ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ನದಿಯಂಚಿನ ಗ್ರಾಮಗಳಿಗೆ ಜಲದಿಗ್ಬಂಧನ

ಜಿಲ್ಲೆಯ ಎರಡು ನದಿಗಳಿಂದ ಪ್ರವಾಹ ಸೃಷ್ಟಿ, ಸಂಕಷ್ಟದಲ್ಲಿ ಗ್ರಾಮಸ್ಥರು
Last Updated 15 ಅಕ್ಟೋಬರ್ 2020, 16:53 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೃಷ್ಣಾ, ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವ ಪರಿಣಾಮ ನದಿಗಳು ಪ್ರವಾಹ ಸೃಷ್ಟಿಸಿವೆ.

ಕೃಷ್ಣಾ, ಭೀಮಾ ನದಿಯಂಚಿನ ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಗಾಗಿ ತತ್ತರಿಸಿವೆ. ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಗ್ರಾಮದೊಳಗೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಕೃಷ್ಣೆಗಿಂತ ಭೀಮೆ ಅಬ್ಬರ: ಈ ಬಾರಿ ಕೃಷ್ಣಾ ನದಿ ಪ್ರವಾಹ ಸೃಷ್ಟಿಸಿದ್ದರೂ ಭೀಮಾ ನದಿ ಅಬ್ಬರ ಹೆಚ್ಚಾಗಿದೆ. ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿವೆ. ಇದರಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ.

ಮಹಾರಾಷ್ಟ್ರದ ಉಜನಿ ಮತ್ತು ವೀರ್‌ ಅಣೆಕಟ್ಟೆಯಿಂದ ಭೀಮಾ ನದಿಗೆ 5.11 ಲಕ್ಷ ಕ್ಯುಸೆಕ್‌ ನೀರು ಹರಿಸಿದ್ದರಿಂದ ಹಲವಾರು ಗ್ರಾಮಗಳು ಮುಳುಗಡೆಯಾಗಿವೆ.

ನಗರ ಹೊರವಲಯದ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ರೈಲ್ವೆ ಹಳಿ ತನಕ ನೀರು ಬರುವ ಸಾಧ್ಯತೆ ಇದೆ. ಅಲ್ಲದೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.ತಾಲ್ಲೂಕಿನ ಮಲ್ಹಾರ ಗ್ರಾಮದಲ್ಲಿ‌‌ನ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಸಂಗ್ರಹಿಸಿಟ್ಟ ಅಪಾರ ಪ್ರಮಾಣದ ಹತ್ತಿ ಬೆಳೆ ನಾಶವಾಗಿದೆ.

ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಭೀಮಾನದಿಗೆ ಅಪಾರ ಪ್ರಮಾಣ ನೀರು ಹರಿಸಿದ್ದರಿಂದ ತಾಲ್ಲೂಕಿನ ಸೈದಾಪುರ ಸಮೀಪದ ಗೂಡೂರು ಮತ್ತು ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಸುತ್ತಮುತ್ತಲಿನ ಜಮೀನು ಜಲಾವೃತವಾಗಿವೆ. ಜೋಳದಡಗಿ ಗೇಟ್‌ಗಳು ತೆಗೆಯದಿದ್ದರಿಂದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.

ಅಂತರ ಜಿಲ್ಲಾ ರಸ್ತೆ ಸಂಪರ್ಕ ಕಡಿತ: ಭೀಮಾ ನದಿ ತುಂಬಿ ಹರಿಯುತ್ತಿರುವುದರಿಂದ ವಡಗೇರಾ–ರಾಯಚೂರು ರಸ್ತೆ ಮಾರ್ಗ ಬಂದ್‌ ಆಗಿದೆ. ಅಲ್ಲದೆ ಸೈದಾಪುರ–ವಡಗೇರಾ ಸಂಪರ್ಕ ರಸ್ತೆಯೂ ಬಂದ್‌ ಆಗಿದೆ.

ದ್ವೀಪವಾದ ಗ್ರಾಮಗಳು: ಯಾದಗಿರಿ, ಶಹಾಪುರ, ವಡಗೇರಾ ತಾಲ್ಲೂಕಿನ ನದಿ ಪಾತ್ರದ ಹಳ್ಳಿಗಳು ಜಲವೃತವಾಗಿ ದ್ವೀಪಗಳಂತಾಗಿವೆ.ಹುರಸಗುಂಡಗಿ, ಹೆಡಗಿಮದ್ರಾ, ನಾಯ್ಕಲ್‌ ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಭೀಮಾನದಿ ನೀರು ನುಗ್ಗಿದ್ದು, ಹೊಲ, ಗದ್ದೆಗಳಲ್ಲಿನ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ.

***
ಜಿಲ್ಲೆಯಲ್ಲಿ ಮನೆಗಳು ಕುಸಿದು ಬಡ ಜನ ಕಂಗಾಲಾಗಿದ್ದಾರೆ.ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಜನರ ಸಮಸ್ಯೆ ಆಲಿಸಲು ಮುಂದಾಗಬೇಕು.
–ಹನುಮೇಗೌಡ ಬೀರನಕಲ್,ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ

***
ಪ್ರವಾಹ ಪೀಡಿತ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಕಾಳಜಿ ಕೇಂದ್ರ ತೆಗೆದು ಪರಿಹಾರ ಒದಗಿಸಿಕೊಡಬೇಕು.
–ಚೆನ್ನಾರೆಡ್ಡಿ ಪಾಟೀಲ ತುನ್ನೂರ,ವಿಧಾನ ಪರಿಷತ್‌ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT