ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಲ್ಲಿ 161 ಮಂದಿಗೆ ನಾಯಿ ದಾಳಿ

ನಾಯಿ ಹಾವಳಿ ನಿಯಂತ್ರಿಸದ ನಗರಸಭೆ; ಆರೋಪ l ಭೀತಿಯಲ್ಲಿ ನಾಗರಿಕರು
Last Updated 20 ಜುಲೈ 2017, 7:24 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ನಾಯಿ ಹಾವಳಿ ಹೆಚ್ಚಿದ್ದು,  ಜೂನ್ ತಿಂಗಳಿನಲ್ಲೇ ಒಟ್ಟು 161 ಜನರು ನಾಯಿದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ!
ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ನಾಯಿ ಹಾವಳಿ ಮತ್ತು ದಾಳಿ ಹೆಚ್ಚಿದೆ. ಇದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಶಹಾಪುರ, ಸುರಪುರ, ಯಾದಗಿರಿ ನಗರ ಪ್ರದೇಶಗಳಿಂದಲೇ 120ಕ್ಕೂ ಹೆಚ್ಚು ನಾಯಿದಾಳಿ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾ ಆಸ್ಪತ್ರೆ ಮೂಲಗಳು ಹೇಳುತ್ತವೆ.

‘ನಗರ ಪ್ರದೇಶಗಳಲ್ಲಿ ರಾತ್ರಿ ಸಂದರ್ಭದಲ್ಲಿ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು, ಜನರು ಭಯಭೀತರಾಗಿದ್ದಾರೆ. ನಾಯಿ ಸಂತತಿ ನಿಯಂತ್ರಿಸುವಲ್ಲಿ ಸ್ಥಳೀಯ ಸಂಸ್ಥೆಗಳು ವಹಿಸಿರುವ ನಿರ್ಲಕ್ಷ್ಯದಿಂದ ನಾಯಿಗಳ ಸಂಖ್ಯೆ ವೃದ್ಧಿಸಿದೆ’ ಎಂದು ನಾಗರಿಕರಾದ ರವೀಂದ್ರ, ಸಂತೋಷ್‌ ಕುಲಕರ್ಣಿ ಹೇಳುತ್ತಾರೆ.

ಜಿಲ್ಲೆಯಲ್ಲಿ ಬೀದಿನಾಯಿ ಸಂಖ್ಯೆ ಎಷ್ಟು?: 2012ರ ಜಾನುವಾರು ಗಣತಿ ಮಾಡಿರುವ ಪಶುಪಾಲನಾ ಇಲಾಖೆ ಜಿಲ್ಲೆಯಲ್ಲಿ ಒಟ್ಟು 19,621 ನಾಯಿಗಳು ಇವೆ ಎಂದು ವರದಿ ನೀಡಿದೆ.

‘ಶಹಾಪುರ ತಾಲ್ಲೂಕಿನಲ್ಲಿ 9,111 ಹಾಗೂ ಸುರಪುರ ತಾಲ್ಲೂಕಿನಲ್ಲಿ 5,481 ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ 5,020 ನಾಯಿಗಳ ಸಂಖ್ಯೆ ಇವೆ. ಮುಂಬರುವ ನವೆಂಬರ್ ತಿಂಗಳಿನಲ್ಲಿ ಜಾನುವಾರು ಗಣತಿ ನಡೆಯಲಿದೆ. ವರ್ಷಕ್ಕೆ ಶೇ 5ರಷ್ಟು ಸಂತಾನ ಹೆಚ್ಚಿದೂ ಈಗ ಜಿಲ್ಲೆಯಲ್ಲಿ ನಾಯಿಗಳ ಸಂಖ್ಯೆ 30 ಸಾವಿರ ದಾಟಬಹುದು ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು’ ಹೇಳುತ್ತಾರೆ.

ನಾಯಿದಾಳಿ ಹೆಚ್ಚಲು ಕಾರಣಗಳೇನು?: ಯಾದಗಿರಿ ನಗರದಲ್ಲಿ ನಾಯಿದಾಳಿ ಹೆಚ್ಚಲು ಎರಡು ಮುಖ್ಯ ಕಾರಣಗಳಿವೆ.

‘ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಮಾಂಸದಂಗಡಿಗಳು ಇದ್ದು, ಮಾಂಸದ ತ್ಯಾಜ್ಯವನ್ನ ಎಲ್ಲೆಂದರಲ್ಲಿ ಎಸೆಯುತ್ತಾರೆ. ನಗರದಲ್ಲಿ ಬೀದಿದೀಪಗಳು ಹಾಳಾಗಿರುವ ಕಾರಣ ರಾತ್ರಿ ಸಂದರ್ಭದಲ್ಲಿ ನಾಯಿಗಳು ಏಕಾಏಕಿ ದಾಳಿ ನಡೆಸುತ್ತಿವೆ. ಇದರಿಂದ ರಾತ್ರಿ ಹೊತ್ತು ನಾಗರಿಕರು ಓಡಾಡಲು ಭಯಪಡುವಂತಾಗಿದೆ’ ಎಂದು ಬಸವೇಶ್ವರ ನಗರ, ಗಾಂಧಿ ನಗರದ ನಾಗರಿಕರಾದ ಶಿವಪ್ಪ ಮಗ್ಗದ, ಕಾಶೀನಾಥ ಹೇಳುತ್ತಾರೆ.

ನಾಯಿಹತ್ಯೆ ಮಾಡುವಂತಿಲ್ಲ: ‘ಸ್ಥಳೀಯ ಸಂಸ್ಥೆಗಳು ನಾಯಿಹತ್ಯೆ ಮಾಡಿ ನಾಯಿ ಸಂತತಿ ನಿಯಂತ್ರಿಸುತ್ತಿದ್ದವು. ಆದರೆ, ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ನಾಯಿಹತ್ಯೆ ಅಪರಾಧ. ಅವುಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಶಸ್ತ್ರಚಿಕಿತ್ಸೆ ಮತ್ತು ಅದರ ಆರೈಕೆ ನಡೆಸಲು ಒಂದು ನಾಯಿಗೆ ₹800 ಮೀಸಲಿಡಬೇಕು. ಆದರೆ, ಜಿಲ್ಲೆಯಲ್ಲಿ ಯಾವ ಸ್ಥಳೀಯ ಸಂಸ್ಥೆಗಳು ಬೀದಿನಾಯಿಗಳ ನಿಯಂತ್ರಣಕ್ಕೆ ಏನೂ ಕ್ರಮ ಕೈಗೊಂಡಿಲ್ಲ’ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಸಿ.ರಾಜಶೇಖರ್ ಮಾಹಿತಿ ನೀಡಿದರು.

ರೋಗಿಗೆ ₹1200ವೆಚ್ಚ: ‘ನಾಯಿ ಕಡಿತಕ್ಕೊಳಗಾದವರಿಗೆ ಚುಚ್ಚುಮದ್ದು ನೀಡಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದಿಗೆ ₹300 ಬೆಲೆ ಇದೆ. ನಾಯಿ ಕಚ್ಚಿದ ದಿನದಿಂದ ಹದಿನೈದು ದಿನಗಳೊಳಗಾಗಿ ನಾಲ್ಕು ಚುಚ್ಚುಮದ್ದು ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಂ.ಎಸ್.ಪಾಟೀಲ ಮಾಹಿತಿ ನೀಡಿದರು.

**

ಬೀದಿನಾಯಿ ಉಪಟಳ ಕಾರಣ ಅವುಗಳ ನಿಯಂತ್ರಣಕ್ಕೆ ನಗರಸಭೆ ಮುಂದಾಗಿದೆ. ಬಿಡಾಡಿ ದನ ಹಾಗೂ ನಾಯಿ ನಿಯಂತ್ರಣಕ್ಕೆ ಸದಸ್ಯರ ವಿಶೇಷ ಸಭೆ ಕರೆದು ಚರ್ಚಿಸುತ್ತೇನೆ
ಲಲಿತಾ ಅನಪೂರ
ನಗರಸಭೆ ಅಧ್ಯಕ್ಷೆ

**

19,621 ಜಿಲ್ಲೆಯಲ್ಲಿ ಒಟ್ಟು ನಾಯಿಗಳ ಸಂಖ್ಯೆ

9,111 ಶಹಾಪುರ ತಾಲ್ಲೂಕಿನಲ್ಲಿರುವ ನಾಯಿಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT