ಗುರುವಾರ , ಆಗಸ್ಟ್ 11, 2022
21 °C
ಮೊದಲ ಹಂತದ ಅಖಾಡಕ್ಕೆ ಸಿದ್ಧ, ಚಿನ್ಹೆಗಳು ಹಂಚಿಕೆ

ಯಾದಗಿರಿ: ಗ್ರಾಮ ಪಂಚಾಯಿತಿ ಚುನಾವಣಾ ಅಖಾಡ ಸಜ್ಜು

ಬಿ.ಜಿ.‍‍ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ರಣಾಂಗಣ ಸಜ್ಜಾಗಿದ್ದು, ಮೊದಲ ಹಂತದ ನಾಮಪತ್ರ ಹಿಂಪಡೆಯುವ ದಿನ ಸೋಮವಾರ ಕೊನೆಗೊಂಡಿದೆ. ಇದರಿಂದ ಮೊದಲ ಹಂತದ ಅಖಾಡ ಸಿದ್ಧವಾಗಿದೆ.

ಡಿ.22ರ ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಡಿ.14 ಕೊನೆ ದಿನವಾಗಿತ್ತು. ಅದರಂತೆ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಉಳಿದವರಿಗೆ ಚಿನ್ಹೆಗಳ ಹಂಚಿಕೆಯಾಗಿದೆ.

ತಮ್ಮ ಇಷ್ಟದ ಚಿನ್ಹೆ ಆಯ್ಕೆ: ಅಭ್ಯರ್ಥಿಗಳು ತಮ್ಮ ಇಷ್ಟದ ಚಿನ್ಹೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಪೆನಲ್‌ಗಳನ್ನು ರಚಿಸಿಕೊಂಡಿದ್ದಾರೆ. ಮೇಜು, ಕುರ್ಚಿ, ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ, ದೀಪ, ಆಟೊ ರಿಕ್ಷಾ, ಮಡಿಕೆ, ಲ್ಯಾಟಿನ್‌ ಸೇರಿದಂತೆ ವಿವಿಧ ಚಿನ್ಹೆಗಳನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ನೀಡಿದ್ದಾರೆ. 

ಈಗಾಗಲೇ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅಲ್ಲದೆ ಮನೆ ಮನೆ, ಹಳ್ಳಿಗೆ ತೆರಳಿ ತಮ್ಮ ಗುರುತಿಗೆ ಮತ ನೀಡಿ ಎಂದು ಮತದಾರರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮೊದಲ ಬಾರಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಉತ್ಸಾಹಿಗಳಾಗಿ ಅಧಿಕಾರ ದಕ್ಕಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ನಡೆಸಿದ್ದಾರೆ. ಇನ್ನು ಕಳೆದ ಬಾರಿ ಸೋತವರೂ ಎಲ್ಲಿ ಎಡವಿದ್ದೇವೆ. ಈ ಬಾರಿ ಯಾವ ರೀತಿ ಮತಗಳನ್ನು ಸೆಳೆಯಬೇಕು ಎಂದು ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ.

ಕೋವಿಡ್‌ ಕಾರಣದಿಂದ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಎರಡು ಹಂತದ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ ಶಹಾಪುರ, ಸುರಪುರ, ಹುಣಸಗಿ, ಎರಡನೇ ಹಂತದಲ್ಲಿ ಯಾದಗಿರಿ, ಗುರುಮಠಕಲ್‌, ವಡಗೇರಾ ತಾಲ್ಲೂಕುಗಳಲ್ಲಿ ಚುನಾವಣೆ ನಡೆಯಲಿದ್ದು, ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಜಿದ್ದಾಜಿದ್ದಿನ ಅಖಾಡ: ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯೂ ಶಾಸಕ, ಸಂಸದರ ಚುನಾವಣೆ ನಡೆಯುವ ರೀತಿಯಲ್ಲಿ ಜಿದ್ದಾಜಿದ್ದಿನಂತೆ ಅಖಾಡ ಸಿದ್ಧಗೊಂಡಿದೆ.

ಈ ಚುನಾವಣೆ ಒಂದು ರೀತಿಯಲ್ಲಿ ಸಕ್ರಿಯ ರಾಜಕೀಯಕ್ಕೆ ಮೊದಲ ಮೆಟ್ಟಿಲಾಗಿದೆ. ಇದು ಉನ್ನತ ಸ್ಥಾನಗಳಿಗೆ ಇದು ದಾರಿ ಮಾಡಿಕೊಡಲಿದೆ.

ಆಕಾಂಕ್ಷಿಗಳಲ್ಲಿ ಬಹುತೇಕ ಮಂದಿ ಒಂದೂವರೆ ವರ್ಷದಿಂದಲೇ ಚುನಾವಣಾ ಅಖಾಡ ಸಿದ್ಧಪಡಿಸಿಕೊಂಡು ಸಣ್ಣಪುಟ್ಟ ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ತಮ್ಮನ್ನು ಗುರುತಿಸುವಂತೆ ಮಾಡಿಕೊಂಡಿದ್ದಾರೆ.

ಇದನ್ನು ಕೆಲವರು ಜಾತಿ, ಗ್ರಾಮ ಸೇರಿದಂತೆ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದಾರೆ. ಕೆಲವೊಂದು ವಿಷಯಗಳನ್ನು ಇಟ್ಟುಕೊಂಡು ತಮ್ಮದೆ ಆದ ರೀತಿಯಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಅಣ್ಣ, ತಮ್ಮ, ಅಕ್ಕ, ತಂಗಿ, ನಾದಿನಿ, ಮಗ, ಚಿಕ್ಕಪ್ಪ, ಮಾವ, ಅತ್ತೆ ಎಂಬ ಸಂಬಂಧಗಳು ಚುನಾವಣೆಯಲ್ಲಿ ದಿಢೀರ್‌ ಹುಟ್ಟಿಕೊಂಡಿವೆ.

ಗುಂಡು, ತುಂಡು ಪ್ರಭಾವ: ಚುನಾವಣೆಯಲ್ಲಿ ಹಣದ ಹೊಳೆಯ ಜೊತೆಗೆ ಮದ್ಯ, ಬಾಡೂಟಗಳ ಕೂಟಗಳು ಅಲ್ಲಲ್ಲಿ ಏರ್ಪಟ್ಟಿವೆ. ಗ್ರಾಮ, ನಗರ ಹೊರ ವಲಯಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಕೂಟಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಡಿ.30ರಂದು ನಡೆಯುವ ಮತ ಎಣಿಕೆ ಅಭ್ಯರ್ಥಿಗಳ ಸಾಮರ್ಥ್ಯವನ್ನು ಬಯಲುಗೊಳಿಸಲಿದೆ.

***
ಯಾದಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 22 ಗ್ರಾ.ಪಂ ಇದ್ದು, ಸೋಮವಾರ 283 ಸೇರಿದಂತೆ ಇಲ್ಲಿಯವರೆಗೆ 371 ನಾಮಪತ್ರಗಳು ಸಲ್ಲಿಕೆಯಾಗಿವೆ

-ಚನ್ನಮಲ್ಲಪ್ಪ ಘಂಟಿ, ಯಾದಗಿರಿ ತಹಶೀಲ್ದಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.