ಯಡಿಯೂರಪ್ಪ ವೈಫಲ್ಯ ತಿಳಿಸಲು ಕಾಂಗ್ರೆಸ್‌ ಜನಸಂಪರ್ಕ ಆಂದೋಲನ: ತೀ.ನಾ.ಶ್ರೀನಿವಾಸ್

7

ಯಡಿಯೂರಪ್ಪ ವೈಫಲ್ಯ ತಿಳಿಸಲು ಕಾಂಗ್ರೆಸ್‌ ಜನಸಂಪರ್ಕ ಆಂದೋಲನ: ತೀ.ನಾ.ಶ್ರೀನಿವಾಸ್

Published:
Updated:
Deccan Herald

ಶಿವಮೊಗ್ಗ: ಮಾಜಿ ಸಂಸದ ಬಿ.ಎಸ್. ಯಡಿಯೂರಪ್ಪ ಸೇರಿ ರಾಜ್ಯದ ಸಂಸದರು ಹಾಗೂ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮನೆ ಮನೆಗೆ ತಿಳಿಸುವ ಸಲುವಾಗಿ ಕಾಂಗ್ರೆಸ್‌ ಪಕ್ಷದಿಂದ ಜನಸಂಪರ್ಕ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಹೇಳಿದರು.

ಬಿ.ಎಸ್.ಯಡಿಯೂರಪ್ಪನವರು ತಮ್ಮ ಅವಧಿಯಲ್ಲಿ ಯಾವ ಕೆಲಸವನ್ನು ಮಾಡಲಿಲ್ಲ. ಕೇಂದ್ರದಿಂದ ಜಿಲ್ಲೆಗೆ ಯಾವುದೇ ಅನುದಾನ ಕೊಡಿಸಲಿಲ್ಲ. ಬಿಜೆಪಿ ಸಂಸದರು ಕೂಡ ರಾಜ್ಯಕ್ಕೆ ಕೇಂದ್ರದ ಅನುದಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಯಡಿಯೂರಪ್ಪನವರು ಸಂಸದರಾಗುವ ಮೊದಲು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ಹಾಗೂ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡಿಸುವ ಭರವಸೆ ನೀಡಿದ್ದರು. ಈ ಭರವಸೆಯನ್ನು ನಂಬಿ ಜನರು ಅವರನ್ನು ಗೆಲ್ಲಿಸಿದ್ದರು. ಆದರೆ ಗೆದ್ದ ನಂತರ ಯಡಿಯೂರಪ್ಪ ತಮ್ಮ ಮಾತು ಮರೆತಿದ್ದಾರೆ. ಅವರ ಪುತ್ರ ಬಿ.ವೈ. ರಾಘವೇಂದ್ರ ಕೂಡ ಸಂಸದರಾಗಿದ್ದಾಗ ಅಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿದ್ದ ಅರಣ್ಯ ಹಕ್ಕು ಕಾಯ್ದೆಯನ್ನು ವಿರೋಧಿಸಿದ್ದರು. ಕರಪತ್ರ ಹಂಚಿದ್ದರು. ಹೀಗೆ ಅಪ್ಪ-ಮಗ ಇಬ್ಬರೂ ಬಗರ್‌ಹುಕುಂ ಸಾಗುವಳಿದಾರರ ವಿರೋಧವಾಗಿ ಕೆಲಸ ಮಾಡಿದ್ದಾರೆ. ಇದು ರೈತರಿಗೆ ಬಗೆದ ದ್ರೋಹ ಎಂದು ಆರೋಪಿಸಿದರು.

ಅಧಿಕಾರ ಸಿಗುವ ಮೊದಲು ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಯಡಿಯೂರಪ್ಪ ಈಗ ಬಾಯಿ ಮುಚ್ಚಿಕೊಂಡು ತೆಪ್ಪಗೆ ಕುಳಿತಿದ್ದಾರೆ. ಎಲ್ಲಾ ರೈಲ್ವೆ ಯೋಜನೆಗಳು ನನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.

ಪ್ರಧಾನಮಂತ್ರಿ ಮೋದಿಯವರ ಬಾಯಲ್ಲೂ ಕೂಡ ಯಡಿಯೂರಪ್ಪ ಸುಳ್ಳು ಹೇಳಿಸಿದ್ದಾರೆ. ಜಿಲ್ಲೆಯ ಜನರ ಕನಸಾದ ತುಮರಿ ಸೇತುವೆಗೆ ಸುಳ್ಳು ಅಡಿಗಲ್ಲು ಹಾಕಿಸಿದ್ದಾರೆ. ಇದೀಗ ಕೇಂದ್ರದ ಅಧಿಕಾರಿಗಳು ಇಲ್ಲಿ ರಾಷ್ಟ್ರೀಯ ಹೆದ್ದಾರಿ ಇಲ್ಲ, ಸೇತುವೆ ಮಾಡಲು ಬರುವುದೇ ಇಲ್ಲ ಎನ್ನುತ್ತಿದ್ದಾರೆ. ಹಾಗಾಗಿ ಇದೊಂದು ಬೋಗಸ್ ಶಂಕುಸ್ಥಾಪನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಎಲ್ಲ ಆಡಳಿತ ವೈಫಲ್ಯಗಳನ್ನು ನಾವು ಜಿಲ್ಲೆಯಲ್ಲಿ ಸಂಪರ್ಕ ಸಭೆಯ ಮೂಲಕ ಮನೆ ಮನೆಗೆ ಮುಟ್ಟಿಸುತ್ತೇವೆ. ಅಕ್ಟೋಬರ್‌ 2ರಿಂದ ನವೆಂಬರ್‌ 19ರವರೆಗೆ ಜಿಲ್ಲೆಯಲ್ಲಿ ಈ ಜನಸಂಪರ್ಕ ಆಂದೋಲನ ನಡೆಯಲಿದೆ. ಒಟ್ಟು 1600 ಬೂತ್‌ಗಳಿದ್ದು, ಇದಕ್ಕಾಗಿ ಪ್ರತಿ ಬೂತ್‌ನಲ್ಲಿ 10 ಜನರ ಕಾರ್ಯಪಡೆ ರಚಿಸಲಾಗಿದೆ ಎಂದರು.

ಪ್ರಮುಖರಾದ ಚಂದ್ರಭೂಪಾಲ್, ಕಾಶಿ ವಿಶ್ವನಾಥ್, ಹಸನ್ ಅಲಿಖಾನ್, ಎಸ್.ಆರ್. ಶ್ರೀನಿವಾಸ್, ನಾಗರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !