ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗರದ ಕೆಚ್ಚೆದೆಯ ಅಚ್ಚಪ್ಪಗೌಡರು

Last Updated 17 ಸೆಪ್ಟೆಂಬರ್ 2014, 6:49 IST
ಅಕ್ಷರ ಗಾತ್ರ

ಸಗರ ನಾಡು ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಉತ್ತರ ಭಾರತದಲ್ಲಿ ಸಿಪಾಯಿ ದಂಗೆ ನಡೆದಾಗ, ದಕ್ಷಿಣದಲ್ಲಿ ಅದಕ್ಕೆ ಸ್ಪಂದನೆ ನೀಡಿದ್ದೂ ಇದೇ ಸಗರನಾಡು.

ಈ ನಾಡಿನ ಅನೇಕ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ್ದಾರೆ. ಜನಾರ್ದನರಾವ ದೇಸಾಯಿ, ಜಗನ್ನಾಥರಾವ ಚಂಡ್ರಕಿ, ಜಿ.ಕೆ. ಪ್ರಾಣೇಶಾಚಾರ್ಯ, ದತ್ತಾತ್ರೇಯ ಅವರಾದಿ, ಸರ್ದಾರ ಶರಣಗೌಡ, ಎಂ. ನಾಗಪ್ಪ, ಶಿವಮೂರ್ತಿ ಸ್ವಾಮಿ ಅಳವಂಡಿ, ರಾಮಚಂದ್ರ ವೀರಪ್ಪ, ವಿಶ್ವನಾಥರಡ್ಡಿ ಮುದ್ನಾಳ, ವಿದ್ಯಾಧರ ಗುರೂಜಿ ಸೇರಿದಂತೆ ಹಲವಾರು ಮಹನೀಯರು ಹೈದರಾಬಾದ್‌ ಕರ್ನಾಟಕದ ಹೋರಾಟದಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿದ್ದಾರೆ.

ಅಂತಹ ಹೋರಾಟಗಾರರಲ್ಲಿ ಒಬ್ಬರು ಸಗರನಾಡಿನ ಅಚ್ಚಪ್ಪಗೌಡ ಸುಬೇದಾರ. ತಂದೆ ಶರಣಪ್ಪಗೌಡ, ತಾಯಿ ಗಂಗಮ್ಮ ಅವರ ಪುತ್ರನಾಗಿ ಜನಿಸಿದ ಅಚ್ಚಪ್ಪಗೌಡರು, ಓದಿದ್ದು ಉರ್ದು ಮಾಧ್ಯ­ಮದಲ್ಲಿ ಏಳನೇ ತರಗತಿ. ಕೆಲ ದಿನ ಸುರಪುರ ತಾಲ್ಲೂಕಿನ ಬೈಚವಾಳದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು.

ಸಗರದಲ್ಲಿ ಗೌಡಪ್ಪಗೌಡ ಮಾಲಿಪಾಟೀಲರು ತೀರಿ ಹೋದ ನಂತರ, ಗೌಡಪ್ಪಗೌಡರ ಮಕ್ಕಳಾದ ನಿಂಗನಗೌಡ ಹಾಗೂ ಸಿದ್ದಮ್ಮ ಅವರನ್ನು ನೋಡಿಕೊಳ್ಳುವ ಉಸ್ತುವಾರಿ ಅಚ್ಚಪ್ಪಗೌಡರ ಮೇಲೆ ಬಿತ್ತು. ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ, ಸಗರಕ್ಕೆ ಬಂದರು. ಸುತ್ತಲಿನ ಗ್ರಾಮಗಳ ಜಾಗೀರನ್ನು ಸುರಪುರದ ದೊರೆಗಳು ಅವರಿಗೆ ನೀಡಿದ್ದರು. ಸುರಪುರ ಸಂಸ್ಥಾನದ ದೊರೆಗಳಿಗೂ, ಅಚ್ಚಪ್ಪಗೌಡರಿಗೂ ಮಧುರ ಸಂಬಂಧವಿತ್ತು.

ಹೋರಾಟಕ್ಕೆ ಧುಮುಕಿದ ಗೌಡರು:  ಹೈದ­ರಾಬಾದ್ ಕರ್ನಾಟಕ ಭಾಗದಲ್ಲಿ ನಿಜಾಮರ ಆಡಳಿತದಿಂದ ರೋಸಿ ಹೋಗಿದ್ದ ಜನರು ಹೋರಾಟಕ್ಕೆ ಅಣಿಯಾಗುತ್ತಿದ್ದರು. ಹೈದ­ರಾಬಾದ್‌ ಸುತ್ತಲಿನ ಸ್ವತಂತ್ರ ಭಾರತದ ಗಡಿ ಪ್ರದೇಶ­ಗಳಲ್ಲಿ ಗಡಿ ಸೇನೆ ಶಿಬಿರಗಳನ್ನು ಆರಂಭಿಸಲಾಗಿತ್ತು.

ಸಿಂದಗಿ, ದುಧನಿ, ಗೌಡಗಾಂವ, ಮಾದನ­ಹಿಪ್ಪರಗಾ, ಗಜೇಂದ್ರಗಡ, ಇಟಗಿ, ಕಂಪ್ಲಿ, ಶಿರಗುಪ್ಪ, ಮಂತ್ರಾಲಯ, ಕಕ್ಕಳಮೇಲಿ, ಭಂಟ­ನೂರು, ಮುಂತಾದೆಡೆ ಶಿಬಿರಗಳು ನಡೆ­ಯುತ್ತಿದ್ದವು.  ಸಗರದ ಅಚ್ಚಪ್ಪಗೌಡರು, ಭಂಟನೂರು ಕ್ಯಾಂಪಿನಲ್ಲಿ, ಬ್ಯಾರಿಷ್ಟರ್‌ ವೆಂಕಟಪ್ಪ ನಾಯಕ ಅವರ ಒಡನಾಡಿಯಾಗಿ ರಜಾಕರ ವಿರುದ್ಧ ಹೋರಾಟಕ್ಕೆ ಮುಂದಾದರು. ಅಚ್ಚಪ್ಪಗೌಡರು, ನೇತಾಜಿ ಸುಭಾಷಚಂದ್ರ ಬೋಸ್‌ರ ಮಿಲಿಟರಿ ಪೋಷಾಕಿನಲ್ಲಿ ಇರುತ್ತಿದ್ದರು. ತಲೆಯ ಮೇಲೆ ಹ್ಯಾಟು, ಕಾಲಲ್ಲಿ ಬೂಟು, ಕೈಯಲ್ಲಿ ಬಂದೂಕು, ನಿತ್ಯವೂ ಪರೇಡ್‌, ಇವುಗಳ ಜೊತೆಗೆ ಅಚ್ಚಪ್ಪಗೌಡರಲ್ಲಿ ಅತಿಯಾದ ಆತ್ಮವಿಶ್ವಾಸವೂ ಇತ್ತು.

ಅಚ್ಚಪ್ಪಗೌಡರು, ಹೈದರಾಬಾದ್‌ನಿಂದ ಮದ್ದು–ಗುಂಡುಗಳನ್ನು ತರುವಾಗ ಪೊಲೀಸರ ಕೈಗೆ ಸಿಕ್ಕರು. ಆಗ ರಸೀದಿಯನ್ನೇ ನುಂಗಿದ ಅಚ್ಚಪ್ಪಗೌಡರನ್ನು ಪೊಲೀಸರು ಬಂಧಿಸಿದರು. ಮೂರು ದಿನ ಬಂಧನದಲ್ಲಿದ್ದರು. ನಂತರ ಜಗ­ನ್ನಾಥ­ರಾವ ಚಂಡ್ರಕಿ, ಕೋಲ್ಲೂರು ಮಲ್ಲಪ್ಪನವರು ಅವರನ್ನು ಬಿಡಿಸಿಕೊಂಡು ಬಂದರು.

ಸಗರ ಚಾವಟಿ ಘಟನೆ: ಸ್ಥಳೀಯ ರಜಾಕರು, ಬಳ್ಳಾರಿಯ ಉಮರ್‌ ಎನ್ನುವವನನ್ನು ಮುಂದೆ ಮಾಡಿ, ಅಚ್ಚಪ್ಪಗೌಡರನ್ನು ಹತ್ಯೆ ಮಾಡಲು ಯತ್ನಿಸಿದರು. ತಲವಾರನಿಂದ ಗೌಡರ ಮುಖಕ್ಕೆ ಏಟು ಬಿತ್ತು. ರಕ್ತ ಸೋರುತ್ತಿತ್ತು. ಗೌಡರು ಚೀರಾಡುವುದನ್ನು ಕೇಳಿದ, ಕಿರಾಣಿ ಅಂಗಡಿಯ ಅಡಿವೆಪ್ಪ ಕೆಂಭಾವಿ, ಒಂದು ಸೇರು ಕಲ್ಲನ್ನು ತಂದು, ಉಮರ್‌ಗೆ ಗುರಿ ಇಟ್ಟು ಹೊಡೆದರು. ಉಮರ್‌ ಪಲಾಯನ ಮಾಡಿದ. ಮಗ್ಗದ ಕುಣಿಯಲ್ಲಿ ಬಚ್ಚಿಟ್ಟುಕೊಂಡ. ನಂತರ ಸಿಕ್ಕ ಉಮರ್‌ನನ್ನು ಅಟ್ಟಾಸಿಕೊಂಡು ಹೊಡೆಯಲಾಯಿತು.

ಗಾಯಗೊಂಡಿದ್ದ ಅಚ್ಚಪ್ಪಗೌಡರನ್ನು ಪಲ್ಲಕ್ಕಿ­ಯಲ್ಲಿ ಕೂಡಿಸಿಕೊಂಡು ಮುಖ್ಯರಸ್ತೆಗೆ ತರಲಾ­ಯಿತು. ಅಲ್ಲಿಂದ ಬಸ್‌ ಮೂಲಕ ಹೈದ­ರಾಬಾದ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ಗೌಡರು ಅಪಾಯದಿಂದ ಪಾರಾದರು.

ಸ್ವಾತಂತ್ರ್ಯ ಹಾಗೂ ಹೈದರಾಬಾದ್ ಕರ್ನಾ­ಟಕದ ವಿಮೋಚನೆಗಾಗಿ ಹೋರಾಡಿದ ಅಚ್ಚಪ್ಪ­ಗೌಡರು, ಮನೆ ಬಿಟ್ಟು, ದೂರದ ಭಂಟನೂರಿನ ಕ್ಯಾಂಪ್‌ನಲ್ಲಿ ಸೇನೆ ಪಡೆ ಕಟ್ಟಿದರು. ಹೈದ­ರಾಬಾದ್‌ ಕರ್ನಾಟಕದ ವಿಮೋಚನೆಗೆ ತಮ್ಮ ಪಾಲನ್ನು ಕೊಟ್ಟ ಗೌಡರ ನೆನಪು ಅಚ್ಚಳಿಯದೇ ಉಳಿದಿದೆ.
1983 ರವರೆಗೆ ಅಚ್ಚಪ್ಪಗೌಡರ ಬಾಳಿ ಬದುಕಿದರು. ದೇಶಕ್ಕಾಗಿ ಹಗಲಿರುಳು ದುಡಿದ ಜೀವಕ್ಕೊಂದು ಅಪ್ಯಾಯಮಾನವಾದ ಗುರುತು ಸಿಗದೇ ಹೋದದ್ದು ಚರಿತ್ರೆಯ ದುಃಖದಾಯಕ ಸಂಗತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT