್ತಿದೆ.

ಯಾರು, ಯಾವ ಪಕ್ಷದಿಂದ ಚುನಾವಣಾ ಕಣಕ್ಕಿಳಿಯುವರು ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈಗಾಗಲೇ ಕೆಲ ಸ್ಪರ್ಧಾ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ಬಗೆಬಗೆ ತಂತ್ರಗಳ ಮೊರೆ ಹೋಗಿದ್ದಾರೆ.

ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು, ವೈದ್ಯ ಡಾ.ಎಸ್‌.ಬಿ. ಕಾಮರೆಡ್ಡಿ, ಡಾ. ಭೀಮಣ್ಣ ಮೇಟಿ, ಮಾಣಿಕರೆಡ್ಡಿ ಕುರಕುಂದಿ ಆಕಾಂಕ್ಷಿಗಳಾಗಿದ್ದು, ವಿವಿಧ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಮೃತರ ಮನೆಗೆ ತೆರಳಿ ಆಕಾಂಕ್ಷಿಯೊಬ್ಬರು ಸಾಂತ್ವನ ಹೇಳುವುದರ ಜೊತೆಗೆ ಆರ್ಥಿಕವಾಗಿ ಕೊಂಚ ನೆರವು ನೀಡಿದರೆ, ಇನ್ನೊಬ್ಬ ಆಕಾಂಕ್ಷಿಯು ಜನರ ಆರೋಗ್ಯ ಸೇವೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ನೋಟ್‌ಪುಸ್ತಕ ವಿತರಿಸುವ ಕಾರ್ಯದಲ್ಲಿ ಒಬ್ಬರು ನಿರತರಾಗಿದ್ದಾರೆ, ಮತ್ತೊಬ್ಬರು ವೃದ್ಧರಿಗೆ ಮತ್ತು ಅಸಹಾಯಕರಿಗೆ ಸೌಲಭ್ಯ ಒದಗಿಸುತ್ತಿದ್ದಾರೆ.

‘ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಚುನಾವಣಾ ರಾಜಕೀಯ ಚಟುವಟಿಕೆ ಕೊಂಚ ಬೇಗನೇ ಆರಂಭ ಗೊಂಡಿದೆ. ಎಲ್ಲರೂ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಣ ಖರ್ಚಾದರೂ ಪರವಾಗಿಲ್ಲ. ಒಟ್ಟಾರೆ, ಜನರ ಮನ ಗೆದ್ದು ಚುನಾವಣೆ ಯಲ್ಲಿ ಗೆಲ್ಲಬೇಕು ಎಂಬ ಹುಮ್ಮಸಿನಲ್ಲಿ ಆಕಾಂಕ್ಷಿಗಳು ಇದ್ದಾರೆ’ ಎಂದು ಹಿರಿಯ ರಾಜಕಾರಣಿಯೊಬ್ಬರು ಹೇಳಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಹಾಲಿ ಶಾಸಕರು ಪುನರಾಯ್ಕೆಯಾಗಲು ಮತ್ತು ಮಾಜಿ ಶಾಸಕರು ಗೆಲುವು ಸಾಧಿಸಲು ಒಂದಿಲ್ಲೊಂದು ಸ್ವರೂಪದಲ್ಲಿ ಜನರಿಗೆ ಹತ್ತಿರವಾಗಲು ಪ್ರಯತ್ನ ನಡೆಸಿದ್ದಾರೆ.

ಯಾದಗಿರಿಯಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ನಗರಸಭೆಗೆ ಒಂದೇ ಸಮುದಾಯದವರನ್ನು ಗೆಲ್ಲಿಸುವ ಮೂಲಕ ಕೋಲಿ ಸಮುದಾಯದವರ ಮನವೊಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನ ಸೂರ ಅವರು ಗುರುಮಠಕಲ್‌ನಲ್ಲಿ ಬೆಂಬಲಿಗರ ಸಭೆ ನಡೆಸಿ, ಮಂದಿನ ಹೆಜ್ಜೆ ಬಗ್ಗೆ ಚರ್ಚಿಸಿತೊಡಗಿದ್ದಾರೆ.

ಸು‍ರಪುರದ ಶಾಸಕ ರಾಜೂಗೌಡ ಅವರು ಕ್ರೀಡಾಕೂಟ ಆಯೋಜಿಸಿ ಯುವಜನರನ್ನು ಸೆಳೆದರೆ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಸಭೆಗಳನ್ನು ನಡೆಸಿ ಮುಂದಿನ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಗುರುಮಕಠಕಲ್‌ ಶಾಸಕ ನಾಗನಗೌಡ ಕಂದಕೂರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವುದರ ಜೊತೆಗೆ ಕಾರ್ಯಕರ್ತರ ಜತೆಗೆ ಸಮಾಲೋಚನೆಯೂ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT