ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣ್ಯರ ಜೈಲು ಕಾಯಿಲೆ: ತನಿಖೆಗೆ ಪೂಜಾರಿ ಆಗ್ರಹ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು:  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೈಲಿಗೆ ಹೋದ ತಕ್ಷಣ `ಕಾಯಿಲೆ~ ಬಿದ್ದಿರುವುದು `ನಾಟಕ~ದಂತೆ ಕಂಡುಬರುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಸನ್ನಿವೇಶಗಳ ಬಗ್ಗೆ ಹಾಲಿ ಹೈಕೋರ್ಟ್  ನ್ಯಾಯಮೂರ್ತಿ ಒಬ್ಬರಿಂದ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ.

ರಾಜಕಾರಣಿಗಳು ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಅವರಂತಹ ವ್ಯಕ್ತಿಗಳೇ ಜೈಲು ವಾಸ ತಪ್ಪಿಸಲು ಹೀಗೆ `ನಾಟಕ~ ಆಡುತ್ತಿರುವುದು ಅಪಾಯಕಾರಿ ಬೆಳವಣಿಗೆ. ಸರ್ಕಾರವೇ ಅವರ ಜೈಲು ವಾಸ ತಪ್ಪಿಸುವುದಕ್ಕೆ ನೆರವು ನೀಡುತ್ತಿರುವಂತಿದೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ಸ್ವಯಂ ಪ್ರೇರಣೆಯಿಂದ `ಗಣ್ಯರ ಜೈಲು ಕಾಯಿಲೆ~ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕು ಎಂದು ಅವರು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಗಣ್ಯ ವ್ಯಕ್ತಿಗಳು ಜೈಲು ವಾಸ ತಪ್ಪಿಸಲು ಆಡುವ ನಾಟಕದ ಬಗ್ಗೆ ಸಮಗ್ರ ತನಿಖೆ ನಡೆಸಿ ಅದಕ್ಕೆ ನೆರವಾದ ಇತರ ರಾಜಕಾರಣಿಗಳು, ಅಧಿಕಾರಿಗಳ ಬಣ್ಣ ಬಯಲುಗೊಳಿಸುವಂತಹ ಕೆಲಸವನ್ನು ರಾಜ್ಯದಲ್ಲಿ ಇದೀಗ ಮಾಡಬೇಕು. ಇದರಿಂದ ಇಡೀ ದೇಶಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಜನಾರ್ದನ ರೆಡ್ಡಿ ಅವರೂ ಪರಪ್ಪನ ಅಗ್ರಹಾರಕ್ಕೆ ಸೇರುತ್ತಿದ್ದರೆ ಅವರಿಗೂ ಎದೆನೋವು ಕಾಣಿಸುತ್ತಿತ್ತೋ ಏನೋ. ಆದರೆ ಅವರನ್ನು ಬಂಧಿಸಿರುವುದು ಸಿಬಿಐ ಅಧಿಕಾರಿಗಳು, ಇರುವುದು ಆಂಧ್ರ ಜೈಲಿನಲ್ಲಿ, ಹೀಗಾಗಿ ಅಲ್ಲಿ ಅಂತಹ `ನಾಟಕ~ಗಳಿಗೆಲ್ಲ ಅವಕಾಶ ಇಲ್ಲ ಎಂದು ಅವರು ಹೇಳಿದರು.

ಯಡಿಯೂರಪ್ಪ ಅವರ ಬಂಧನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ತಾವು ಕೆಪಿಸಿಸಿ ಅಧ್ಯಕ್ಷರಾಗಿರುತ್ತಿದ್ದರೆ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ ಎಂದರು. ಈ ಹಿಂದೆ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದ ಕುಮಾರಸ್ವಾಮಿ ಅವರು ತಮ್ಮ ನಿಲುವನ್ನು ಬದಲಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿನ ಬೆಳವಣಿಗೆ ಹಿನ್ನೆಲೆಯಲ್ಲಿ ಎಲ್.ಕೆ.ಅಡ್ವಾಣಿ ಅವರು ನೈತಿಕ ಹೊಣೆ ಹೊತ್ತು ತಮ್ಮ ರಥಯಾತ್ರೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT